'ಟಾಕ್ಸಿಕ್' ಅಖಾಡಕ್ಕೆ ನಯನತಾರ ಎಂಟ್ರಿ; ಫೋಟೊ ಹಂಚಿಕೊಂಡ ಲೇಡಿ ಸೂಪರ್ ಸ್ಟಾರ್
'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅಕ್ಷಯ್ ಒಬೆರಾಯ್, ತಾರಾ ಸುತಾರ ಚಿತ್ರದಲ್ಲಿ ತಾವು ನಟಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ಕೈರಾ ಅದ್ವಾನಿ ಹಾಗೂ ನಯನತಾರಾ ಸಹ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ.
ಚಿತ್ರದಲ್ಲಿ ಯಶ್ ಸಹೋದರಿ ಆಗಿ ಕರೀನಾ ಕಪೂರ್ ನಟಿಸುತ್ತಾರೆ ಮಾತುಗಳು ಹಿಂದೆ ಕೇಳಿಬಂದಿತ್ತು. ಬಳಿಕ ಆ ಅವಕಾಶ ನಯನ್ ಪಾಲಾಗಿದೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಲಿಲ್ಲ. ಇನ್ನು ಈಗಾಗಲೇ ನಯನರಾರ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಆಕೆ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಯನತಾರಾ ಈ ಹಿಂದೆ ಉಪೇಂದ್ರ ಜೊತೆ 'ಸೂಪರ್' ಚಿತ್ರದಲ್ಲಿ ನಟಿಸಿದ್ದರು. ಬಳಿಕ ಇದೀಗ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಯನತಾರ ಹಂಚಿಕೊಂಡಿರುವ ಫೋಟೊ ಆಕೆ ಚಿತ್ರೀಕರಣದಲ್ಲಿ ಭಾಗಿ ಆಗಿರುವ ಬಗ್ಗೆ ಸುಳಿವು ನೀಡುತ್ತಿದೆ.
ತಾವು ಧರಿಸಿರುವ ಹೈ ಟಾನ್ ಬೂಟ್ ಫೋಟೊವನ್ನು ನಯನತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಕೊಟ್ಟಿರುವ ಕ್ಯಾಪ್ಷನ್ ಸಹ ಗಮನ ಸೆಳೆದಿದೆ. 'ಟಾಕ್ಸಿಕ್' ಸೆಟ್‌ನಲ್ಲೇ ಕ್ಲಿಕ್ಕಿಸಿರುವ ಫೋಟೊ ಇದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ 60-70 ದಶಕದ ಕಥೆ ಹೇಳಲಾಗುತ್ತಿದೆ. ಅವತ್ತಿನ ಕಾಲಘಟ್ಟದಲ್ಲಿ ಇಂತಹ ಬೂಟು ಧರಿಸುತ್ತಿದ್ದರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಸಿನಿಮಾ ಕಥೆ ಸಾಗಲಿದೆ. ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಪಾತ್ರಕ್ಕೆ ಬಹಳ ಮಹತ್ವ ಇದೆ. ಕರೀನಾ ಕಪೂರ್ ಡೇಟ್ಸ್ ಸಮಸ್ಯೆಯಿಂದ ನಟಿಸಲ್ಲ ಎಂದಾಗ ನಯನತಾರ ನಟಿಸಲು ಮುಂದೆ ಬಂದರು ಎಂದು ಹಿಂದೆ ವರದಿ ಆಗಿತ್ತು.
ಯಶ್ ಹಾಗೂ ನಯನತಾರ ನಡುವೆ ಸಾಕಷ್ಟು ಸನ್ನಿವೇಶಗಳು ಇರಲಿವೆ ಎಂದು ಹೇಳಲಾಗ್ತಿದೆ. ಇದು ಸಣ್ಣ ಪಾತ್ರವಲ್ಲ. ಪಾತ್ರಕ್ಕೆ ಅನುಭವಿ ನಟಿ ಬೇಕೆಂದು ನಯನತಾರ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆಯಂತೆ. ಯಶ್ ಜೊತೆ ಆಕೆ ನಟಿಸುತ್ತಿರುವುದು ಸಹಜವಾಗಿಯೇ ಕುತೂಹಲ ಹೆಚ್ಚುವಂತೆ ಮಾಡಿದೆ.
ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿದೆ. ಆದರೆ ಅದೇ ದಿನ ಪ್ರಭಾಸ್ ನಟನೆಯ 'ರಾಜಾಸಾಬ್' ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ 'ಟಾಕ್ಸಿಕ್' ರಿಲೀಸ್ ತಮ್ಮಷ್ಟು ತಡವಾಗುವ ಸಾಧ್ಯತೆಯಿದೆ. ಇನ್ನು ಚಿತ್ರದಲ್ಲಿ ಗ್ರಾಫಿಕ್ಸ್ ವರ್ಕ್ ಕೂಡ ಹೆಚ್ಚು ಇರಲಿದೆ. ಲಂಡನ್‌ನಲ್ಲಿ ಕೂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
'KGF-2' ಬಳಿಯ ಯಶ್ ನಟಿಸುತ್ತಿರುವ ಸಿನಿಮಾ ಆಗಿರುವುದರಿಂದ ಯಾವ ವಿಚಾರದಲ್ಲೂ ರಾಜಿ ಆಗಲು ಸಿದ್ಧರಿಲ್ಲ. ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದು ಯಶ್ ಚಿತ್ರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಆಗಸ್ಟ್ 8ರಂದು ಮುಹೂರ್ತ ನೆರವೇರಿಸಿ ಚಿತ್ರೀಕರಣಕ್ಕೆ ಆರಂಭಿಸಲಾಗಿತ್ತು.


Click it and Unblock the Notifications











