ಲೋ ಇಂಗ್ಲೀಷ್ ಮೀಡಿಯಂ, 'ಭೀಮ' ದುನಿಯಾ ವಿಜಯ್ ಕೌಂಟರ್ ಯಾರಿಗೆ?
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಆಗಸ್ಟ್ 9ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೆಯುತ್ತಿದೆ. 'ಸಲಗ' ಬಳಿಕ ಮತ್ತೆ ವಿಜಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
'ಭೀಮ' ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗಿ ಗಮನ ಸೆಳೆದಿದೆ. ಪಕ್ಕಾ ಮಾಸ್ ರಗಡ್ ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಿಕ್ ಕೊಡುತ್ತಿದೆ. ಸದ್ಯ 'ಬೂಮ್ ಬೂಮ್ ಬೆಂಗಳೂರು' ಎನ್ನುವ ಲಿರಿಕಲ್ ಸಾಂಗ್ ಬಂದು ಸದ್ದು ಮಾಡ್ತಿದೆ. ಜೆಜಿ ಕುಮಾರ ಜೊತೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ ಸದಸ್ಯರು ಹಾಡಿಗೆ ದನಿಯಾಗಿದ್ದಾರೆ. ಜೆಪಿ ರಮೇಶ ಸಾಹಿತ್ಯವಿದೆ.

ಚರಣ್ ರಾಜ್ 'ಭೀಮ' ಚಿತ್ರಕ್ಕೆ ಟಪ್ಪಾಂಗಿಚ್ಚಿ ಟ್ಯೂನ್‌ಗಳನ್ನು ಹಾಕಿದ್ದಾರೆ. ಪಕ್ಕಾ ಲೋಕಲ್ ಶೈಲಿಯ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಒಂದಕ್ಕಿಂತ ಒಂದು ಬಹಳ ವಿಭಿನ್ನ ಮತ್ತು ವಿಶೇಷವಾಗಿದೆ. ಈ ಹಿಂದೆ 'ಸಲಗ' ಚಿತ್ರಕ್ಕೆ ಸಿದ್ದಿ ಸಮುದಾಯದ ಗಾಯಕರನ್ನು ಬಳಸಿಕೊಂಡು ಪ್ರಮೋಷನಲ್ ಸಾಂಗ್ ಮಾಡಲಾಗಿತ್ತು. ಇದೀಗ 'ಭೀಮ' ಚಿತ್ರದಲ್ಲಿ 'ಬೂಮ್ ಬೂಮ್' ಸಾಂಗ್ ಮಾಡಿದ್ದಾರೆ.
ಸಮಾಜದಲ್ಲಿ ವ್ಯಾಪಿಸಿರುವ ಡ್ರಗ್ಸ್ ಮಾಫಿಯಾ ಸುತ್ತಾ 'ಭೀಮ' ಸಿನಿಮಾ ಕಥೆ ಸುತ್ತುತ್ತದೆ. ಡ್ರಗ್ ಮುಕ್ತ ಸಮಾಜದ ಸಂದೇಶ ಚಿತ್ರದಲ್ಲಿದೆ. ದೇಶಕ್ಕೆ ಬೆನ್ನೆಲುಬು ಆಗಬೇಕಿರುವ ಯುವ ಸಮೂಹ ಡ್ರಗ್ಸ್ ಚಟಕ್ಕೆ ಬಿದ್ದು ತಮ್ಮನ್ನು ತಾವು ಕೊಂದುಕೊಳ್ಳುವುದರ ಜೊತೆಗೆ ತಮ್ಮನ್ನು ನಂಬಿಕೊಂಡವರಿಗೂ ನೋವುಂಟು ಮಾಡುತ್ತಿದ್ದಾರೆ. ಇದೆಲ್ಲದರ ಸುತ್ತಾ 'ಭೀಮ'ನ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೊಸ ಪ್ರತಿಭೆ ಅಶ್ವಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪಕ್ಕಾ ರಾ ಶೈಲಿಯಲ್ಲಿ 'ಭೀಮ' ಸಿನಿಮಾ ಕಥೆ ಕಟ್ಟಿಕೊಡಲಾಗುತ್ತಿದೆ. ಶಿವಸೇನ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಕೃಷ್ಣ ಕ್ರಿಯೇಷನ್ಸ್ ಹಾಗೂ ಜಗದೀಶ್ ಫಿಲ್ಮ್ಸ್ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಿವೆ. ಒಂದಷ್ಟು ಹೊಸ ಪ್ರತಿಭೆಗಳಿಗೆ ವಿಜಯ್ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿದ್ದಾರೆ.
ಸದ್ಯ ಬಿಡುಗಡೆ ಆಗಿರುವ 'ಬೂಮ್ ಬೂಮ್' ಸಾಂಗ್‌ನಲ್ಲಿರುವ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಹಾಡಿನ ಕೊನೆಗೆ 'ಲೋ ಇಂಗ್ಲೀಷ್ ಮೀಡಿಯಂ ಬಾರೋ ನಮ್ದೆ ಕನ್ನಡ ಸ್ಟೇಡಿಯಂ' ಎಂದು 'ಭೀಮ' ವಿಜಯ್ ಹೇಳೊದು ಗಮನ ಸೆಳೆದಿದೆ. ಸದ್ಯ ಈ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ವಿಜಯ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ, ಇವರಿಗೆ ಕೌಂಟರ್ ಕೊಟ್ಟಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಚಿತ್ರರಂಗದಲ್ಲಿ ಸ್ಟಾರ್ ವಾರ್, ಸ್ಟಾರ್ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾ ಟ್ರೆಂಡ್ ಶುರುವಾದ ಬಳಿಕ ಅದು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಇಂತಹ ಡೈಲಾಗ್‌ಗಳು ಸಹಜವಾಗಿಯೇ ಸದ್ದು ಮಾಡುತ್ತವೆ. ಆದರೆ ಚಿತ್ರರಂಗದಲ್ಲಿ ದುನಿಯಾ ವಿಜಯ್ ಎಲ್ಲರೊಟ್ಟಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗಾಗಿ ಯಾರಿಗೋ ಟಾಂಗ್ ಕೊಡೋಕೆ ಈ ಡೈಲಾಗ್ ಇಟ್ಟಿಲ್ಲ ಎನ್ನುವುದು ಗೊತ್ತಾಗುತ್ತದೆ.
ಕಮರ್ಷಿಯಲ್ ಸಿನಿಮಾಗಳು ಅಂದಮೇಲೆ ಅಭಿಮಾನಿಗಳನ್ನು ಸೆಳೆಯಲು ಇಂತಹ ಕ್ಯಾಚಿ ಡೈಲಾಗ್‌ಗಳನ್ನು ಇಡುವುದು ಸಹಜ. ಅದೇ ರೀತಿ 'ಭೀಮ' ಚಿತ್ರದ ಈ ಸಾಲುಗಳು ಬಂದಿದೆ ಅಷ್ಟೆ. ಈ ಡೈಲಾಗ್ ಯಾಕೆ ಬರುತ್ತದೆ ಎನ್ನುವುದು ಆಗಸ್ಟ್ 9ಕ್ಕೆ ಸಿನಿಮಾ ಬಿಡುಗಡೆ ಆದ ಬಳಿಕ ಗೊತ್ತಾಗಲಿದೆ.


Click it and Unblock the Notifications











