ಇನ್ಮುಂದೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ | Filmibeat Kannada
ಚಿತ್ರಮಂದಿರಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಸಿನಿಮಾ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಿದ್ದ ಸುಪ್ರಿಂ ಕೋರ್ಟ್ ಈಗ ತನ್ನ ಆದೇಶವನ್ನು ಪರಿಷ್ಕರಣೆ ಮಾಡಿದೆ.
ಸೋಮವಾರವಷ್ಟೇ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸುವಂತೆ ಸುಪ್ರಿಂ ಕೋರ್ಟ್ ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಈ ಅರ್ಜಿಯನ್ನ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಬದಲಾವಣೆ ತಂದಿದೆ.
ಈ ಹಿಂದೆ 2016ರ ನವೆಂಬರ್ 30ರಂದು ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಈ ವೇಳೆ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು.
ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ: ಕಮಲ್ ಹಾಸನ್ ಬೇಸರ.!
ನಂತರ ವಿಚಾರಣೆಯೊಂದರ ವೇಳೆ ದೇಶಪ್ರೇಮದ ಹೆಸರಿನಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದು ನೈತಿಕ ಪೊಲೀಸ್ ಗಿರಿ ಆಗುತ್ತದೆ. ಹಾಗಾಗಿ ತನ್ನ ಆದೇಶ ಮಾರ್ಪಾಡಿಗೆ ಸಿದ್ದವೆಂಬ ಸುಳಿವನ್ನು ಸುಪ್ರಿಂ ಕೋರ್ಟ್ ನೀಡಿತ್ತು. ಈ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸುವಂತೆಯೂ ಅದು ಕೇಂದ್ರಕ್ಕೆ ಸಲಹೆ ನೀಡಿತ್ತು.
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಸ್ಯಾಂಡಲ್ ವುಡ್ ಮಂದಿ ಹೇಳಿದ್ದೇನು?
ಇದೀಗ ಕೇಂದ್ರ ಸರಕಾರ ರಾಷ್ಡ್ರಗೀತೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ಜು ರೂಪಿಸಲು ಸಮಿತಿಯನ್ನು ರಚಿಸಿದೆ. ಹೀಗಾಗಿ ಸಮಿತಿ ವರದಿ ನೀಡುವವರೆಗೆ ಆದೇಶದಲ್ಲಿ ಬದಲಾವಣೆ ಮಾಡುವಂತೆ ಸುಪ್ರಿಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಕೇಂದ್ರದ ಮನವಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯವಲ್ಲ ಎಂಬ ಆದೇಶ ನೀಡಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.