ದರ್ಶನ್ ಮಾತು ಕೇಳಿದ್ಮೇಲೆ ಫ್ಯಾನ್ಸ್ 'ನವಗ್ರಹ- 2' ಮೇಲೆ ಆಸೆ ಇಟ್ಟುಕೊಳ್ಳೋದು ವ್ಯರ್ಥ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ಇನ್ನು ಕೇಕ್ ಕೂಡ ಕತ್ತರಿಸಿ ಚಿತ್ರತಂಡ ಸಂಭ್ರಮಿಸಿದೆ. ನಟ ದರ್ಶನ್ ಸದ್ಯ 'D56' ಸಿನಿಮಾ ಕಡೆ ಮುಖ ಮಾಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಆರ್ಭಟ ನಡೀತಿದೆ. ಕಥೆಯನ್ನು ಹಿಗ್ಗಿಸಿ ಎರಡೆರಡು ಸಿನಿಮಾ ಮಾಡಿ ಬಾಕ್ಸಾಫೀಸ್ ದೋಚುವ ಲೆಕ್ಕಾಚಾರ ಜೋರಾಗಿದೆ. ಈಗಾಗಲೇ ಆ ಹಾದಿಯಲ್ಲಿ 'ಬಾಹುಬಲಿ', 'KGF' ಸರಣಿ ಸಿನಿಮಾಗಳು ಹಿಟ್ ಆಗಿದೆ. 'ಪುಷ್ಪ'- 2, 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿವೆ. ಇನ್ನು 'ಕಬ್ಜ' ಸೇರಿದಂತೆ ಒಂದಷ್ಟು ಸಿನಿಮಾಗಳು ಮುಂದಿನ ದಿನಗಳಲ್ಲಿ ಎರಡೆರಡು ಭಾಗಗಳಾಗಿ ತೆರೆಗೆ ಬರೋದು ಪಕ್ಕಾ ಆಗಿದೆ. ಮತ್ತೊಂದು ಕಡೆ ದರ್ಶನ್ ನಟನೆಯ 'ನವಗ್ರಹ' ಚಿತ್ರದ ಸೀಕ್ವೆಲ್ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇತ್ತೀಚಿನ ನಟ ದರ್ಶನ್ ಸೀಕ್ವೆಲ್ ಸಿನಿಮಾಗಳನ್ನು ಮಾಡುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಗಳನ್ನು ಕೇಳಿದ ಮೇಲೆ ಅಭಿಮಾನಿಗಳು ಆ ಆಸೆಯನ್ನು ಬಿಟ್ಟುಬಿಡುವುದೇ ಒಳ್ಳೆಯದು ಎನಿಸುತ್ತದೆ.

'ನವಗ್ರಹ' ಸೀಕ್ವೆಲ್ ಮಾಡಲ್ಲ
ಆರ್‌ಜೆ ಸುನೀಲ ಫ್ರಾಂಕ್ ಕಾಲ್ಸ್ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ನಟ ದರ್ಶನ್ ಮಾತನಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳನ್ನು ನಿರೂಪಕ ದರ್ಶನ್ ಮುಂದೆ ಇಟ್ಟಿದ್ದರು. ಸಾಕಷ್ಟು ಜನ 'ನವಗ್ರಹ' ಸೀಕ್ವೆಲ್ ಮಾಡ್ತೀರಾ ಎನ್ನುವ ಪ್ರಶ್ನೆ ಕೇಳ್ತಿದ್ದಾರೆ ಎಂದಿದ್ದಕ್ಕೆ ನಟ ದರ್ಶನ್, "ನಾನು ಸೀಕ್ವೆಲ್ ಸಿನಿಮಾಗಳನ್ನು ಮಾಡುವುದಿಲ್ಲ. ನನಗೆ ಇಂಟ್ರೆಸ್ಟ್ ಇಲ್ಲ. ಒಂದು ಸಿನಿಮಾವನ್ನು ಸೀಕ್ವೆಲ್ ಮಾಡಿದಾಗ ಕಥೆಯನ್ನು ಎಳೆಯುತ್ತೀರಾ. ಈಗ ಒಂದು ಸಿನಿಮಾ ಮಾಡ್ತೀರಾ, ಇನ್ನು ಎರಡು ವರ್ಷ ಆದಮೇಲೆ ಇನ್ನೊಂದು ಸಿನಿಮಾ ಮಾಡ್ತೀರಾ. ಅಷ್ಟರಲ್ಲಿ ಈ ಸಿನಿಮಾವನ್ನು ಜನ ಮರೆತೇ ಹೋಗಿರುತ್ತಾರೆ.

ಸೀಕ್ವೆಲ್ ಮಾಡುವ ತಾಳ್ಮೆ ಇಲ್ಲ
"ಎರಡನ್ನು ಸೇರಿಸಿ ಒಂದೇ ಸಿನಿಮಾ ಮಾಡಿ. ಕ್ರಿಸ್ಪಿ ಆಗಿ ಕೊಡಿ. ಸೀಕ್ವೆಲ್ ಸಿನಿಮಾ ಮಾಡುವಷ್ಟು ಟೈಮು ಇಲ್ಲ, ತಾಳ್ಮೆ ಕೂಡ ಇಲ್ಲ" ಎಂದು ದರ್ಶನ್ ಹೇಳಿದ್ದಾರೆ. ನಟ ದರ್ಶನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ 'ನವಗ್ರಹ' ಅದರಲ್ಲಿ ಬಹಳ ವಿಭಿನ್ನವಾಗಿ ನಿಲ್ಲುತ್ತದೆ. ಮೈಸೂರು ಅರಮನೆಯ ಅಂಬಾರಿಯನ್ನು ಕದಿಯುವ ರೋಚಕ ಕಥೆ ಸಿನಿರಸಿಕರಿಗೆ ಇಷ್ಟವಾಗಿತ್ತು. ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾ ಸಖತ್ ಸದ್ದು ಮಾಡಿತ್ತು. ದರ್ಶನ್ ನೆಗೆಟಿವ್ ಶೇಡ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಹಾಗಾಗಿ ಈ ಸಿನಿಮಾ ಸೀಕ್ವೆಲ್ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ.

ತಾರಾಗಣದಲ್ಲಿ ಖಳ ನಟರ ಮಕ್ಕಳು
14 ವರ್ಷಗಳ ಹಿಂದೆ ಬಂದಿದ್ದ ಆಕ್ಷನ್ ಥ್ರಿಲ್ಲರ್ 'ನವಗ್ರಹ' ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ದರ್ಶನ್ ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಖಳನ ನಟರ ಮಕ್ಕಳು ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ಗಿರಿ ದಿನೇಶ್, ತರುಣ್ ಸುಧೀರ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ, ವರ್ಷಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ವಿ. ಹರಿಕೃಷ್ಣ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು.

ಫೆ.16ಕ್ಕೆ D56 ಟೈಟಲ್ ರಿವೀಲ್
ಬಹಳ ದಿನಗಳಿಂದ 'ನವಗ್ರಹ' ಸೀಕ್ವೆಲ್ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ದಿನಕರ್ ತೂಗುದೀಪ ಬಳಿ ಈ ಬಗ್ಗೆ ಬೇಡಿಕೆಯನ್ನು ಇಡುತ್ತಿದ್ದರು. ಒಂದಲ್ಲ ಒಂದು ದಿನ ಇಂತಾದೊಂದು ಪ್ರಾಜೆಕ್ಟ್‌ಗೆ ಕಾಲ ಕೂಡಿ ಬರಬರದು ಎಂದು ಕೆಲವರು ಅಂದು ಕೊಂಡಿದ್ದರು. ಆದರೆ ನಟ ದರ್ಶನ್ ನಾನು ಸೀಕ್ವೆಲ್ ಸಿನಿಮಾ ಮಾಡಲ್ಲ. ಆ ಬಗ್ಗೆ ನನಗೆ ಇಂಟ್ರೆಸ್ಟ್ ಇಲ್ಲ ಎಂದು ಹೇಳಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಸದ್ಯ ತರುಣ್ ಸುಧೀರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ದರ್ಶನ್ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ 16ಕ್ಕೆ ಈ ಚಿತ್ರದ ಟೈಟಲ್ ರಿವೀಲ್ ಆಗುವ ಸಾಧ್ಯತೆಯಿದೆ.


Click it and Unblock the Notifications











