ಕನ್ನಡ ಚಿತ್ರರಂಗದಲ್ಲಿರುವ ಸಮಸ್ಯೆಗಳನ್ನ ಪಟ್ಟಿ ಮಾಡಿದ ನೆನಪಿರಲಿ ಪ್ರೇಮ್..!
ಕೆ.ಜಿ.ಎಫ್ .. ಕಾಂತಾರ.. 777 ಚಾರ್ಲಿ.. ವಿಕ್ರಾಂತ್ ರೋಣ.. ಮೊನ್ನೆಯ ಕಾಟೇರ.. ಈ ಎಲ್ಲ ಚಿತ್ರಗಳ ಅಂಕಿ-ಸಂಖ್ಯೆಯನ್ನ ನೋಡಿ ಕನ್ನಡ ಚಿತ್ರರಂಗ ''ಮೊದಲ ಪಂಕ್ತಿ''ಯಲ್ಲಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಕೇವಲ ''ಭ್ರಮೆ''ಯಷ್ಟೇ.
ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸಮಸ್ಯೆಗಳಿವೆ. ಅದು ''ಓಟಿಟಿ'' ಸಮಸ್ಯೆ ಇರಬಹುದು.''ಮಲ್ಪಿಪ್ಲೆಕ್ಸ್'' ನವರ ತಾತ್ಸಾರದ ಮನೋಭಾವ ಇರಬಹುದು.ಅಥವಾ ''ಸಿಂಗಲ್ ಸ್ಕ್ರೀನ್'' ಚಿತ್ರಮಂದಿರದ ಸಮಸ್ಯೆ ಇರಬಹುದು. ಹತ್ತಾರು ಸಮಸ್ಯೆಗಳಿಂದ ಕನ್ನಡ ಚಿತ್ರರಂಗ ನಲಗುತ್ತಿದೆ.
ಆದರೆ..ಈ ಸಮಸ್ಯೆಯ ಸರಮಾಲೆ, ''ನ್ಯಾಷನಲ್ ಸ್ಟಾರ್''ಗಳ ಕಣ್ಣಿಗೂ ಕಾಣಲ್ಲ. ''ಸೂಪರ್ ಸ್ಟಾರ್''ಗಳಿಗೂ ಪರಿಹಾರ ಬೇಕಿಲ್ಲ. ಇನ್ನೂ ''ಸರ್ಕಾರ''ದ ಪಾಲಿಗೆ ಅದು ಚಿತ್ರರಂಗದ ಸಮಸ್ಯೆ. ಈ ಎಲ್ಲ ಕಾರಣಕ್ಕೆ ಸಮಸ್ಯೆ ಇನ್ನೂ ಸಮಸ್ಯೆಯಾಗಿ ಉಳಿದುಕೊಂಡಿದೆ. ಇನ್ನೂ ಜಟಿಲವಾಗುತ್ತಿದೆ. ಹೀಗಾಗಿ ಸಮಸ್ಯೆಯನ್ನ ಎದುರಿಸಲಾಗದೇ ಅನೇಕರು ಕಂಗೆಟ್ಟಿದ್ದಾರೆ. ಅವರೆಲ್ಲರ ಪರವಾಗಿ ''ಲವ್ಲೀ ಸ್ಟಾರ್ ಪ್ರೇಮ್'' ಮಾತನಾಡುವ ಪ್ರಯತ್ನವನ್ನ ಮೊನ್ನೆ ಮಾಡಿದ್ದಾರೆ
ಹೌದು, ಪ್ರೇಮ್ ಸಿನಿಮಾವೊಂದರಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರು ''ಅಪ್ಪಾ ಐ ಲವ್ ಯೂ''. ಇವರದ್ದು ಇಲ್ಲಿ ಅತಿಥಿ ಪಾತ್ರ. ಇದೇ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಪ್ರೇಮ್ ಚಿತ್ರದ ಬಗ್ಗೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಂತರ, ಕನ್ನಡ ಚಿತ್ರರಂಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ''ಒಗ್ಗಟ್ಟಿಲ್ಲ'' ಅನ್ನುವ ಮಾತನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ''ಮಲಯಾಳಂ ಚಿತ್ರರಂಗ''ವನ್ನ ಉದಾಹರಣೆಯನ್ನಾಗಿಯೂ ನೀಡಿದ್ದಾರೆ

ಮಲಯಾಳಂ ಚಿತ್ರರಂಗ ಎಷ್ಟೇ ''ದೊಡ್ಡ ಸಮಸ್ಯೆ'' ಬಂದರು, ಅದರ ವಿರುದ್ಧ ''ಒಗ್ಗಟ್ಟಾಗಿ ಹೋರಾಡುತ್ತೆ'' ಎಂದಿರುವ ಪ್ರೇಮ್, ಓಟಿಟಿ ವೇದಿಕೆಗಳಿಂದ ಕನ್ನಡ ಮತ್ತು ಮಲಯಾಳಂ ಚಿತ್ರರಂಗವನ್ನಷ್ಟೇ ದೂರ ಇಟ್ಟಿದ್ದಾರೆ, ಯಾಕೆ ಎಂಬ ಪ್ರಶ್ನೆಗೆ ನನಗೆ ಇವತ್ತು ಉತ್ತರ ಸಿಕ್ತಿಲ್ಲ ಎಂದಿದ್ದಾರೆ. ದೊಡ್ಡ ಓಟಿಟಿಯೊಂದರ ಸಿಇಓ ಒಬ್ಬರು ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದವರನ್ನು ಇತ್ತೀಚೆಗೆ ಕರೆದು ಪಾರ್ಟಿ ಕೊಟ್ಟಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಕನ್ನಡ ಮತ್ತು ಮಲಯಾಳಂ ಚಿತ್ರರಂಗದವರಿಗೆ ಪ್ರವೇಶ ಇಲ್ಲ ಎಂದಿರುವ ಪ್ರೇಮ್, ಈ ವಿಷಯದಲ್ಲಿ ''ಕೇರಳ ಸರ್ಕಾರ'' ಎಲ್ಲರಿಗೂ ಮಾದರಿಯಾಗಬೇಕು ಅಂದಿದ್ದಾರೆ. ಚಿತ್ರರಂಗದವರಿಗಾಗಿಯೇ ಅಲ್ಲಿನ ಸರ್ಕಾರ ''ಪ್ರತೈಕವಾದ ಓಟಿಟಿ'' ವೇದಿಕೆಯನ್ನ ಸೃಷ್ಟಿ ಮಾಡಿದೆ ಇದಕ್ಕಿಂತ ಇನ್ನೆಂಥ ಪ್ರೋತ್ಸಾಹ ಬೇಕು ಅಂದಿದ್ದಾರೆ. ಹೀಗಾದಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ, ನಮ್ಮ ಚಿತ್ರಗಳನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವೇ ಮಾಡಿದಂತೆ ಆಗುತ್ತೆ ಎಂದು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ ಪ್ರೇಮ್.
ಇನ್ನೂ ಇದೇ ವೇಳೆ ನಮ್ಮ ''ಕನ್ನಡ ಚಿತ್ರರಂಗ''ದಲ್ಲೂ ಇದು ಆಗಬೇಕು. ಸರ್ಕಾರಕ್ಕೆ ಈ ಮೂಲಕ ಕನ್ನಡಿಗನಾಗಿ, ಕನ್ನಡ ಚಿತ್ರರಂಗದ ಪರವಾಗಿ ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ. ಕನ್ನಡದಲ್ಲೂ ಒಂದು ಓಟಿಟಿಯಾಗಲೀ. ನಾವು ಯಾರದೋ ಎದುರಿಗೆ ಹೋಗಿ ಕೈಯೊಡ್ಡಿ ನಿಲ್ಲುವುದು ಬೇಡ ಎಂದು ಹೇಳಿದ್ದಾರೆ.
ಕೇವಲ ''ಓಟಿಟಿ'' ಅಷ್ಟೇ ಅಲ್ಲ ''ಮಲ್ಟಿಪ್ಲೆಕ್ಸ್'' ನವರ ''ನೀತಿ-ನಿಯಮ''ಗಳ ವಿರುದ್ಧವೂ ಪ್ರೇಮ್ ಕೆಂಡ ಕಾರಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡದ ಚಿತ್ರಗಳಿಗೆ ಸರಿಯಾದ ''ಟೈಮಿಂಗ್'' ನೀಡಲ್ಲ ಎಂದು ಬೇಸರವನ್ನ ಹೊರಹಾಕಿರುವ ಪ್ರೇಮ್, ಚಿತ್ರಕ್ಕೆ ಜನ ಬಂದರೂ, ಚಿತ್ರ ಹೌಸ್ ಫುಲ್ ಆಗಿದ್ದರು ಕೂಡ ಹೇಳದೇ ಕೇಳದೇ ಚಿತ್ರವನ್ನ ಎತ್ತಂಗಡಿ ಮಾಡ್ತಾರೆ ಎಂದಿದ್ದಾರೆ. ಇದೆಲ್ಲದರ ಬಗ್ಗೆ ಯಾರ ಬಳಿ ಹೋಗಿ ಕೇಳೋದು ಎಂಬ ಅಸಮಾಧಾನ ಹೊರಹಾಕಿದ್ದಾರೆ

ಇನ್ನೂ ಕನ್ನಡ ಚಿತ್ರರಂಗಕ್ಕೆ ಇಷ್ಟು ವರ್ಷಗಳ ಕಾಲ ಆಸರೆಯಾಗಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಕೂಡ, ಎಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದನೇ ನೋಡುವ ಸಂಪ್ರದಾಯ ಆರಂಭವಾಗಿದೆ ಎಂದಿದ್ದಾರೆ ಪ್ರೇಮ್. ಸಿನಿಮಾ ಚೆನ್ನಾಗಿದ್ದರೂ ಆ ಚಿತ್ರವನ್ನ ಇಲ್ಲಿ ಕೈ ಹಿಡಿಯುವ ಪ್ರಯತ್ನವಾಗ್ತಿಲ್ಲ. ಬದಲಿಗೆ ವ್ಯಾಪಾರದ ಹುಚ್ಚು ಒಳ್ಳೇಯ ಸಿನಿಮಾಗಳನ್ನೂ ಬಲಿ ಪಡೆಯುತ್ತಿದೆ ಎಂದಿದ್ಧಾರೆ. ಆ ಕಾಲದಲ್ಲಿ ಇದ್ದ ಮಾನವೀಯ ಮನಸುಗಳು ಎಲ್ಲಿ ಹೋದವು ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ ಪ್ರೇಮ್.
ಉಳಿದಂತೆ ಇದು ಕ್ಯಾರಾವ್ಯಾನ್ ಕಾಲ. ಸಮಯ ಸಿಕ್ಕರೆ ಸಾಕು, ಎಲ್ಲರೂ ಅವರ ಅವರ ಗಾಡಿಯನ್ನೇರಿ ಬಿಡುತ್ತಾರೆ. ಇನ್ನೂ ಹಿಂದೆ ಚಿತ್ರ ನೂರು ದಿನ ಮಾತ್ರ ಅಲ್ಲ, 25 ವಾರ 50 ವಾರ ಓಡಿದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿವೆ. ಆದರೆ ಇವತ್ತು ಅವೆಲ್ಲ ಮಾಯವಾಗಿವೆ. ಅರ್ಥಪೂರ್ಣ ಸಭೆ ಸಮಾರಂಭ ಅಪರೂಪವಾಗಿವೆ. ಹೀಗಾಗಿಯೇ ನಾವೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಎಷ್ಟು ದಿನ ಆಯ್ತು? ಎಂದು ತಮ್ಮ ಮನದ ನೋವನ್ನೂ ಕೂಡ ಹೊರ ಹಾಕಿದ್ದಾರೆ ಪ್ರೇಮ್.


Click it and Unblock the Notifications











