ಬೊಮ್ಮಾಯಿ ಭೇಟಿಯಾಗಿ ಕಾಲಿಗೆ ನಮಸ್ಕರಿಸಿದ ರಿಷಬ್; ಬಿಜೆಪಿ ಪರ ಶೆಟ್ರು ಪ್ರಚಾರ ಮಾಡ್ತಾರಾ? ಸಿಎಂ ಹೇಳಿದ್ದಿಷ್ಟು
ಮುಂದಿನ ತಿಂಗಳು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಚುನಾವಣೆ ದಿನಾಂಕ ಘೋಷಣೆಗೊಂಡ ಬಳಿಕ ಪ್ರಚಾರದ ಚಟುವಟಿಕೆಗಳು ಜೋರಾಗಿವೆ. ಇನ್ನು ಪಕ್ಷಗಳು ತಮ್ಮ ಪರ ಪ್ರಚಾರ ಮಾಡಲು ಸಿನಿಮಾ ರಂಗದ ಕಲಾವಿದರನ್ನು ಸಂಪರ್ಕಿಸಿ ಆಹ್ವಾನಿಸುವುದು ಕಾಮನ್. ಹೌದು, ಜನ ಸಾಮಾನ್ಯರಿಗೆ ಹತ್ತಿರವಾಗಿರುವ ಹಾಗೂ ಹೆಚ್ಚು ಪ್ರೀತಿಯನ್ನು ಗಳಿಸಿರುವ ಸ್ಟಾರ್ ನಟರನ್ನು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಬಳಸಿಕೊಳ್ಳಲಿವೆ.
ಇನ್ನು ಪ್ರತಿ ಬಾರಿಯ ಹಾಗೆ ಈ ಬಾರಿಯೂ ಸಹ ಸಿನಿಮಾ ಕಲಾವಿದರನ್ನು ರಾಜಕೀಯ ಪಕ್ಷಗಳು ತಮ್ಮ ಪರ ಪ್ರಚಾರ ಮಾಡಲು ಸೆಳೆದಿದ್ದು, ವಿಶೇಷವಾಗಿ ಈ ಬಾರಿ ಕಿಚ್ಚ ಸುದೀಪ್ ರೀತಿಯ ದೊಡ್ಡ ನಟ ಪ್ರಚಾರ ಮಾಡಲು ಮುಂದಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿತ್ತು ಹಾಗೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಮೊದಲಿಗೆ ಬಿಜೆಪಿ ಪಕ್ಷವನ್ನು ಸುದೀಪ್ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ನಾನು ಕೇವಲ ನನ್ನ ಆಪ್ತರಾದ ಬಸವರಾಜ್ ಬೊಮ್ಮಾಯಿ ಅವರ ಸಲುವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿಕೆ ನೀಡುವುದರ ಮೂಲಕ ನಾನು ಯಾವ ಪಕ್ಷದ ಪರವೂ ಅಲ್ಲ ಎಂಬ ಹೇಳಿಕೆ ನೀಡಿದ್ದರು.
ಹೀಗೆ ಸ್ಟಾರ್ ನಟನ ಬೆಂಬಲ ಬಿಜೆಪಿ ಪಕ್ಷಕ್ಕೆ ಸಿಕ್ಕಂತಾಗಿದ್ದು, ಇದೀಗ ಮತ್ತೊಬ್ಬ ಸ್ಟಾರ್ ನಟ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಹೌದು, ಕಳೆದ ವರ್ಷ ಕಾಂತಾರ ಚಿತ್ರವನ್ನು ನಿರ್ದೇಶಿಸಿ, ಅದ್ಭುತವಾಗಿ ನಟಿಸಿ ಇಡೀ ದೇಶದಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಿಷಬ್ ಶೆಟ್ಟಿ ಹೆಸರು ಇದೀಗ ಚುನಾವಣೆಯಲ್ಲಿ ಅವರು ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಕೇಳಿ ಬರುತ್ತಿದೆ.

ಇದಕ್ಕೆ ಕಾರಣ ರಿಷಬ್ ಶೆಟ್ಟಿ ಹಾಗೂ ಬಸವರಾಜ ಬೊಮ್ಮಾಯಿ ಒಟ್ಟಿಗೆ ಕಾಣಿಸಿಕೊಂಡಿರುವುದು. ಹೌದು, ಕೊಲ್ಲೂರಿನ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ದೇವಸ್ಥಾನದಿಂದ ದರ್ಶನ್ ಮುಗಿಸಿ ಹೊರಬರುತ್ತಿರುವ ವಿಡಿಯೊಗಳು ಹಾಗೂ ರಿಷಬ್ ಶೆಟ್ಟಿ ಬೊಮ್ಮಾಯಿ ಕಾಲಿಗೆ ಬೀಳುತ್ತಿರುವ ವಿಡಿಯೊಗಳು ವೈರಲ್ ಆಗಿವೆ ಹಾಗೂ ಕರಾವಳಿ ಭಾಗದಲ್ಲಿ ರಿಷಬ್ ಶೆಟ್ಟಿ ಬಿಜೆಪಿ ಪರ ಕ್ಯಾಂಪೇನ್ ಮಾಡ್ತಾರಾ ಎಂಬ ಅನುಮಾನ ಮೂಡಿದೆ.
ಇನ್ನು ಈ ಕುರಿತು ಸ್ಥಳದಲ್ಲಿಯೇ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಕರಾವಳಿ ಕ್ಯಾಂಪೇನ್ ಬಗ್ಗೆ ಏನಾದ್ರೂ ಮಾತನಾಡಿದ್ದೀರ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಂತೆ "ಇಲ್ಲ. ನಾನು ಅದರ ಬಗ್ಗೆ ಏನೂ ಮಾತನಾಡಿಲ್ಲ. ನಮಗೂ ಅವರಿಗೂ ಒಳ್ಳೆಯ ಸ್ನೇಹ ಮೊದಲಿನಿಂದಲೂ ಇದೆ. ಒಬ್ಬ ಒಳ್ಳೆಯ ಚಿತ್ರನಟ. ಅವರು ಇಲ್ಲೇ ಇದ್ರಂತೆ. ಕುಂದಾಪುರದಲ್ಲಿ ಇದ್ರಂತೆ. ನಾನು ಬರೋದು ನೋಡಿ ಬಂದು ಭೇಟಿಯಾಗಿದ್ದಾರೆ. ನಾನು ಇಲ್ಲಿ ಬರೋವರೆಗೂ ಅವರು ಇಲ್ಲಿ ಇರೋದು ನನಗೆ ಗೊತ್ತಿರಲಿಲ್ಲ. ಇದು ಕೋ ಇನ್ಸಿಡೆನ್ಸ್ ಅಷ್ಟೇ" ಎಂದರು.
ಮುಂದುವರಿದು ಮಾತನಾಡಿದ ಬಸವರಾಜ ಬೊಮ್ಮಾಯಿ "ಅವರು ನಮ್ಮ ಸಿದ್ಧಾಂತಕ್ಕೆ ಬಹಳ ಹತ್ತಿರವಾಗಿರುವವರು. ನಮ್ಮ ಸಿದ್ಧಾಂತವನ್ನು ಬಹಿರಂಗವಾಗಿ ಪ್ರತಿಪಾದನೆ ಮಾಡ್ತಾರೆ. ಚಿತ್ರನಟ ಅಂತಲ್ಲ. ಆ ವ್ಯಕ್ತಿಯ ವಿಚಾರಗಳೇ ಆ ರೀತಿ ಇದ್ದಾವೆ. ಅದನ್ನು ಆಗಾಗ ಪ್ರಕಟಣೆ ಮಾಡಿದ್ದಾರೆ. ಆದರೆ ಇಲ್ಲಿ ಬರೋವರೆಗೂ ಅವರು ಇಲ್ಲಿ ಇರೋದು ನನಗೆ ಗೊತ್ತಿರಲಿಲ್ಲ. ನನಗೂ ಸಹ ಆಶ್ಚರ್ಯ ಆಯಿತು" ಎಂದು ಹೇಳಿಕೆ ನೀಡಿದರು.
ಈ ಮೂಲಕ ರಿಷಬ್ ಶೆಟ್ಟಿಗೆ ಪ್ರಚಾರ ಮಾಡುವ ಕುರಿತು ಯಾವುದೇ ಆಹ್ವಾನವನ್ನು ನೀಡಿಲ್ಲ ಎಂದ ಬಸವರಾಜ ಬೊಮ್ಮಾಯಿ ಅನಿರೀಕ್ಷಿತ ಭೇಟಿ ಎಂದರು. ಆದರೂ ಸಹ ರಿಷಬ್ ಬಿಜೆಪಿ ಪರ ಪ್ರಚಾರ ಮಾಡಬಹುದಾ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಕುರಿತು ರಿಷಬ್ ಶೆಟ್ಟಿ ಅವರೇ ಮುಂದೆ ಬಂದು ಉತ್ತರ ನೀಡಿ ಸ್ಪಷ್ಟಪಡಿಸಬೇಕಿದೆ.


Click it and Unblock the Notifications











