ಡಿ.3ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ 'ಅಕ್ಷಿ' ಸಿನಿಮಾ ಬಿಡುಗಡೆ: ಅಪ್ಪುವಿಗಿದೆ ಸಿನಿಮಾದೊಂದಿಗೆ ನಂಟು
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದೇ ಅಪರೂಪ. ಎಲ್ಲೋ ಕೆಲವು ಚಲನಚಿತ್ರೋತ್ಸವಗಳಲ್ಲಿ ಕೆಲ ಪ್ರದರ್ಶನಕಂಡು ಕೆಲವು ಪ್ರಶಸ್ತಿಗಳನ್ನು ಪಡೆದುಕೊಂಡು ಅದೃಷ್ಟವಿದ್ದರೆ ದೂರದರ್ಶನದಲ್ಲಿ ಒಮ್ಮೆ ಪ್ರದರ್ಶನಗೊಂಡು ಮರೆಯಾಗುತ್ತವೆ.
ಆದರೆ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾ 'ಅಕ್ಷಿ' ಹಾಗಾಗುತ್ತಿಲ್ಲ. ಅದಕ್ಕೆ ಜನಪ್ರಿಯ ವಿತರಕ, ನಿರ್ಮಾಪಕ ಜಾಕ್ ಮಂಜು ಬೆಂಬಲ ದೊರೆತಿದೆ. 'ಅಕ್ಷಿ' ಸಿನಿಮಾವು ಡಿಸೆಂಬರ್ 03ನೇ ತಾರೀಖಿನಂದು ರಾಜ್ಯದಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ವಿತರಣೆ ಮಾಡುತ್ತಿರುವುದು ಸುದೀಪ್‌ರ ಆಪ್ತ , ನಿರ್ಮಾಪಕ, ವಿತರಕ ಜಾಕ್ ಮಂಜು.
2019 ನೇ ಸಾಲಿನ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದ 'ಅಕ್ಷಿ'ಗೂ ಇತ್ತೀಚೆಗಷ್ಟೆ ನಮ್ಮನ್ನಗಲಿದೆ ಅಪ್ರತಿಮಾ ಸಿನಿಮಾ ಪ್ರೇಮಿ, ನಟ, ನಿರ್ಮಾಪಕ ಪುನೀತ್ ರಾಜ್‌ಕುಮಾರ್ ಅವರಿಗೂ ಮಹತ್ತರವಾದ ಸಂಬಂಧವೊಂದಿದೆ.

'ಅಕ್ಷಿ' ಸಿನಿಮಾವು ನೇತ್ರದಾನದ ಕತೆಯನ್ನಿಟ್ಟುಕೊಂಡು ಕಟ್ಟಲಾಗಿರುವ ಸಿನಿಮಾ. ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಸ್ವತಃ ಪುನೀತ್ ರಾಜ್‌ಕುಮಾರ್ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಅವರನ್ನು ಕೇಳಿದ್ದರಂತೆ. ''ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ಅವರನ್ನು ಭೇಟಿಯಾಗಿದ್ದೆವು, ನಾನು ಸಿನಿಮಾ ನೋಡಬೇಕು ಎಂದು ಅವರು ಆಸೆ ಪಟ್ಟರು ಅಂತೆಯೇ ನಾವು ಅವರಿಗೆ ಖಾಸಗಿ ಲಿಂಕ್ ಒಂದನ್ನು ನೀಡಿದೆವು. ಆದರೆ ಅವರು ಸಿನಿಮಾ ನೋಡಿದ್ದಾರೊ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸು ಹೇಳುತ್ತಿದೆ ಅವರು ಸಿನಿಮಾ ನೋಡಿದ್ದಾರೆಂದು. ಒಂದೊಮ್ಮೆ ಅವರು ನೋಡಿಲ್ಲವಾದರೆ ಅವರು ದಾನ ಮಾಡಿರುವ ಕಣ್ಣುಗಳಾದರೂ 'ಅಕ್ಷಿ' ಸಿನಿಮಾವನ್ನು ನೋಡುತ್ತವೆ'' ಎಂದು ಸುದ್ದಿಗೋಷ್ಠಿಯಲ್ಲಿ ಭಾವುಕರಾದರು ಕಲಾದೇಗುಲ ಶ್ರೀನಿವಾಸ್.
ಈ ಸಿನಿಮಾವನ್ನು ವಿತರಣೆ ಮಾಡುತ್ತಿರುವ ಜಾಕ್ ಮಂಜು, ''ನನಗೆ ಸಿನಿಮಾ ಇಷ್ಟವಾಯಿತು, ಈ ಸಿನಿಮಾವನ್ನು ಹೆಚ್ಚಿನ ಜನರಿಗೆ ತೋರಿಸಬೇಕೆಂಬ ಉದ್ದೇಶದಿಂದ ಸಿನಿಮಾ ವಿತರಣೆ ಮಾಡುತ್ತಿದ್ದೇನೆ. ಸಿನಿಮಾ ನೋಡುವಾಗ ನನಗೆ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರುಗಳೇ ಪದೇ-ಪದೇ ನೆನಪಾಗುತ್ತಿದ್ದರು. ಈ ಸಿನಿಮಾವನ್ನು ನೋಡಿದ ಬಳಿಕ ನನ್ನ ಮಗನೇ ನನ್ನ ಬಳಿ ಬಂದು ನೇತ್ರದಾನ ಮಾಡುವುದಾಗಿ ಹೇಳಿದ'' ಎಂದರು ಜಾಕ್ ಮಂಜು.
''ಪ್ರಶಸ್ತಿ ವಿಜೇತ ಸಿನಿಮಾಗಳಿಗೆ ಚಿತ್ರಮಂದಿರ ನೀಡಿ ಎಂದು ಕೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ಕಮರ್ಶಿಯಲ್ ಸಿನಿಮಾಗಳಿಗೂ ಜನ ಬರದ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಪ್ರಶಸ್ತಿ ವಿಜೇತ ಸಿನಿಮಾ ಎಂದು ಬೇರೆ ದೃಷ್ಟಿಯಲ್ಲಿ ನೋಡುವ ಅಗತ್ಯವಿಲ್ಲ'' ಎಂದಿದ್ದಾರೆ ಜಾಕ್ ಮಂಜು.
'ಅಕ್ಷಿ' ಸಿನಿಮಾಕ್ಕೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಸಿನಿಮಾವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಾಮಿಡಿ ಮಿಲಾಡಿಗಳು ಖ್ಯಾತಿಯ ಜಿಜಿ ಗೌಡ ಅಲಿಯಾಸ್ ಗೋವಿಂದೇಗೌಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬಹಳ ಗಂಭೀರ ಪಾತ್ರವಂತೆ.


Click it and Unblock the Notifications











