'ಪೆದ್ದಿ' ಚಿತ್ರದಿಂದ 'ಲೋ ನವೀನ' ಚಿತ್ರಕ್ಕೆ ರಾಜ್ಯದಲ್ಲಿ ಹಿನ್ನಡೆ; ನವೀನ್ ಸಜ್ಜು ಅಸಮಾಧಾನ
ಒಳ್ಳೆ ಕನ್ನಡ ಸಿನಿಮಾಗಳ ಬರಲ್ಲ ಎನ್ನುವ ಆರೋಪ ಒಂದು ಕಡೆ. ಒಳ್ಳೆ ಸಿನಿಮಾಗಳು ಬಂದಾಗ ಪ್ರೇಕ್ಷಕರು ಒಪ್ಪಿ ಬೆಂಬಲ ಕೊಡಲ್ಲ ಎನ್ನುವ ವಾದ ಮತ್ತೊಂದು ಕಡೆ. ಒಳ್ಳೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲ್ಲ, ಪರಭಾಷಾ ಸಿನಿಮಾಗಳಿಗೆ ಕರ್ನಾಟಕದಲ್ಲಿ ಆದ್ಯತೆ ಎನ್ನುವ ಅಸಮಾಧಾನ ಕೂಡ ಇದೆ. ಸದ್ಯ ಪರಭಾಷೆಯ 3 ದೊಡ್ಡ ಸಿನಿಮಾಗಳಿಂದ ಕನ್ನಡದ 'ಲೋ ನವೀನ' ಚಿತ್ರಕ್ಕೆ ಹಿನ್ನಡೆಯಾಗಿದೆ. ಈ ಬಗ್ಗೆ ನವೀನ್ ಸಜ್ಜು ಬೇಸರ ವ್ಯಕ್ತಪಡಿಸಿದ್ದಾರೆ.
ಮೇ 15ರಂದು 'ಲೋ ನವೀನ' ಸಿನಿಮಾ ಬಿಡುಗಡೆ ಆಗಿತ್ತು. ಧನುರ್ಧಾರಿ ಪವನ್ ನಿರ್ದೇಶನದ ಹಳ್ಳಿ ಸೊಗಡಿನ ಚಿತ್ರದಲ್ಲಿ ನವೀನ್ ಸಜ್ಜು ಹೀರೊ ಆಗಿ ಮಿಂಚಿದ್ದಾರೆ. ನಿರ್ಮಾಪಕರಿಯರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುಷ್ಪಾ ಅರುಣ್‌ಕುಮಾರ್ ಕೂಡ ಸಿನಿಮಾ ನೋಡಿ ಚಿತ್ರತಂಡದ ಬೆನ್ನು ತಟ್ಟಿದ್ದರು. ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಸೊಗಸಾಗಿ ತೆರೆಮೇಲೆ ತಂದು ಚಿತ್ರತಂಡ ಗೆದ್ದಿದೆ.

ಬೆಂಗಳೂರಿನಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗದೇ ಇದ್ದರೂ ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೆಗಾಲದಂತಹ ಏರಿಯಾಗಳಲ್ಲಿ ಒಳ್ಳೆ ಗಳಿಕೆ ಕಂಡಿತ್ತು. ತಮಿಳಿನ 'ಕರುಪ್ಪು' ಸಿನಿಮಾ ಜೊತೆಗೆ 'ಲೋ ನವೀನ' ಸಿನಿಮಾ ಬಿಡುಗಡೆ ಆಗಿತ್ತು. ಬಳಿಕ ಮೋಹನ್ ಲಾಲ್ ನಟನೆಯ 'ದೃಶ್ಯಂ'- 3 ಸಿನಿಮಾ ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಿತ್ತು. ಹಾಗಾಗಿ 2ನೇ ವಾರಕ್ಕೆ 'ಲೋ ನವೀನ' ಚಿತ್ರದ ಸಾಕಷ್ಟು ಶೋಗಳನ್ನು ಕಿತ್ತುಕೊಂಡಿತ್ತು. ಈ ವಾರ ತೆಲುಗಿನ 'ಪೆದ್ದಿ' ಸಿನಿಮಾ ಬಂದಿದೆ.
ಎರಡು ವಾರ ಕಳೆಯುತ್ತಿದ್ದಂತೆ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಿಂದ 'ಲೋ ನವೀನ' ಸಿನಿಮಾ ತೆಗೆದು ಹಾಕಲಾಗಿದೆ. ಇದೇ ವಿಚಾರದ ಬಗ್ಗೆ ನವೀನ್ ಸಜ್ಜು ವೀಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಒಂದು ಕಥೆ ಮಾಡಿ ಸಿನಿಮಾ ಮಾಡಿ ಅದನ್ನು ತೆರೆಗೆ ತಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಗೆಲ್ಲಿಸುವುದು ಅಷ್ಟು ಸುಲಭವಲ್ಲ. ಕೊನೆಗೂ ಗೆದ್ದ ಚಿತ್ರವನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನವೀನ್ ಹೇಳಿದ್ದಾರೆ.
"ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದೂ ಶೋ ಇಲ್ಲ. ಸಾಕಷ್ಟು ಜನ ಫೋನ್, ಮೆಸೇಜ್ ಮಾಡಿ ಕೇಳ್ತಿದ್ದೀರಾ, ಶೋ ಕೊಡಿ ಅಂತ. ಏನೂ ಮಾಡೋಕೆ ಆಗಲ್ಲ, ಈಗಾಗಲೇ ಎರಡು ಪರಭಾಷಾ ಸಿನಿಮಾಗಳ ನಡುವೆ ಹೆಂಗೋ ನಾವು ಇಲ್ಲಿತನಕ ಬಂದ್ವಿ. ಈಗ ಮೂರನೆಯದ್ದು ಇನ್ನೊಂದು ಸಿನಿಮಾ ಬಂದಿದೆ. ನಿಮಗೆಲ್ಲಾ ಗೊತ್ತಿರುವಂತೆ ಒಂದು ತೆಲುಗು ಸಿನಿಮಾ ಬಂದಿದೆ. ಬೇರೆ ಸಿನಿಮಾಗಳು ಬಂದಾಗ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡವರು ವಿಶಾಲ ಹೃದಯದವರು, ಹಂಗಾಗಿ ಥಿಯೇಟರ್ ಬಿಟ್ಟು ಕೊಡ್ಲೇಬೇಕು. ನಾವು ಎಲ್ಲಾ ಥಿಯೇಟರ್ ಬಿಟ್ಟುಕೊಟ್ಟಿದ್ದೀವಿ ಎಂದು ನವೀನ್ ಬೇಸರ ಹೊರ ಹಾಕಿದ್ದಾರೆ.
ನಮ್ಮ ಸಿನಿಮಾಗೆ ಥಿಯೇಟರ್ ಖಾಲಿ ಮಾಡಿಸಿದವರಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದ್ದಾರೆ. ಎಲ್ಲೆಲ್ಲೆ ಸಿನಿಮಾ ಪ್ರದರ್ಶನ ಆಗ್ತಿದೆ, ಜನ ನೋಡ್ತಿದ್ದಾರೆ, ಅವರಿಗೆಲ್ಲಾ ಧನ್ಯವಾದ ಎಂದು ನವೀನ್ ಸಜ್ಜು ಹೇಳಿದ್ದಾರೆ. ಸಾಕಷ್ಟು ಜನ ಈ ಬಗ್ಗೆ ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ದ್ರೋಹ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಪ್ರಕಾಶ್ ತುಮ್ಮಿನಾಡು, ವರ್ಷಾ ಗಿರಿಧರ್, ರೇಷ್ಮಾ ಗೌಡ, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವರು 'ಲೋ ನವೀನ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿವೆ. ಕೀರ್ತಿಸ್ವಾಮಿ, ಬೆನ್ ಚಿಕ್ಕಸ್ವಾಮಿ ಹಾಗೂ ಎನ್‌ಎಸ್ ಸ್ಟುಡಿಯೋಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದ್ದಾರೆ.


Click it and Unblock the Notifications