ಕನ್ನಡದಲ್ಲಿ ಮತ್ತೊಂದು ಹಾರರ್ ಸಿನಿಮಾ 'ನವಮಿ' ರಿಲೀಸ್ ರೆಡಿ
ಕನ್ನಡದಲ್ಲಿ ಹೊಸಬರ ಸಿನಿಮಾಗಳು ಸಾಲು ಸಾಲಾಗಿ ರಿಲೀಸ್ ಆಗುತ್ತಿದೆ. ಪ್ರತಿವಾರ ನಾಲ್ಕೈದು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಇದರಲ್ಲಿ ಹೊಸ ಸಿನಿಮಾಗಳೇ ಹೆಚ್ಚಿವೆ. ಅಂತಹದರಲ್ಲಿ ಫೆಬ್ರವರಿ 21ಕ್ಕೆ ಮತ್ತೊಂದು ಹೊಸಬರ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ನವಮಿ'. ಚಿತ್ರದ ಟ್ರೈಲರ್ ನೋಡಿದ ಮೇಲೆ ಇದೊಂದು ಹಾರರ್ ಸಿನಿಮಾ ಅನ್ನೋದು ಅರಿವಿಗೆ ಬಂದಿದೆ.
'ನವಮಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಶಸ್ ಅಭಿ ನಟಿಸಿದ್ದಾರೆ. ಮೂಲತ: ರಂಗಭೂಮಿ ಕಲಾವಿದರಾಗಿರುವ ಇವರು ಈಗಾಗಲೇ ಸಾಕಷ್ಟು ನಾಟಕ, ಬೀದಿ ನಾಟಕಗಳು, ಸ್ಟೇಜ್ ನಾಟಕಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ನಟಿಸಿದ ಎರಡು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. 'ಕ್ರಿಟಿಕಲ್ ಕೀರ್ತನೆಗಳು', 'ಪ್ರೆಸೆಂಟ್ ಪ್ರಪಂಚ 0% ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ.

ಈಗ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಯಶಸ್ ಅಭಿ 'ನವಮಿ' ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಿನಿಮಾಗೆ ಯಶಸ್ ಅಭಿ ಅವರೇ ಕಥೆ, ಚಿತ್ರಕಥೆಯನ್ನು ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಯಶಸ್ ಅಭಿ ಜನರಿಗೆ ಹಾರರ್ ಸಬ್ಜೆಕ್ಟ್ ಮೂಲಕ ಹತ್ತಿರ ಆಗುವುದಕ್ಕೆ ಹೊರಟಿದ್ದಾರೆ.
ಇನ್ನು ಸಿನಿಮಾದಲ್ಲಿ ಕನ್ನಡ ಚಿತ್ರರಂಗ ದಿಗ್ಗಜರು ನಟಿಸಿದ್ದಾರೆ. ಎಸ್.ನಾರಾಯಣ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಶಂಕರ್ ಅಶ್ವಥ್, ಕುರಿ ಸುನೀಲ್ ಅಂತಹ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂದ್ಹಾಗೆ ಹೊಸಬರ ಈ ಪ್ರಯತ್ನಕ್ಕೆ ನಾಗೇಶ್ ಕುಮಾರ್ ಯುಸ್ ಸಾಥ್ ನೀಡುತ್ತಿದ್ದು ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.
'ನವಮಿ' ಸಿನಿಮಾದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ ಯಶಸ್ ಅಭಿ. ಹಾಗೇ ನಾಯಕನಾಗಿ ನಟಿಸುತ್ತಿರುವ ಯಶಸ್‌ಗೆ ನಾಯಕಿಯಾಗಿ ನಂದಿನಿ ಗೌಡ ನಟಿಸಿದ್ದಾರೆ. ಇವರೊಂದಿಗೆ ನೇಹಾ ಪಾಟೀಲ್, ಕಾರ್ತಿಕ್ ಮಜಾ ಭಾರತ ನಟಿಸಿದ್ದರೆ, ಖಳನಾಯಕನಾಗಿ ರಾಕೇಶ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಸಿನಿಮಾ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದು ಕುತೂಹಲ.


Click it and Unblock the Notifications











