500 ಕೋಟಿ ಬೇಡ, ಒಂದು ಬಾಟಲ್ ಎಣ್ಣೆ ಕೊಟ್ರೆ ಸಾಕು ಮಾಸ್ಟರ್‌ಪೀಸ್ ಫಿಕ್ಸ್; ಆದಿಪುರುಷ್ ನೋವಲ್ಲಿ ನೀಲ್ ಜಪ!
ರೆಬೆಲ್ ಸ್ಟಾರ್ ಪ್ರಭಾಸ್ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ಇವರು ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಬಾಹುಬಲಿ ಮೂಲಕ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡರು. ಆ ಬಳಿಕ ಪ್ರಭಾಸ್ ಚಿತ್ರಗಳೆಂದರೆ ಕೇವಲ ತೆಲುಗು ರಾಜ್ಯಗಳ ಸಿನಿ ರಸಿಕರು ಮಾತ್ರವಲ್ಲದೇ ಇಡೀ ದೇಶದ ಚಿತ್ರ ಪ್ರೇಮಿಗಳೇ ಎದುರು ನೋಡುವ ಹಾಗಾಯಿತು.
ಹೀಗೆ ಬಾಹುಬಲಿ ಚಿತ್ರ ಸರಣಿ ಮೂಲಕ ಬೃಹತ್ ಖ್ಯಾತಿಯನ್ನು ಗಳಿಸಿದ ಪ್ರಭಾಸ್ ಮುಂದಿನ ಚಿತ್ರಗಳ ಮೇಲೆ ಸಿನಿ ರಸಿಕರಿಗೆ ನಿರೀಕ್ಷೆ ಬೆಟ್ಟದಷ್ಟು ಉಂಟಾಗಿತ್ತು. ಹೀಗಾಗಿ ಬಾಹುಬಲಿ ಬಳಿಕ ಬಂದ ಸಾಹೋ ಹಾಗೂ ರಾಧೆ ಶ್ಯಾಮ್ ಮೇಲೂ ಸಹ ಸಿನಿ ರಸಿಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು.

ಆದರೆ ಈ ಎರಡೂ ಚಿತ್ರಗಳೂ ಸಹ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಸಾಹೋ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ನಿರ್ಮಾಪಕರಿಗೆ ಕಡಿಮೆ ಹೊರೆ ಕೊಟ್ಟರೆ, ರಾಧೆ ಶ್ಯಾಮ್ ನೂರು ಕೋಟಿ ನಷ್ಟವನ್ನು ಉಂಟು ಮಾಡಿತ್ತು. ಈ ಮೂಲಕ ಪ್ರಭಾಸ್ ಬಾಹುಬಲಿಯ ದಿಗ್ವಿಜಯದ ಬಳಿಕ ಕ್ಲೀನ್ ಹಿಟ್ ಸಿಗದೇ ಗೆಲುವಿಗಾಗಿ ಕಾಯುವಂತಾಗಿತ್ತು.
ಸಾಹೋ ಹಾಗೂ ರಾಧೆ ಶ್ಯಾಮ್ ನೀಡದ ದೊಡ್ಡ ಗೆಲುವನ್ನು ಆದಿಪುರುಷ್ ಚಿತ್ರ ನೀಡಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ ಈ ನಂಬಿಕೆ ಸಹ ಯಾಕೋ ಕೈಕೊಟ್ಟಂತೆ ಕಾಣುತ್ತಿದೆ. ಹೌದು, ಇಂದು ( ಜೂನ್ 16 ) ಬಹು ನಿರೀಕ್ಷಿತ ಆದಿಪುರುಷ್ ಸಿನಿಮಾ ಬಿಡುಗಡೆಗೊಂಡಿದ್ದು, ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳೂ ಸಹ ಚಿತ್ರ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ 500 ಕೋಟಿ ಬಜೆಟ್‌ನ ದೈತ್ಯ ಆದಿಪುರುಷ್ ಚಿತ್ರ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿದ್ದು, ನಿರೀಕ್ಷಿಸಿದ್ದ ಬ್ಯುಸಿನೆಸ್ ಮಾಡುವುದು ಅನುಮಾನವೆನಿಸಿದೆ.
ಇದೇ ಸಮಯಕ್ಕೆ ಸಿನಿ ಪ್ರೇಮಿಗಳು ಹಾಗೂ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಸಹ ಹೋಯಿತು, ಇನ್ನೇನಿದ್ದರೂ ಸಲಾರ್ ಗತಿ ಎಂದು ಬರೆದುಕೊಳ್ಳಲಾರಂಭಿಸಿದ್ದಾರೆ.
ಹೌದು, ಪ್ರಭಾಸ್ ನಟಿಸುತ್ತಿರುವ ಸಲಾರ್ ಚಿತ್ರ ಇದೇ ತಿಂಗಳ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲು ತಯಾರಾಗುತ್ತಿದೆ. ಹೀಗಾಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್ ನೀಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಆದಿಪುರುಷ್ ಅಂದುಕೊಂಡಂತೆ ಇಲ್ಲ ಎಂಬ ಸತ್ಯ ತಿಳಿದ ಮೇಲಂತೂ ಎಲ್ಲರೂ ಪ್ರಶಾಂತ್ ನೀಲ್ ಮೇಲೆ ಭಾರ ಹಾಕಿಬಿಡಿ ಎಂಬ ಟ್ವೀಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ಆದಿಪುರುಷ್ ಚಿತ್ರಕ್ಕೆ ಹಾಕಿದ್ದ 500 ಕೋಟಿಯನ್ನು ಪ್ರಶಾಂತ್ ನೀಲ್‌ಗೆ ನೀಡಿದ್ರೆ ಕೆಜಿಎಫ್ ರೀತಿಯ ನಾಲ್ಕೈದು ಸಿನಿಮಾಗಳನ್ನು ಕಟ್ಟಿಕೊಡ್ತಿದ್ರು ಎಂದು ಕಾಮೆಂಟ್ ಹಾಕಿದ್ದಾರೆ. ಅದರಲ್ಲಿ ಓರ್ವ ನೆಟ್ಟಿಗ ಪ್ರಶಾಂತ್ ನೀಲ್ ಕುರಿತು ಮಾಡಿರುವ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ.
"ಹೆವಿ ವಿಎಫ್ಎಕ್ಸ್‌ನ ಅಗತ್ಯವಿಲ್ಲ. ಸಿಕ್ಸ್ ಪ್ಯಾಕ್ ಬಾಡಿಯ ಅಗತ್ಯವಿಲ್ಲ. 500ರಿಂದ 600 ಕೋಟಿ ಬಜೆಟ್‌ನ ಅಗತ್ಯವಿಲ್ಲ. ಕೇವಲ ಒಂದು ಫಾರಿನ್ ವಿಸ್ಕಿ, ಕ್ರಿಕೆಟ್ ಬ್ಯಾಟ್ ಹಾಗೂ ಬಾಲ್, ಹೊಗೆ, ಧೂಳು ಮತ್ತು ಬೆಂಕಿಯನ್ನು ಕೊಡಿ. ಇದನ್ನು ಉಪಯೋಗಿಸಿಕೊಂಡು ಅವರು ಮಾಸ್ಟರ್‌ಪೀಸ್ ಸಿನಿಮಾ ಕೊಡ್ತಾರೆ" ಎಂದು ಪ್ರಶಾಂತ್ ನೀಲ್ ಫೋಟೊ ಹಂಚಿಕೊಂಡಿದ್ದಾರೆ.
ಹೌದು, ಪ್ರಶಾಂತ್ ನೀಲ್ ಈ ಹಿಂದೆ ಸಂದರ್ಶನವೊಂದರಲ್ಲಿ ತಾನು ಕೆಲವೊಮ್ಮೆ ಚಿತ್ರದ ಕಥೆ ಬರೆಯುವಾಗಿ ಮದ್ಯಪಾನ ಮಾಡಿ ಬರೆಯುತ್ತೇನೆ ಎಂದು ಹೇಳಿಕೊಂಡಿದ್ದರು. ಆಗಿನಿಂದ ಪ್ರಶಾಂತ್ ನೀಲ್ ಫ್ಯಾನ್ಸ್ ಹಾಗೂ ನೆಟ್ಟಿಗರು ಅವರ ಕುರಿತು ಹೊಗಳಿ ಬರೆಯುವಾಗ ಈ ರೀತಿಯ ಸಾಲುಗಳನ್ನು ಬರೆಯಲಾರಂಭಿಸಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಹಾಗೂ ಪ್ರಭಾಸ್ ಅಭಿಮಾನಿಗಳು ಆದಿಪುರುಷ್ ಸೋಲಿನಲ್ಲಿ ಪ್ರಶಾಂತ್ ನೀಲ್ ಜಪ ಮಾಡುತ್ತಿದ್ದಾರೆ.


Click it and Unblock the Notifications











