ನಯನತಾರಾ ಬಾಯಿಗೂ ಬೀಗ ಹಾಕಿದ 'ಟಾಕ್ಸಿಕ್' ಟೀಂ; ವೀಡಿಯೋ ವೈರಲ್
ರಾಕಿಂಗ್ ಸ್ಟಾರ್ ಯಶ್ ಮಹತ್ವಾಕಾಂಕ್ಷೆಯ ಸಿನಿಮಾ 'ಟಾಕ್ಸಿಕ್'. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಇತ್ತೀಚೆಗೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.
'KGF'- 2 ಬಳಿಕ ಯಶ್ ಏನ್ ಮಾಡ್ತಾರೆ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ 'ಟಾಕ್ಸಿಕ್' ಉತ್ತರ ಆಗಬೇಕಿದೆ. ಏಪ್ರಿಕ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗ್ತಿದೆ. ಬೆಂಗಳೂರು, ಮುಂಬೈ, ಗೋವಾದಲ್ಲಿ ಭರದಿಂದ ಚಿತ್ರೀಕರಣ ಮಾಡಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ.

ಮೊದಲಿನಿಂದಲೂ 'ಟಾಕ್ಸಿಕ್' ಸಿನಿಮಾ ಕಥೆ, ಸ್ಟಾರ್‌ಕಾಸ್ಟ್ ಬಗ್ಗೆ ಚಿತ್ರತಂಡ ಗುಟ್ಟು ಕಾಯ್ದುಕೊಳ್ಳುತ್ತಿದೆ. ಚಿತ್ರದಲ್ಲಿ ನಯನತಾರಾ, ಕಿಯಾರ ಅಡ್ವಾನಿ, ಹುಮಾ ಖುರೇಶಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೂಡ ನಯನತಾರಾ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎಂದು ಗುಲ್ಲಾಗಿತ್ತು. ಸದ್ಯ ಮತ್ತೆ ಬೆಂಗಳೂರಿನಲ್ಲಿ ಹೊಸ ಶೆಡ್ಯೂಲ್ ಆರಂಭವಾಗಿದ್ದು ನಯನತಾರ ಬಂದಿದ್ದಾರೆ. ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನುವ ಊಹಾಪೋಹ ಇದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿದೆ.
ಎಲ್ಲಾ ಒಂದು ಹಂತಕ್ಕೆ ಬಂದ ಮೇಲೆ ಮಾತನಾಡೋಣ ಎನ್ನುವುದು 'ಟಾಕ್ಸಿಕ್' ಚಿತ್ರತಂಡದ ಲೆಕ್ಕಾಚಾರ. ಆದರೆ ಅದು ಯಾವಾಗ ಎಂದು ಅಭಿಮಾನಿಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ. ವರ್ಷದ ಹಿಂದೆ ಮೋಷನ್ ಪೋಸ್ಟರ್ ಬಿಟ್ಟು ಸಿನಿಮಾ ಘೋಷಣೆ ಮಾಡಿದ್ದರು. ಆ ಬಳಿಕ ಕಳೆದ ವರ್ಷ ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತದ ಸಮಾರಂಭದ ಅಪ್‌ಡೇಟ್ ಸಿಕ್ಕಿತ್ತು. ಬಳಿಯ ಯಶ್ ಬರ್ತ್‌ಡೇಗೆ ಟೀಸರ್ ಬಂದಿತ್ತು ಅಷ್ಟೆ.
'ಟಾಕ್ಸಿಕ್' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 60-70ರ ದಶಕದ ಕಥೆ, ಗೋವಾ ಡ್ರಗ್ಸ್ ಮಾಫಿಯಾ ಸುತ್ತಾ ಸಿನಿಮಾ ಕಥೆ ಸಾಗುತ್ತದೆ. ಯಶ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಿದ್ದಾರೆ ಎನ್ನುವ ಅಂತಕಂತೆ ಮಾತುಗಳು ಕೇಳಿಬರ್ತಿದೆ. ಯಶ್, ಕೆವಿಎನ್ ಪ್ರೊಡಕ್ಷನ್ಸ್ ಮಾತ್ರವಲ್ಲ ಯಾರೊಬ್ಬರು ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ.
ಕೆಲ ದಿನಗಳ ಹಿಂದೆ 'ಯುಐ' ಸಿನಿಮಾ ನೋಡಲು ಯಶ್ ಬಂದಿದ್ದರು. ಆಗ ಮಾಧ್ಯಮದವರು 'ಟಾಕ್ಸಿಕ್' ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಲು ನಿರಾಕರಿಸಿದ್ದರು. ಸದ್ಯ ಸಂದರ್ಶನವೊಂದರಲ್ಲಿ ನಟಿ ನಯನತಾರ ಕೂಡ 'ಟಾಕ್ಸಿಕ್' ಚಿತ್ರದ ಬಗ್ಗೆ ಮಾತನಾಡಲು ನಿರಾಕರಿಸಿರುವುದು ಗೊತ್ತಾಗುತ್ತದೆ. ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಸಂದರ್ಶನದಲ್ಲಿ ನಯನತಾರ ಭಾಗಿ ಆಗಿದ್ದರು.
ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನುಣುಚಿಕೊಂಡಿದ್ದಾರೆ. "ಮುಂದೆ ನನ್ನ ಯಾವ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವುದು ಸರಿಯಾಗಿ ಗೊತ್ತಿಲ್ಲ, ಕೆಲ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಯಾವ ಸಿನಿಮಾ ಯಾವಾಗ ಬರುತ್ತೆ ಎಂದು ನಾನು ಹೇಳುವಂತಿಲ್ಲ ಎಂದು ನಕ್ಕಿದ್ದಾರೆ. ನಾನು ಏನೋ ಹೇಳಬೇಕು ಅಂದುಕೊಂಡೆ. ಆದರೆ ಹೇಳುವಂತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
"ಈ ವರ್ಷ ನನ್ನ ಯಾವುದೇ ಸಿನಿಮಾ ರಿಲೀಸ್ ಆಗಲ್ಲ ಎಂದು ನನಗೆ ಅನಿಸುತ್ತಿದೆ" ಎಂದು ನಯನ್ ಸ್ಪಷ್ಟಪಡಿಸಿದ್ದಾರೆ. ಇದನ್ನು ಕೇಳಿದ ಮೇಲೆ 'ಟಾಕ್ಸಿಕ್' ಸಿನಿಮಾ ಈ ವರ್ಷ ತೆರೆಗೆ ಬರುವ ಬಗ್ಗೆ ಚಿತ್ರತಂಡಕ್ಕೂ ಸ್ಪಷ್ಟನೆ ಇಲ್ಲ ಎನ್ನುವುದು ಗೊತ್ತಾಗುತ್ತಿದೆ. ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications











