ಸೀರೆ ಉಟ್ಟು ಮಿಂಚಿದ ಪವಿತ್ರಾ ಗೌಡ; ವೀಡಿಯೋ ನೋಡಿ ಹೆದರುತ್ತಿರುವ ನೆಟ್ಟಿಗರು!
ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನವಾಗಿದ್ದ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದಿದ್ದಾರೆ. ಇತ್ತೀಚೆಗೆ ಕುಂಭಮೇಳದಲ್ಲಿ ಕುಡ ಭಾಗಿ ಆಗಿದ್ದರು. ಪುಣ್ಯಸ್ನಾನ ಮಾಡಿದ್ದರು. ಬಳಿಕ ಕಾಶಿ ವಿಶ್ವನಾಥನ ಸನ್ನಿಧಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ಸೀರೆ ಉಟ್ಟು ಹೊಸದೊಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ.
ನಿಧಾನವಾಗಿ ಪವಿತ್ರಾ ಗೌಡ ತಮ್ಮ ಹಳೆಯ ಜೀವನಕ್ಕೆ ಮರಳುತ್ತಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಕೆಲ ದಿನ ವಿಶ್ರಾಂತಿ ಪಡೆದಿದ್ದರು. ಇದನ್ನು ತಮ್ಮ ಬ್ಯೂಟಿಕ್ಯು ಸ್ಟುಡಿಯೋವನ್ನು ಹೊರ ರೂಪದಲ್ಲಿ ಪುನರಾರಂಭಿಸಿದ್ದಾರೆ. ಜೊತೆಗೆ ಟೆಂಪಲ್ ರನ್ ಮುಂದುವರೆಸಿದ್ದಾರೆ. ಮತ್ತೆ ಮೊದಲಿನಂತೆ ಇನ್‌ಸ್ಟಾಗ್ರಾಮ್ ಸ್ಟೋರಿ, ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಸಣ್ಣ ಸಣ್ಣದೊಂದು ರೀಲ್ಸ್ ವೀಡಿಯೋ ಪೋಸ್ಟ್ ಮಾಡಿದ್ದಾರೆ.

"ಸೀರೆ ಕೇವಲ ಒಂದು ಉಡುಗೆಯಲ್ಲ, ಅದು ಒಂದು ಎಮೋಷನ್" ಎಂದು ಬರೆದು ಪವಿತ್ರಾ ಗೌಡ ವೀಡಿಯೋ ಹಂಚಿಕೊಂಡಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ಸೀರೆ ಹೊಸ ಸ್ಟಾಕ್ ಬಂದಿದೆ ಎಂದು ತಿಳಿಸಿದ್ದಾರೆ. ಸದ್ಯ ಪವಿತ್ರಾ ಮಾಡಿರುವ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸಿ ಕೆಲವರು ನಮಗೆ ಕಾಮೆಂಟ್ ಮಾಡಲು ಭಯವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಪವಿತ್ರಾ ಗೌಡ ಅವರ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಬಳಿಕ ವಾಟ್ಸಪ್‌ನಲ್ಲಿ ಚಾಟ್ ಮಾಡಲು ಆರಂಭಿಸಿ ಕೆಟ್ಟ ಮೆಸೇಜ್, ಫೋಟೊಗಳನ್ನು ಕಳುಹಿಸಿದ್ದ. ಆತನಿಗೆ ಬುದ್ಧ ಕಲಿಸಲು ನಟ ದರ್ಶನ್ ಮುಂದಾಗಿದ್ದರು ಎಂದು ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿತ್ತು.
ಕಳೆದ ವರ್ಷ ಜೂನ್ ತಿಂಗಳಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ದರ್ಶನ್ ಸೂಚನೆ ಮೇರೆಗೆ ಆತನನ್ನು ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡಲಾಗಿತ್ತು. ಈ ವೇಳೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪವಿತ್ರಾ ಗೌಡ ಹಾಕುತ್ತಿದ್ದ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡಲು ಆರಂಭಿಸಿದ್ದ. ಅದೇ ದುರಂತಕ್ಕೆ ಮೂಲ ಕಾರಣವಾಗಿತ್ತು.
ರೇಣುಕಾಸ್ವಾಮಿ ಬಗ್ಗೆ ದರ್ಶನ್ ಬಳಿ ಪವಿತ್ರಾ ಗೌಡ ಹೇಳಿದ್ದರು. ಹಾಗಾಗಿಯೇ ಆತನನ್ನು ಅಪಹರಿಸಿ ಕರೆತಂದು ಪಾಠ ಕಲಿಸುವ ಪ್ರಯತ್ನ ನಡೆದಿತ್ತು ಎಂದು ವರದಿ ಆಗಿತ್ತು. ಹಾಗಾಗಿ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ ಎನಿಸಿಕೊಂಡಿದ್ದರು. ದರ್ಶನ್ ತಮ್ಮ ಆಪ್ತರ ಮೂಲಕ ಆತನನ್ನು ಕರೆತಂದಿದ್ದರು ಎನ್ನಲಾಗಿತ್ತು. ಹಾಗಾಗಿ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿ ಜೈಲು ಸೇರುವಂತಾಗಿತ್ತು.
ನಟಿ ಪವಿತ್ರಾ ಗೌಡ 179 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಂತಾಗಿತ್ತು. ನಡುವೆ ನಟ ದರ್ಶನ್‌ಗೆ ಪರಪ್ಪನ ಅಗ್ರಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿಬಂದಾಗ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಬಳ್ಳಾರಿ ಜೈಲಿಗೆ ದರ್ಶನ್ ಹೋಗಬೇಕಾಯಿತು. ಆದರೆ ಪವಿತ್ರಾ ಗೌಡ ಸೇರಿದಂತೆ ಕೆಲವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು.
ಡಿಸೆಂಬರ್ 13ರಂದು ಪವಿತ್ರಾ ಗೌಡಗೆ ಜಾಮೀನು ಮಂಜೂರಾಗಿತ್ತು. ಸೆಷನ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಜಾಮೀನು ಕೊಡಿಸುವಲ್ಲಿ ಪವಿತ್ರಾ ಗೌಡ ಪರ ವಕೀಲರು ಯಶಸ್ವಿಯಾಗಿದ್ದರು. ಡಿಸೆಂಬರ್ 17ರಂದು ಪವಿತ್ರಾ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದರು.


Click it and Unblock the Notifications











