National Film Awards 2023: ಅಲ್ಲು ಅರ್ಜುನ್ ಫ್ಯಾನ್ಸ್ ಫುಲ್ ಡ್ಯಾನ್ಸ್!
ಬಹು ನಿರೀಕ್ಷಿತ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗುರುವಾರ (ಆಗಸ್ಟ್ 24) ಘೋಷಿಸಲಾಗಿದೆ. 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತೆಲುಗು ನಟ ಅಲ್ಲು ಅರ್ಜುನ್‌ಗೆ ನೀಡಲಾಗಿದೆ. ಪುಷ್ಪ: ದಿ ರೈಸ್‌ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ನಟ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಮನೆಗೆ ತಂದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ಪ್ರಶಸ್ರಿ ಘೋಷಣೆ ಬೆನ್ನಲ್ಲೇ ನಟ ಮತ್ತು ಅವರ ಅಭಿಮಾನಿಗಳು, ಕುಟುಂಬಸ್ಥರು ಸಂತಸ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಭಾವಕರಾಗಿರುವ ಕ್ಷಣಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ಅಲ್ಲು ಅರ್ಜುನ್ ಅವರ ಕುಟುಂಬ ಮತ್ತು ನಿರ್ದೇಶಕ ಸುಕುಮಾರ್ ಸೇರಿದಂತೆ ಪುಷ್ಪಾ ತಂಡ ನಟನನ್ನು ಸುತ್ತುವರೆದಿದ್ದು, ಅವರ ಹೆಸರು ಘೋಷಣೆಯಾದ ತಕ್ಷಣ ಕೊಠಡಿಯಲ್ಲಿ ಹರ್ಷೋದ್ಗಾರ ಮೊಳಗಿದೆ. ನಟನನ್ನು ಅಪ್ಪಿಕೊಂಡು ಭಾವುಕರಾಗಿ ಕುಟುಂಬಸ್ಥರು ಶುಭಾಶಯ ಹೇಳಿದ್ದಾರೆ.
ಅವರ ಕುಟುಂಬ ಮತ್ತು ಸ್ನೇಹಿತರು ಸಂಭ್ರಮಾಚರಣೆ ವೇಳೆ ನಿರ್ದೇಶಕ ಸುಕುಮಾರ್ ಅವರನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ತೀರ್ಪುಗಾರರು ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಿದ್ದಾರೆ. ಕಳೆದ ಜನವರಿ 2021 ರಲ್ಲಿ ಸರ್ಟಿಫೈಡ್ ಆಗಿದ್ದ, ಬಿಡುಗಡೆಯಾಗಿದ್ದ ಸಿನಿಮಾಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.

ಗುರುವಾರ ಸಂಜೆ 5 ಗಂಟೆಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪಿಐಬಿ ಇಂಡಿಯಾ ಮತ್ತು I&B ಸಚಿವಾಲಯದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮತ್ತು ಅವರ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ಲೈವ್ ಆಗಿ ಪ್ರಶಸ್ತಿ ಪ್ರಕಟಿಸಲಾಗಿದೆ.
ಪ್ರಶಸ್ತಿ ಬಂದ ಬಳಿಕ ಅಲ್ಲು ಅರ್ಜುನ್‌ಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದು, ನಟ ಜೂನಿಯರ್ ಎನ್‌ಟಿಆರ್ ಟ್ವೀಟ್ ಮಾಡಿದ್ದಾರೆ. "ಅಭಿನಂದನೆಗಳು ಅಲ್ಲು ಅರ್ಜುನ್ ಬಾವ. ಪುಷ್ಪಾ ಸಿನಿಮಾಗಾಗಿ ಎಲ್ಲಾ ಯಶಸ್ಸು ಮತ್ತು ಪ್ರಶಸ್ತಿಗಳಿಗೆ ನೀವು ಅರ್ಹರು" ಎಂದು ಹೇಳಿದ್ದಾರೆ.
ಚಿತ್ರರಂಗದ ಹಲವರು, ಅಭಿಮಾನಿಗಳು ನಟನಿಗೆ ಶುಭ ಕೋರಿದ್ದಾರೆ. "ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಅಭಿನಂದನೆಗಳು. ಇನ್ನೂ ಬಹಳ ದೂರ ಸಾಗಬೇಕಾಗಿದೆ" ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ 2020 ರ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮಿಳಿನ 'ಸೂರರೈ ಪೊಟ್ರು' ಸಿನಿಮಾ ನಟನೆಗಾಗಿ ಸೂರ್ಯ ಮತ್ತು ಹಿಂದಿ ಚಲನಚಿತ್ರ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಚಿತ್ರದಲ್ಲಿನ ನಟನೆಗಾಗಿ ಅಜಯ್ ದೇವಗನ್ ಹಂಚಿಕೊಂಡಿದ್ದರು.


Click it and Unblock the Notifications










