Neetha Ashok: ಸಪ್ತಪದಿ ತುಳಿದ 'ವಿಕ್ರಾಂತ್ ರೋಣ' ನಟಿ? ಹುಡುಗ ಯಾರು?
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಮಿಂಚಿದ ನಟಿ ನೀತಾ ಅಶೋಕ್. ಕಿರುತೆರೆಯಿಂದ ಸಿನಿಮಾಗೆ ಬಂದು ಯಶಸ್ಸು ಕಾಣುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಗೆಳೆಯ ಸತೀಶ್ ಮೆಸ್ತಾ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು.
ನಟಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ವಿವಾಹ ಇಂದು (ಜುಲೈ 10) ಅವರ ಕುಟುಂಬದವರ ಸಮ್ಮುಖದಲ್ಲಿ ನೆರವೇರಿದೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಆಮಂತ್ರಣ ಪತ್ರಿಕೆ ಹರಿದಾಡುತ್ತಿದ್ದು, ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆಂದು ವರದಿಯಾಗಿದೆ.

'ವಿಕ್ರಾಂತ್ ರೋಣ' ನಟಿ ನೀತಾ ಅಶೋಕ್ ಮೂಲತ: ಉಡುಪಿ ಜಿಲ್ಲೆಯ ಕೋಟದವರು. ಗೀತಾ ಅಶೋಕ್ ಹಾಗೂ ಅಶೋಕ್ ಎಂಬುವವರ ಪುತ್ರಿ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸತೀಶ್ ಮೆಸ್ತಾ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ.
ಲವ್ ಕಮ್ ಅರೇಂಜ್ಡ್ ಮ್ಯಾರೇಜ್?
ನಟಿ ನೀತಾ ಅಶೋಕ್ 2022ರ ಡಿಸೆಂಬರ್ ತಿಂಗಳಲ್ಲಿ ಗೆಳೆಯ ಸತೀಶ್ ಮೆಸ್ತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಾಲೇಜು ದಿನಗಳಿಂದ ಇಬ್ಬರೂ ಸ್ನೇಹಿತರಾಗಿದ್ದು, ಬಳಿಕ ಪ್ರೀತಿ ಹುಟ್ಟಿತ್ತು. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು (ಜುಲೈ 10) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನಟಿ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ.
ಕುಟುಂಬಸ್ಥರಷ್ಟೇ ಭಾಗಿ?
'ವಿಕ್ರಾಂತ್ ರೋಣ' ನಟಿ ನೀತಾ ಅಶೋಕ್ ಅವರ ಮದುವೆಗೆ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಉಡುಪಿಯಲ್ಲಿ ಮದುವೆ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಇಲ್ಲ. ಅತ್ತ ಸೋಶಿಯಲ್ ಮೀಡಿಯಾದಲ್ಲೂ ಮದುವೆ ಫೋಟೊಗಳನ್ನು ಶೇರ್ ಮಾಡಿಕೊಂಡಿಲ್ಲ. ನಿಶ್ಚಿತಾರ್ಥದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ನೀತಾ ಅಶೋಕ್ ಹಂಚಿಕೊಂಡಿದ್ದರು.

ಕಿರುತೆರೆ, ಸಿನಿಮಾದಲ್ಲಿ ಯಶಸ್ಸು
ನೀತಾ ಅಶೋಕ್ ಓದುವಾಗಲೇ ಕಿರುತೆರೆಯಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. 'ಯಶೋದೆ', 'ನಾ ನಿನ್ನ ಬಿಡಲಾರೆ', 'ನೀಲಾಂಬರಿ' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನೀತಾ ಅಶೋಕ್ ನಟಿಸಿದ್ದಾರೆ. ಇಷ್ಟೇ ಅಲ್ಲದೆ 'ಜಬರ್ದಸ್ತ್ ಶಂಕರ' ಎನ್ನುವ ತುಳು ಸಿನಿಮಾದಲ್ಲೂ ನಟಿಸಿದ್ದರು. 'ವಿಕ್ರಾಂತ್ ರೋಣ' ಮೂಲಕ ಕಿರುತೆರೆ ಬಳಿಕ ಸಿನಿಮಾದಲ್ಲೂ ದೊಡ್ಡ ಬ್ರೇಕ್ ಸಿಕ್ಕಿತ್ತು. ಇನ್ನೇನು ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನುವಾಗಳೇ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈಗ ಮದುವೆ ಆಗಿರೋ ಸುದ್ದಿನೂ ಹೊರಬಿದ್ದಿದೆ.


Click it and Unblock the Notifications











