Narasimharaju: ಹಾಸ್ಯ ಚಕ್ರವರ್ತಿಯ 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
ಇಂದು(ಜುಲೈ 24)ಕನ್ನಡ ಚಿತ್ರರಂಗ ಕಂಡ ಖ್ಯಾತ ಹಾಸ್ಯನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾಲ್ಯದಲ್ಲೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಮುಂದೆ ಚಿತ್ರರಂಗಕ್ಕೂ ಬಂದು ಪ್ರೇಕ್ಷಕರನ್ನು ರಂಜಿಸಿದರು. ಕನ್ನಡದ ಚಾರ್ಲಿ ಚಾಪ್ಲಿನ್ ಎನಿಸಿಕೊಂಡಿದ್ದ ಅವರು ಕನ್ನಡ ಚಿತ್ರರಂಗದ ಮೊದಲ ಸ್ಟಾರ್ ಕಮೆಡಿಯನ್. ಬರೀ ನಟನೆ ಮಾತ್ರವಲ್ಲೇ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿ ನರಸಿಂಹ ರಾಜು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
ಡಾ. ರಾಜ್‌ಕುಮಾರ್‌ಗೂ ಮುನ್ನ ಕನ್ನಡ ಚಿತ್ರರಂಗದಲ್ಲಿ 100 ಸಿನಿಮಾಗಳನ್ನು ಪೂರೈಸಿದ ನಟ ನರಸಿಂಹ ರಾಜು. ಜುಲೈ 24, 1923ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ ಅವರು ಜನಿಸಿದರು. ಬಾಲ್ಯದಿಂದಲೇ ಕಲೆಯನ್ನು ಬದುಕಾಗಿಸಿಕೊಂಡರು. ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಹಾಸ್ಯ ಪಾತ್ರಗಳಲ್ಲಿ ನಟಿಸಿದರು. ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪೆನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪೆನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪೆನಿ ಹೀಗೆ ಹಲವು ನಾಟಕ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು.

'ಬೇಡರ ಕಣಪ್ಪ' ಚಿತ್ರದ ಮೂಲಕ ಡಾ. ರಾಜ್‌ಕುಮಾರ್ ನಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಅದೇ ಸಿನಿಮಾದಲ್ಲಿ ಕಾಶೀನಾಥ ಶಾಸ್ತ್ರಿ ಪಾತ್ರದಲ್ಲಿ ನರಸಿಂಹ ರಾಜು ಚಿತ್ರರಂಗ ಪ್ರವೇಶವಾಯಿತು. ಮುಂದೆ 'ಸ್ಕೂಲ್ ಮಾಸ್ಟರ್', ರಣಧೀರ ಕಂಠೀರವ, ಜೇನು ಗೂಡು, ವೀರ ಕೇಸರಿ, ಕಸ್ತೂರಿ ನಿವಾಸ, ಶರಪಂಜರ, ಗಂಧದಗುಡಿ, ಕಿಟ್ಟುಪುಟ್ಟು, ಕಿಲಾಡಿ ಜೋಡಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತಮ್ಮ 56ನೇ ವಯಸ್ಸಿನಲ್ಲಿ 1979ರ ಜುಲೈ 11ರಂದು ಮುಂಜಾನೆ 4.30ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು.
ಈ ಬಾರಿ ನರಸಿಂಹ ರಾಜು ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು ನರಸಿಂಹರಾಜು ಜನ್ಮ ಶತಮಾನೋತ್ಸವ ಎಂಬ ಹೆಸರಿನಿಂದ ವರ್ಷವಿಡೀ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಮುಂದಾಗಿದ್ದಾರೆ. ಹನ್ನೆರಡು ಜನರ ತಂಡ ಎರಡು ಟ್ರಕ್‌ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್‌ನಲ್ಲಿ ಎಲ್‌ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.
ಇನ್ನು ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಈಗಲೂ ನಾಟಕ ಕಂಪನಿಗಳಿದೆ. ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ಜನಪ್ರಿಯ ನಾಟಕಗಳನ್ನು ಇಡೀ ದಿನ ಆಯೋಜಿಸುವ ಯೋಜನೆ ಹೊಂದಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಲಿದ್ದಾರೆ.


Click it and Unblock the Notifications











