Salaar: ಹೊಂಬಾಳೆ ಎದುರು ನೆಟ್ಟಿಗರ ಹೊಸ ಬೇಡಿಕೆ: ಇಲ್ಲದಿದ್ದರೆ ನಮ್ಮ ಆಯ್ಕೆ 'ವ್ಯಾಕ್ಸಿನ್ ವಾರ್' ಎಂದು ಎಚ್ಚರಿಕೆ
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗಪ್ಪಳಿಸಲಿದೆ. ಪ್ರಭಾಸ್ ಹೀರೊ ಆಗಿ ನಟಿಸಿದ್ದರೂ 'KGF' ಸರಣಿಗೆ ಕೆಲಸ ಮಾಡಿದ ತಂಡವೇ ಈ ಚಿತ್ರಕ್ಕೆ ಕೆಲಸ ಮಾಡ್ತಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಚಿತ್ರವನ್ನು ಪ್ರಶಾಂತ್ ನೀಲ್ ಕಟ್ಟಿಕೊಡುತ್ತಿದ್ದಾರೆ. ಬಹುತೇಕ ತಂತ್ರಜ್ಞರು ಕನ್ನಡದವರೇ ಆಗಿದ್ದಾರೆ. ದೇವರಾಜ್, ಭಜರಂಗಿ ಲೋಕಿ, ಪ್ರಮೋದ್ ಶೆಟ್ಟಿ ಸೇರಿದಂತೆ ಕನ್ನಡ ಕಲಾವಿದರ ಸಂಖ್ಯೆ ಕೂಡ ಜಾಸ್ತಿನೇ ಇದೆ. ಆಗಸ್ಟ್ ಕೊನೆಗೆ ಸಿನಿಮಾ ಟ್ರೈಲರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿದೆ. ಅಲ್ಲಿಂದ ಮುಂದೆ ಸಿನಿಮಾ ಪ್ರಚಾರ ಶುರುವಾಗಿದೆ. ಮಂಗಳೂರಿನಲ್ಲಿ ಚಿತ್ರದ ಸಣ್ಣ ಪುಟ್ಟ ಸನ್ನಿವೇಶಗಲಳ ಚಿತ್ರೀಕರಣ ನಡೀತಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಭರದಿಂದ ಸಾಗುತ್ತಿದೆ. ಇದೆಲ್ಲದರ ನಡುವೆ ಕನ್ನಡ ಸಿನಿರಸಿಕರು ಹೊಂಬಾಳೆ ಸಂಸ್ಥೆ ಎದುರು ಹೊಸ ಬೇಡಿಕೆ ಇಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಆದರೂ ಕನ್ನಡ ಡಬ್ಬಿಂಗ್ ವರ್ಷನ್ ಶೋಗಳ ಸಂಖ್ಯೆಯಲ್ಲಿ ತಾರತಮ್ಯ ನಡೀತಿದೆ. ಇತ್ತೀಚೆಗೆ ಬಿಡುಗಡೆಯಾದ 'ಜೈಲರ್' ಸಿನಿಮಾ ವಿಚಾರದಲ್ಲೂ ಇದೇ ನಡೀತು. ಕೆಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕನ್ನಡ ಶೋಗಳನ್ನು ಹೆಚ್ಚು ಕೊಡಿ, ಮೊದಲು ಕನ್ನಡ ವರ್ಷನ್ ಶೋ ಬುಕ್ಕಿಂಗ್ ಓಪನ್ ಮಾಡಿ ಎಂದರು. ಆದರೆ ಪ್ರಯೋಜನವಾಗಲಿಲ್ಲ. ತಮಿಳು ಚಿತ್ರವನ್ನು ಕನ್ನಡ ವಿತರಕರೇ ತೆಗೆದುಕೊಂಡು ಆ ರೀತಿ ಮಾಡಿದ್ದರು.
'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹೊಂಬಾಳೆ ಸಂಸ್ಥೆ ಬಳಿ ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಜನ ಕನ್ನಡದಲ್ಲೇ 'ಸಲಾರ್' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಹಾಗಾಗಿ 'ಸಲಾರ್' ಕನ್ನಡ ವರ್ಷನ್ ಶೋಗಳು ಹೆಚ್ಚು ಕೊಡಿ. ಮೊದಲು ಕನ್ನಡ ವರ್ಷನ್ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಮಾಡಿ. ಕನ್ನಡದಲ್ಲಿ ಪ್ರಚಾರ ಮಾಡಿ. ಇಲ್ಲದಿದ್ದರೆ ನಾವು 'ಸಲಾರ್' ಬದಲು 'ವ್ಯಾಕ್ಸಿನ್ ವಾರ್' ಸಿನಿಮಾ ನೋಡುತ್ತೇನೆ ಎನ್ನುತ್ತಿದ್ದಾರೆ. ಹಲವರು ಇದಕ್ಕೆ ದನಿಗೂಡಿಸಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರುವಾಗಲೂ ಯಾಕೆ ಕನ್ನಡಕ್ಕಿಂತ ಹೆಚ್ಚು ಪರಭಾಷೆಯ ವರ್ಷನ್ ಶೋಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ಕೆಲವರು ಕೇಳುತ್ತಲೇ ಬರುತ್ತಿದ್ದಾರೆ. ಈ ಹಿಂದೆ 'RRR' ಸಿನಿಮಾ ರಿಲೀಸ್ ಆಗಿದ್ದಾಗ ಹೆಚ್ಚು ಶೋಗಳನ್ನು ಕೊಟ್ಟಿದ್ದರು. ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಕನ್ನಡ ಕಲಿತು ಡಬ್ಬಿಂಗ್ ಮಾಡಿದ್ದರು. ಆದರೆ ನಂತರ ಬೇರೆ ಸಿನಿಮಾಗಳು ಇದನ್ನು ಅನುಸರಿಸಲಿಲ್ಲ. ಕೆಲವರು ಕನ್ನಡಕ್ಕೆ ಡಬ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಡಬ್ ಮಾಡಿದರೂ ಶೋಗಳನ್ನು ಕೊಡುತ್ತಿಲ್ಲ.
ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡುತ್ತಿಲ್ಲ. ನೇರವಾಗಿ ಹಿಂದಿಯಲ್ಲೇ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಈ ಬಗ್ಗೆ ಕೂಡ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೆಪ್ಟೆಂಬರ್ 7ಕ್ಕೆ ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾ ತೆರೆಗಪ್ಪಳಿಸಲಿದೆ. ನಯನತಾರಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಸೇತುಪತಿ, ಪ್ರಿಯಾಮಣಿ ಕೂಡ ತಾರಾಗಣದಲ್ಲಿದ್ದಾರೆ. ಇನ್ನು ದಳಪತಿ ವಿಜಯ್, ಸಂಜಯ್ ದತ್, ದೀಪಿಕಾ ಪಡುಕೋಣೆ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











