National Awards 2023: ರಾಷ್ಟ್ರ ಪ್ರಶಸ್ತಿಯೇ ಮೋಸ; ಕನ್ನಡ, ತಮಿಳಿನ ಇವರಿಗೆ ಪ್ರಶಸ್ತಿ ಬಾರದ್ದಕ್ಕೆ ಕಿಡಿಕಾರಿದ ಸಿನಿಮಂದಿ!
ನಿನ್ನೆ ( ಆಗಸ್ಟ್ 24 ) ಪ್ರತಿಷ್ಟಿತ ರಾಷ್ಡ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಹಾಗೂ ಅನಿರುದ್ಧ್ ಜತ್ಕರ್ ನಿರ್ದೇಶನದ ಬಾಳೇ ಬಂಗಾರ ( ನಾನ್ ಫೀಚರ್ ಕೆಟಗರಿ ) ಸಿನಿಮಾಗಳಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಗಳು ಲಭಿಸಿವೆ. ತೆಲುಗಿನ ಆರ್ ಆರ್ ಆರ್ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ನಟ ಅಲ್ಲು ಅರ್ಜುನ್ ಪುಷ್ಪ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು ಹಾಗೂ ಮಿಮಿ ಚಿತ್ರದ ನಟನೆಗಾಗಿ ಕಿಯಾರಾ ಅಡ್ವಾಣಿ ಮತ್ತು ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿನ ನಟನೆಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇನ್ನು ಕನ್ನಡದ ಚಾರ್ಲಿಗೆ ಬೆಸ್ಟ್ ಕನ್ನಡ ಚಿತ್ರ ಪ್ರಶಸ್ತಿ ದಕ್ಕಿದರೆ, ಹಿಂದಿಯ ಸರ್ದಾರ್ ಉದಮ್, ಗುಜರಾತಿನ ಚೆಲ್ಲೋ ಶೋ, ಮರಾಠಿಯ ಏಕ್ದ ಕಾಯ್ ಜಾಲ, ಮಲಯಾಳಂನ ಹೋಮ್ ಹಾಗೂ ತೆಲುಗಿನ ಉಪ್ಪೆನಾ ಚಿತ್ರಗಳಿಗೆ ಅತ್ಯುತ್ತಮ ಭಾಷಾವಾರು ಪ್ರಶಸ್ತಿ ಲಭಿಸಿತು. ಹೀಗೆ ವಿವಿಧ ಕೆಟಗರಿಗಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಸಂಪೂರ್ಣವಾಗಿ ಪ್ರಕಟಿಸಿದ ನಂತರ ಎಂದಿನಂತೆ ಈ ಬಾರಿಯೂ ಸಹ ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ.

ಹೌದು, ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ಗೆ ನೀಡಿದ್ದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲು ಅರ್ಜುನ್‌ಗಿಂತ ಚೆನ್ನಾಗಿ ನಟಿಸಿದ ಹಲವಾರು ನಟರಿದ್ದರೂ ಸಹ ಅವರಿಗೆ ಈ ಪ್ರಶಸ್ತಿಯನ್ನುನ ನೀಡದೇ ಕಡೆಗಣಿಸಿ ಮೋಸ ಮಾಡಲಾಗಿದೆ ಎಂದು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಇಂತಹ ಕಲಾವಿದನಿಗೆ ಹಾಗೂ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು, ಇವುಗಳನ್ನು ಬಿಟ್ಟು ಬೇರೆ ಚಿತ್ರಗಳಿಗೆ ಪ್ರಶಸ್ತಿ ಕೊಟ್ಟದ್ದು ತಪ್ಪು ಎಂದು ಟೀಕಿಸುತ್ತಿರುವ ಪ್ರತಿಯೊಬ್ಬರೂ ಸಹ ಹೆಚ್ಚಾಗಿ ಉಲ್ಲೇಖಿಸುತ್ತಿರುವುದು ಕನ್ನಡದ 'ಗರುಡ ಗಮನ ವೃಷಭ ವಾಹನ' ಹಾಗೂ ತಮಿಳಿನ ಜೈ ಭೀಮ್, ಕರ್ಣನ್ ಹಾಗೂ ಸರ್ಪಟ್ಟ ಪರಂಬರೈ ಸಿನಿಮಾಗಳ ಬಗ್ಗೆ.
ಹೌದು, 2021ರಲ್ಲಿ ತೆರೆಗೆ ಬಂದ ಈ ಮೂರೂ ಚಿತ್ರಗಳಲ್ಲಿಯೂ ಸಹ ನಾಯಕರ ನಟನೆ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದ್ದಂತಹವು. ಆದರೆ ಇವರನ್ನು ಕಡೆಗಣಿಸಿ ಹೇಗೆ ಅಲ್ಲು ಅರ್ಜುನ್‌ಗೆ ಪ್ರಶಸ್ತಿ ನೀಡಿದ್ರೋ ದೇವರೇ ಬಲ್ಲ ಎಂದು ನೆಟ್ಟಿಗರು ವ್ಯಂಗ್ಯವಾಡಿ ಬೇಸರ ಹೊರಹಾಕಿದ್ದಾರೆ. ಅದರಲ್ಲಿಯೂ ಗರುಡ ಗಮನ ವೃಷಭ ವಾಹನ ಚಿತ್ರದ ನಟನೆಗೆ ರಾಜ್ ಬಿ ಶೆಟ್ಟಿಗೆ ಯಾವುದೇ ಪ್ರಶಸ್ತಿ ಬಾರದೇ ಇರುವುದರ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅತ್ತ ತಮಿಳಿನ ಜೈ ಭೀಮ್ ಚಿತ್ರದಲ್ಲಿನ ಸೂರ್ಯ ನಟನೆಗೆ, ಕರ್ಣನ್ ಚಿತ್ರದಲ್ಲಿನ ಧನುಷ್ ನಟನೆಗೆ ಹಾಗೂ ಸರ್ಪಟ್ಟ ಪರಂಬರೈ ಚಿತ್ರದಲ್ಲಿನ ಆರ್ಯ ನಟನೆಗೆ ಪ್ರಶಸ್ತಿ ಬರಬೇಕಿತ್ತು ಎಂದು ಬೇಸರ ವ್ಯಕ್ತವಾಗಿದೆ. ಈ ನಾಲ್ಕೂ ಚಿತ್ರಗಳ ಕಥೆಯೂ ಸಹ ಚೆನ್ನಾಗಿದ್ದು ಯಾವುದಾದರೊಂದು ಚಿತ್ರಕ್ಕೆ ಅತ್ಯುತ್ತಮ ಚಿತ್ರ ಕೆಟಗರಿ ಅಡಿಯಲ್ಲಿ ಪ್ರಶಸ್ತಿಯನ್ನಾದರೂ ನೀಡಬಹುದಿತ್ತಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











