ನಟ ದರ್ಶನ್ ರೀತಿ ನನಗೂ ಜಾಮೀನು ಕೊಡಿ; ನೇಹಾ ಹತ್ಯೆ ಆರೋಪಿ ಮನವಿ
ರೇಣುಕಾಸ್ವಾಮಿ ಪ್ರಕರಣದ ರೀತಿಯೇ ಕಳೆದ ವರ್ಷ ಹುಬ್ಬಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲ ವಿದ್ಯಾರ್ಥಿನಿ ನೇಹಾಳನ್ನು ಫಯಾಜ್ ಎಂಬಾತ ಮಾರಕಾಸ್ತ್ರಗಳಿಂದ ಚುಚ್ಚಿ ಹತ್ಯೆಗೈದಿದ್ದ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಫಯಾಜ್ ಜಾಮೀನು ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾನೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದಂತೆ ನನಗೂ ಜಾಮೀನು ನೀಡಿ ಎಂದು ಫಯಾಜ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಹುಬ್ಬಳಿಯ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು ಆಗಸ್ಟ್ 4ರಂದು ಅರ್ಜಿ ತೀರ್ಪು ಹೊರಬೀಳಲಿದೆ. ನಟ ದರ್ಶನ್‌ಗೆ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆದು ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ.

ನೇಹಾ ಹಿರೇಮಠ್ ಹತ್ಯೆಯಾಗಿ ವರ್ಷ ಕಳೆದರೂ ಇನ್ನು ಆರೋಪಿಗೆ ಶಿಕ್ಷೆ ಪ್ರಕಟವಾಗಿಲ್ಲ. ಪ್ರಕರಣದಲ್ಲಿ ಲವ್ ಜಿಹಾದ್ ಆರೋಪವೂ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆ ಇತ್ತೀಚೆಗೆ ಶುರುವಾಗಿದೆ. ಇದೆಲ್ಲದರ ನಡುವೆ ನಟ ದರ್ಶನ್ ಹೆಸರು ಹೇಳಿ ಆರೋಪಿ ಫಯಾಜ್ ಜಾಮೀನು ಕೇಳಿ ಕೋರ್ಟ್‌ಗೆ ಮನವಿ ಸಲ್ಲಿಸಿರುವ ವಿಚಾರ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ನೇಹಾ ತಂದೆ ನಿರಂಜನ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
"ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ನೀಡಿದಂತೆ ನನಗೂ ನೀಡಿ ಎಂದು ಫಯಾಜ್ ಕೇಳಿದ್ದಾನೆ. ಅದು ಸರಿಯಲ್ಲ ಎಂದು ನಮ್ಮ ವಕೀಲರ ಮೂಲಕ ನಾವು ವಾದ ಮಾಡಿದ್ದೇವೆ. ದರ್ಶನ್‌ಗೆ ಹೈಕೋರ್ಟ್ ಬೇಲ್ ಕೊಟ್ಟಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಇದು ಸರಿ ಎನ್ನುವುದಾದರೆ ಎಲ್ಲಾ ಜೈಲುಗಳು ಖಾಲಿ ಆಗುತ್ತವೆ. ಕಲಾವಿದರು, ರಾಜಕೀಯ ಮುಖಂಡರು, ಮಠಾಧೀಶರು ಸಮಾಜಕ್ಕೆ ಮಾದರಿ ಆಗಬೇಕು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಟನೊಬ್ಬನ ಮಾಡಿದ ಕೃತ್ಯವನ್ನು ಮಾದರಿಯಾಗಿಟ್ಟುಕೊಂಡು ಅಭಿಮಾನಿಗಳು ಅನುಸರಿಸುತ್ತಿರುವುದು ಅಪಾಯಕಾರಿ" ಎಂದು ನಿರಂಜನ್ ಹೇಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದಾಗ ಸಾಕಷ್ಟು ಜನ ಇದೇ ರೀತಿಯ ಪ್ರಶ್ನೆ ಎತ್ತಿದ್ದರು. ಮೊದಲಿಗೆ ದರ್ಶನ್ ಆರೋಗ್ಯ ಸಮಸ್ಯೆ ನೆಪವೊಡ್ಡಿ 6 ವಾರಗಳ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ವಿಚಾರಣೆ ವೇಳೆ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಛೀಮಾರಿ ಹಾಕಿತ್ತು. ಇದು ಸಹಜವಾಗಿಯೇ ದರ್ಶನ್ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮತ್ತೆ ದರ್ಶನ್ ಜೈಲು ಸೇರುತ್ತಾರಾ? ಎನ್ನುವ ಅನುಮಾನ ಮೂಡಿದೆ.

ಇನ್ನು ನೇಹಾ ಹಿರೇಮಠ್ ಪ್ರಕರಣ ಸಂಬಂಧ ಸಿಐಡಿ ಕೇಸ್ ಚಾರ್ಜ್‌ಶೀಟ್ ಸಲ್ಲಿಸಿದೆ. ಹುಬ್ಬಳಿಯ 3ನೇ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಆರೋಪಿ ಫಯಾಜ್ ಪರ ಬೆಂಗಳೂರು ಮೂಲದ ವಕೀಲರೊಬ್ಬರು ವಾದ ಮಾಡಲು ಮುಂದಾಗಿದ್ದಾರೆ. ಕಳೆದ ವರ್ಷ ಏಪ್ರಿಲ್ 18ರಂದು ಕಾಲೇಜು ಆವರಣದಲ್ಲಿ ನೇಹಾಳನ್ನು ಫಯಾಜ್ ಚುಚ್ಚಿ ಸಾಯಿಸಿದ್ದ. ಘಟನೆ ನಡೆದ 1 ಗಂಟೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಹುಬ್ಬಳಿಯ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.


Click it and Unblock the Notifications











