ಕಾವೇರಿ ಹೋರಾಟದ ಪರ ಕನ್ನಡದ ನಟರು ಧ್ವನಿ ಎತ್ತುತ್ತಿಲ್ಲ ಏಕೆ? ಅವರ ಬಾಯಿ ಕಟ್ಟಿ ಹಾಕಿದ್ದೇನು?
ಕಾವೇರಿ ನೀರು ಹಂಚಿಕೆ ವಿಷಯಕ್ಕೆ ಬಂದಾಗಲೆಲ್ಲಾ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನೋ ಕೂಗು ಕೇಳಿಬರುತ್ತೆ. ಅದರಲ್ಲೂ ಇಂತಹ ಬರಗಾಲದ ಸಮಯದಲ್ಲಿ ಸಮಸ್ಯೆ ಮತ್ತಷ್ಟು ತಾರಕಕ್ಕೆ ಏರುತ್ತೆ. ಈಗ ಕೂಡ ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ರೈತರು ರೊಚ್ಚಿಗೆದ್ದಿದ್ದಾರೆ.
ಕನ್ನಡದ ರೈತರಿಗೆ ಅನ್ಯಾಯವಾಗಿತ್ತಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಬೆನ್ನಲ್ಲೇ ಕನ್ನಡದ ಸೂಪರ್‌ಸ್ಟಾರ್‌ಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾವೇರಿ ಪ್ರತಿಭಟನೆ ಪರವಾಗಿ ಮಾತಾಡದೇ ಸೈಲೆಂಟ್ ಆಗಿರುವ ನಟರ ವಿರುದ್ಧ ಕಿಡಿಕಾರುತ್ತಿದ್ದಾರೆ.

ಶಿವರಾಜ್‌ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಯಶ್, ದರ್ಶನ್ ಸೇರಿದಂತೆ ಕನ್ನಡ ಸ್ಟಾರ್ ನಟರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಕನ್ನಡದ ಸೂಪರ್‌ಸ್ಟಾರ್‌ಗಳು ಕಾವೇರಿ ವಿಚಾರವಾಗಿ ಸೈಲೆಂಟ್ ಆಗಿದ್ದೇಕೆ? ಅವರ ಬಾಯಿ ಕಟ್ಟಿ ಹಾಕಿರೋ ಸಂಗತಿಯಾದರೂ ಏನು? ತಿಳಿಯುವುದಕ್ಕೆ ಮುಂದೆ ಓದಿ..
ಕನ್ನಡದ ನಟರ ವಿರುದ್ಧ ಆಕ್ರೋಶ
ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟರ ಫೋಟೊಗಳನ್ನು ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಲಾಗುತ್ತಿದೆ. ಕನ್ನಡದ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ ಅಣ್ಣಾವ್ರಿಗೆ ಮಾತ್ರ ಇತ್ತು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
"ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ.. ಕನ್ನಡ ಚಲನಚಿತ್ರ ರಂಗದಲ್ಲಿ ಪದ್ಮಭೂಷಣ ಡಾ. ರಾಜ್ ಕುಮಾರ್‌ರವರಿಗೆ ಮಾತ್ರ ಇತ್ತು.. ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಷಿಕರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ನಮ್ಮ ಕನ್ನಡದ ಯಾವೊಬ್ಬ ನಟರು ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ ನಮ್ಮಿಂದ ನಟರೇ ಒರತು ನಟರಿಂದ ನಾವಲ್ಲ ಅನ್ನೋ ಸತ್ಯವನ್ನು ಅರಿತು ಇಂಥಹ ಚಲನಚಿತ್ರ ನಟರನ್ನು ನಂಬದೆ ಇನ್ನಾದರೂ ಏಳು ಕೋಟಿ ಕನ್ನಡಿಗರು ಈ ದೇಶದ ಬೆನ್ನೆಲುಬು ರೈತರ ಪರವಾಗಿ ನಿಲ್ಲಬೇಕೆಂದು ನಿಮ್ಮಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇವೆ.. ರೈತ ಉಳಿದರೆ ನಾವೆಲ್ಲ. ರೈತನಿಲ್ಲದ ಜಗವಿಲ್ಲ.. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ.." ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇಲ್ಲಿಂದ ಕನ್ನಡದ ಸ್ಟಾರ್ ನಟರ ವಿರುದ್ಧ ಹೋರಾಟಗಾರರು ಕಿಡಿಕಾರಲು ಆರಂಭಿಸಿದ್ದಾರೆ.
ಕನ್ನಡ ಸೂಪರ್‌ಸ್ಟಾರ್‌ಗಳು ಸೈಲೆಂಟ್ ಆಗಿದ್ದೇಕೆ?
ಕನ್ನಡ ಸೂಪರ್‌ಸ್ಟಾರ್‌ಗಳು ಕಾವೇರಿ ಸಮಸ್ಯೆ ಎದ್ದಾಗಲೆಲ್ಲಾ ಒಗ್ಗಟ್ಟಾಗಿ ಹೋರಾಟಕ್ಕೆ ಬಂದು ಬಿಡುತ್ತಾರೆ. ರೈತರ ಪರವಾಗಿ ನಿಲ್ಲುತ್ತಾರೆ. ಅವರ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಆದರೆ, ಈ ಬಾರಿ ಮೌನವಾಗಿರುವುದನ್ನು ಕಂಡು ಹೋರಾಟಗರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಕನ್ನಡದ ನಟರು ಸೈಲೆಂಟ್ ಆಗಿರಲು ಕಾರಣ ಸಿನಿಮಾಗಳು ಕಾರಣವೇ..?

ಪ್ಯಾನ್ ಇಂಡಿಯಾ ಸಿನಿಮಾ ಕಾರಣವೇ?
ಕಳೆದ ಕೆಲವು ವರ್ಷಗಳಿಂದ ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ. 'ಕೆಜಿಎಫ್' ಯಶಸ್ಸು ಕಂಡಲ್ಲಿಂದ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಕನ್ನಡದ ನಟರ ಸಿನಿಮಾಗಳಲ್ಲಿ ಭಾಷೆಯ ಭೇದ ಮರೆದು ಎಲ್ಲಾ ಭಾಷಿಗರೂ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡ ನಟರನ್ನು ಬಾಯಿಯನ್ನು ಕಟ್ಟಿ ಹಾಕಿದೆಯೇ? ಅನ್ನೋ ಪ್ರಶ್ನೆ ಕಾಡುತ್ತಿದೆ.
ತಮಿಳು ಸಿನಿಮಾಗಳಲ್ಲೂ ನಟನೆ!
ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಜೈಲರ್' ಸಿನಿಮಾ ಮೂಲಕ ಕಾಲಿವುಡ್‌ಗೆ ಕಾಲಿಟ್ಟಿದ್ದರು. ಶಿವಣ್ಣನಿಗೆ ತಮಿಳರು ಜೈಕಾರ ಹಾಕಿದ್ದರು. ಹಾಗೇ 'ಕೆಜಿಎಫ್' ಸಿನಿಮಾ ಮೂಲಕ ಯಶ್, 'ಕಾಂತಾರ'ದಿಂದ ರಿಷಬ್ ಶೆಟ್ಟಿ, '777 ಚಾರ್ಲಿ'ಯಿಂದ ರಕ್ಷಿತ್ ಶೆಟ್ಟಿ, 'ಪೊಗರು' ಸಿನಿಮಾದಿಂದ ಧ್ರುವ ಸರ್ಜಾ ಹೀಗೆ ಕನ್ನಡದ ನಟರ ಸಿನಿಮಾಗಳು ತಮಿಳಿನಲ್ಲೂ ರಿಲೀಸ್ ಆಗಿ ಸದ್ದು ಮಾಡಿವೆ. ಇದೂ ಒಂದು ಕಾರಣವಿರಬಹುದೆಂದು ಲೆಕ್ಕ ಹಾಕಲಾಗುತ್ತಿದೆ.
ಕ್ಯೂನಲ್ಲಿ ಇವೆ ಪ್ಯಾನ್ ಇಂಡಿಯಾ ಸಿನಿಮಾಗಳು
ರಿಲೀಸ್ ಆಗಿರುವ ಸಿನಿಮಾಗಳಷ್ಟೇ ಅಲ್ಲ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿವೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ತಮಿಳಿನಲ್ಲೂ ರಿಲೀಸ್ ಆಗುತ್ತಿದೆ. ಹಾಗೇ ಉಪೇಂದ್ರ ಸಿನಿಮಾ 'ಯುಐ' ಕೂಡ ತಮಿಳಿನಲ್ಲಿ ರಿಲೀಸ್ ಆಗಲಿದೆ. ಶಿವರಾಜ್‌ಕುಮಾರ್ 'ಘೋಸ್ಟ್' ರಿಲೀಸ್ ಆಗಲಿದೆ. ಇನ್ನು ಎಚ್ಚೆತ್ತುಕೊಂಡ ಸುದೀಪ್ ಟ್ವೀಟ್ ಮಾಡಿದ್ದರೂ, ಅವರು ನಟಿಸುತ್ತಿರುವ 'ಮಾಕ್ಸ್'ದ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರು ತಮಿಳರು. ಹೀಗಾಗಿ ಸೂಪರ್‌ಸ್ಟಾರ್‌ಗಳು ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.


Click it and Unblock the Notifications











