'ನವಗ್ರಹ' ರೀ-ರಿಲೀಸ್; ಕ್ಲೈಮ್ಯಾಕ್ಸ್‌ನಲ್ಲಿ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕಾದಿದ್ಯಾ?
ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದೀಗ ಸೂಪರ್ ಹಿಟ್ 'ನವಗ್ರಹ' ಸಿನಿಮಾ ರೀ-ರಿಲೀಸ್‌ಗೆ ಸಜ್ಜಾಗಿದೆ. ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. 'ರಾಯಲ್' ಚಿತ್ರದ ನಟ ವಿರಾಟ್ ಹಾಗೂ ನಟಿ ಸಂಜನಾ ಇತ್ತೀಚೆಗೆ 'ನವಗ್ರಹ' ಚಿತ್ರತಂಡದ ಸಂದರ್ಶನ ಮಾಡಿದ್ದರು. ಈ ವೇಳೆ ಚಿತ್ರದ ಬಗ್ಗೆ ಸಾಕಷ್ಟು ಸಂಗತಿ ರಿವೀಲ್ ಆಗಿದೆ.
'ನವಗ್ರಹ' ಮರುಬಿಡುಗಡೆಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ಥಿಯೇಟರ್ ಮುಂದೆ ಸೆಲೆಬ್ರೇಷನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. 2008ರಲ್ಲಿ ತೆರೆಗೆ ಬಂದಿದ್ದ 'ನವಗ್ರಹ' ಸಿನಿಮಾ ಸಖತ್ ಸದ್ದು ಮಾಡಿತ್ತು. ದಿನಕರ್ ತೂಗುದೀಪ ನಿರ್ದೇಶನದ ಚಿತ್ರವನ್ನು ಸ್ವತಃ ದರ್ಶನ್ ನಿರ್ಮಿಸಿದ್ದರು.

16 ವರ್ಷಗಳ ಹಿಂದೆ ನವೆಂಬರ್ 7ಕ್ಕೆ 'ನವಗ್ರಹ' ಸಿನಿಮಾ ತೆರೆಗೆ ಬಂದಿತ್ತು. ಇದೇ ನವೆಂಬರ್ 8ಕ್ಕೆ ಸಿನಿಮಾ ಮತ್ತೆ ತೆರೆಗಪ್ಪಳಿಸುತ್ತಿದೆ. ಹೊಸ ರೂಪದಲ್ಲಿ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ, ಕಾಮಕ್ಯ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಬಹಳ ದಿನಗಳಿಂದ ಅಭಿಮಾನಿಗಳುಯ 'ನವಗ್ರಹ- 2' ಮಾಡುವಂತೆ ಕೇಳುತ್ತಲೇ ಇದ್ದಾರೆ. ಈ ಬಗ್ಗೆ ದಿನಕರ್ ಕೂಡ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಅಂತಹ ಆಲೋಚನೆ ಇದೆ. ಆದರೆ ಯಾವಾಗ ಅನ್ನೋದು ಗೊತ್ತಿಲ್ಲ ಎಂದು ಹೇಳುತ್ತಾ ಬರ್ತಿದ್ದಾರೆ. 'ನವಗ್ರಹ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸತ್ತು ಬಿದ್ದ ಜಗ್ಗು(ದರ್ಶನ್) ಕಣ್ಣು ಬಿಡುವ ಝಲಕ್ ಇದೆ. ಇದನ್ನು ನೋಡಿದಾಗಲೇ ಸೀಕ್ವೆಲ್ ಬರುತ್ತದೆ ಎಂದು ಕೆಲವರು ಫಿಕ್ಸ್ ಆಗಿಬಿಟ್ಟಿದ್ದರು. ಆದರೆ ಆ ರೀತಿಯ ಸೀನ್ ಇಟ್ಟಿದ್ದಕ್ಕೆ ಕಾರಣ ಏನು ಎಂದು ದಿನಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಪ್ರಪಂಚದಲ್ಲಿ ಒಳ್ಳೆಯದು ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಕೆಟ್ಟದು ಎನ್ನುವುದು ಇರುತ್ತದೆ ಎಂದು ಹೇಳಲು ಕ್ಲೈಮ್ಯಾಕ್ಸ್‌ನಲ್ಲಿ ಆ ರೀತಿ ದೃಶ್ಯ ಇಟ್ಟಿದ್ದೆ. ಆದರೆ ದರ್ಶನ್ ಕಣ್ಣು ಬಿಟ್ಟಿದ್ದಾರೆ, ಅಂದ್ರೆ ಸತ್ತಿಲ್ಲ ಹಾಗಾಗಿ ಸೀಕ್ವೆಲ್ ಬರುತ್ತೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಹಾಗಾಗಿ ಪಾರ್ಟ್-2 ಮಾಡುವಂತಾಗಿದೆ ಎಂದು ದಿನಕರ್ ಹೇಳಿದ್ದರು. ಇನ್ನು ನಟ ದರ್ಶನ್ ಕೂಡ ತಮಗೆ ಸೀಕ್ವೆಲ್ ಸಿನಿಮಾಗಳ ಬಗ್ಗೆ ಆಸಕ್ತಿ ಇಲ್ಲ. ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಿಮುಗಿಸಬೇಕು ಎಂದು ಹೇಳಿದ್ದರು.

ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ದರ್ಶನ್ 'ನವಗ್ರಹ'-2 ಮಾಡೋಣ ಎಂದು ದಿನಕರ್ ಹೇಳ್ತಿದ್ದಾನೆ, ನೊಡೋಣ ಅದೊಂದು ಮಾಡಬೇಕು ಎಂದು ಹೇಳಿದ್ದರು. ಹಾಗಾಗಿ 'ನವಗ್ರಹ' ಸೀಕ್ವೆಲ್ ಮಾಡಲು ದರ್ಶನ್ ಸಹ ಒಪ್ಪುತ್ತಾರೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇದೆಲ್ಲದರ ನಡುವೆ 'ನವಗ್ರಹ' ಸಿನಿಮಾ ಮರುಬಿಡುಗಡೆ ಆಗುತ್ತಿದೆ. ಇಂತಹ ಸಮಯದಲ್ಲಿ ಮತ್ತೆ ಸೀಕ್ವೆಲ್ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಪಾರ್ಟ್-2 ಬಗ್ಗೆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸುಳಿವು ಕೊಡ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ.
ಇತ್ತೀಚೆಗೆ ಸಂದರ್ಶನದಲ್ಲಿ ದಿನಕರ್ ಮಾತನಾಡುತ್ತಾ ಯಾವಾಗ ಬೇಕಾದರೂ 'ನವಗ್ರಹ'-2 ಬರಬಹುದು ಎಂದಿದ್ದರು. ಹಾಗಾಗಿ ಸಿನಿಮಾ ರೀ-ರಿಲೀಸ್ ವೇಳೆ ಕ್ಲೈಮ್ಯಾಕ್ಸ್ ಅದಕ್ಕೆ ಲಿಂಕ್ ಕೊಟ್ಟು ಏನಾದರೂ ಸರ್‌ಪ್ರೈಸ್ ಪ್ಲ್ಯಾನ್ ಮಾಡಿದ್ದಾರಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಈಗಾಗಲೇ ಪ್ರಸನ್ನ ಥಿಯೇಟರ್ ಶುಕ್ರವಾರ ಬೆಳಗ್ಗೆ 7 ಗಂಟೆ ಫ್ಯಾನ್ಸ್ ಶೋ ಟಿಕೆಟ್ ಸೋಲ್ಡ್‌ಔಟ್ ಆಗಿದೆ.
'ನವಗ್ರಹ' ಕನ್ನಡ ಚಿತರಂಗದಲ್ಲಿ ವಿಭಿನ್ನ ಪ್ರಯತ್ನ. ಖ್ಯಾತ ಖಳನಟರ ಮಕ್ಕಳು ಲೀಡ್ ರೋಲ್‌ಗಳಲ್ಲಿ ನಟಿಸಿದ್ದ ಸಿನಿಮಾ. ಮೈಸೂರು ಅರಮನೆಯ ಅಂಬಾರಿಯನ್ನು ಕದಿಯಲು ಪ್ರಯತ್ನಿಸುವ ಕಳ್ಳರ ಕಥೆ ಇದು. ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಚಿತ್ರದ ಆಲ್ಬಮ್ ಇವತ್ತಿಗೂ ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿದೆ.


Click it and Unblock the Notifications











