ಅವಕಾಶ ನೀಡಿದ ಅಂಜನಿಪುತ್ರನನ್ನ ಕಡೆಗಣಿಸಿದ ರಶ್ಮಿಕಾ ಮಂದಣ್ಣ ; ನಂಬಿದವರನ್ನು ಒದ್ದು ನಡೆದಿದ್ದು ಸರಿನಾ..?
ಹೆಚ್ಚೇನಲ್ಲ ... ಕೇವಲ 08 ವರ್ಷದ ಹಿಂದೆ, ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದು ರಾತ್ರೋ ರಾತ್ರಿ ಸ್ಟಾರ್ ಆದವರು ರಶ್ಮಿಕಾ ಮಂದಣ್ಣ. ಆ ನಂತರ ಚೊಚ್ಚಲ ಚಿತ್ರವನ್ನೇ ಟ್ರಂಪ್ ಕಾರ್ಡಾಗಿ ಇಟ್ಟುಕೊಂಡು ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ರಶ್ಮಿಕಾ ಬೆರಳೆಣಿಕೆಯ ದಿನಗಳಲ್ಲೇ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದು ಕಣ್ಮುಂದೆಯೇ ಇದೆ. ರಶ್ಮಿಕಾ ಅವರ ಈ ಬೆಳವಣಿಗೆಯ ಬಗ್ಗೆ ಕನ್ನಡಿಗರಿಗೆ ಹೆಮ್ಮೆಯೂ ಇದೆ.
ಆದರೆ, ರಶ್ಮಿಕಾ ಮಂದಣ್ಣಗೆ ಕನ್ನಡದ ಮೇಲಾಗಲಿ, ಕನ್ನಡ ಚಿತ್ರರಂಗದ ಮೇಲಾಗಲಿ ಅಭಿಮಾನ ಇಲ್ಲ. ಇದು .. ಕಾಲ ಕಾಲಕ್ಕೆ ಸಾಬೀತಾಗ್ತಾನೇ ಬಂದಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಅಂಜನಿ ಪುತ್ರ ಚಿತ್ರದ ಮರುಬಿಡುಗಡೆಯ ಸಂದರ್ಭದಲ್ಲಿ ಜಗಜ್ಜಾಹೀರಾಗಿದೆ.

ಹೌದು, ನಿಮಗೆ ಗೊತ್ತು.. ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಅಂಜನಿ ಪುತ್ರ ಇನ್ನೇನು ಕೆಲವೇ ಗಂಟೆಯಲ್ಲಿ ಅಂದರೆ ಮೇ ಹತ್ತಕ್ಕೆ ರಾಜ್ಯದೆಲ್ಲೆಡೆ ಮರು ಬಿಡುಗಡೆಯಾಗಲಿದೆ. ದೊಡ್ಮನೆ ಅಭಿಮಾನಿ ಬಳಗ ಅಗಲಿದ ಅಪ್ಪು ಅವರನ್ನ ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡಲು, ಕಾತುರದಿಂದ ಕಾಯುತ್ತಿದೆ.
ಆದರೆ.. ಈ ಚಿತ್ರದ ಕಥಾನಾಯಕಿಯಾದ ರಶ್ಮಿಕಾ ಮಂದಣ್ಣ ಮಾತ್ರ ತನಗೂ ಮತ್ತು ಅಂಜನಿ ಪುತ್ರ ಚಿತ್ರಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಪ್ರಚಾರಕ್ಕೆ ಬರುವುದು ಬೇಡ, ನಿರ್ಮಾಪಕ ಎಂ.ಎನ್.ಕುಮಾರ್ ಜೊತೆ ನಿಲ್ಲುವುದು ಬೇಡ ಕೊನೆ ಪಕ್ಷ ತಮಗೆ ಸಮಯ ಸಿಕ್ಕಾಗ ಸಾಮಾಜಿಕ ಜಾಲತಾಣದ ಮೂಲಕವಾದರೂ ಚಿತ್ರದ ಬಗ್ಗೆ ಮಾತನಾಡಬಹುದಿತ್ತು. ಅಗಲಿದ ಅಪ್ಪು ಅವರ ಜೊತೆ ಇದ್ದ ತಮ್ಮ ನೆನಪುಗಳನ್ನ ಹಂಚಿಕೊಳ್ಳಬೇಕಿತ್ತು.

ಇನ್ನೂ ಅಪ್ಪು ಜೊತೆ ತೆರೆ ಹಂಚಿಕೊಳ್ಳಬೇಕೆಂಬ ಕನಸು ಅನೇಕ ನಾಯಕಿಯರಲ್ಲಿತ್ತು. ಅನೇಕ ನಾಯಕಿಯರಿಗೆ ಆ ಅವಕಾಶ ಸಿಗಲಿಲ್ಲ. ಇವತ್ತು ಕೂಡ ಆ ಕೊರಗು ಕನ್ನಡದ ಅನೇಕ ನಾಯಕಿಯರಲ್ಲಿದೆ. ಆದರೆ, ತನ್ನ ಎರಡನೇ ಚಿತ್ರದಲ್ಲಿಯೇ ರಶ್ಮಿಕಾಗೆ ಪುನೀತ್ ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳುವ ಸುವರ್ಣ ಅವಕಾಶ ಸಿಕ್ಕಿತ್ತು. ಈ ಚಿತ್ರದ ಚೆಂದ..ಚೆಂದ.. ಹಾಡು ಇವತ್ತು ಕೂಡ ಜನಪ್ರಿಯ. ಈ ಕಾರಣಕ್ಕಾದರೂ ತಾವು ಮಾಡಿದ ಅಂಜನಿಪುತ್ರ ಚಿತ್ರದ ಮೇಲೆ ಅಭಿಮಾನ ಇರದೇ ಇದ್ದರೂ ಕೂಡ ತನ್ನ ಎರಡನೇ ಚಿತ್ರದಲ್ಲಿಯೇ ಅಪ್ಪು ಜೊತೆ ತೆರೆ ಹಂಚಿಕೊಳ್ಳುವ ಭಾಗ್ಯ ಸಿಕ್ಕಿದ್ದಕ್ಕಾದರೂ ರಶ್ಮಿಕಾ ಮಾತನಾಡಬೇಕಿತ್ತು. ಕೃತಜ್ಞತಾಭಾವದಿಂದ ಅಂಜನಿಪುತ್ರ ಚಿತ್ರದಲ್ಲಿ ಅವಕಾಶ ಸಿಗಲು ಕಾರಣರಾದ ಎಲ್ಲರನ್ನೂ ಈ ಸಮಯದಲ್ಲಿ ಸ್ಮರಿಸಬೇಕಿತ್ತು. ಆದರೆ, ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ಇದ್ಯಾವುದನ್ನೂ ಮಾಡಿಲ್ಲ.
ಹಾಗಂಥ, ರಶ್ಮಿಕಾ ಮಂದಣ್ಣಗೆ ಅಂಜನಿಪುತ್ರ ಚಿತ್ರ ಮರುಬಿಡುಗಡೆಯಾಗ್ತಿರುವ ಗೊತ್ತೇ ಇಲ್ಲ ಅಂತೇನಿಲ್ಲ. ಯಾಕೆಂದರೆ.. ಎರಡು ಮೂರು ನಿಮಿಷಕ್ಕಾದರೂ ರಶ್ಮಿಕಾ ಮಂದಣ್ಣ ಅವರನ್ನ ಮಾತನಾಡಿಸಬೇಕು ಎಂದು ಚಿತ್ರದ ನಿರ್ಮಾಪಕ ಎಂ.ಎನ್.ಕುಮಾರ್ ಪ್ರಯತ್ನ ಮಾಡ್ತಿದ್ದಾರೆ. ಇನ್ನೂ ಇದು ಸೋಷಿಯಲ್ ಮೀಡಿಯಾ ಕಾಲ. ಎಲ್ಲಿಯೇ ಕುಳಿತರು ಕೂಡ ಕ್ಷಣಾರ್ಧದಲ್ಲಿ ಎಲ್ಲ ವಿಚಾರ ಗೊತ್ತಾಗುತ್ತೆ. ಹೀಗಿರುವಾಗ ಅಂಜನಿಪುತ್ರ ಮರುಬಿಡುಗಡೆಯಾಗ್ತಿದೆ ಎಂಬ ವಿಚಾರ ರಶ್ಮಿಕಾ ಅವರಿಗೆ ಗೊತ್ತೇ ಇಲ್ಲ ಎಂಬ ವಾದ ಒಪ್ಪಲಾಗದು.

ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ಧಾರೆ. ರಶ್ಮಿಕಾ ಮಂದಣ್ಣ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸನ್ಮಾನ್ಯ ರಶ್ಮಿಕಾ ಮಂದಣ್ಣ ಅವರೇ ಅಂಜನಿ ಪುತ್ರ ಚಿತ್ರಕ್ಕೆ ನೀವೆ ನಾಯಕಿ ಎಂಬ ವಿಚಾರ ನಿಮಗೆ ನೆನಪಿದೆಯಾ ಇಲ್ಲವಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಎಲ್ಲದಕ್ಕೂ ದುಡ್ಡೇ ದೊಡ್ಡಪ್ಪ ಅಂದರೆ ಹೇಗೆ..? ಮನುಷ್ಯತ್ವಕ್ಕೆ..ಮಾನವೀಯತೆಗೆ ಬೆಲೆ ಇಲ್ಲವಾ..? ಎಂದು ಕಿಡಿ ಕಾರುತ್ತಿದ್ದಾರೆ. ಅಪ್ಪು ಅವರ ಮೇಲಿನ ಗೌರವಕ್ಕಾದರೂ ಚಿತ್ರದ ಕುರಿತು ನಾಲ್ಕು ಒಳ್ಳೇಯ ಮಾತುಗಳನ್ನಾಡಿ, ಚಿತ್ರದ ನಾಯಕಿಯಾಗಿ ನಿಮ್ಮ ಕರ್ತವ್ಯವನ್ನ ನಿರ್ವಹಿಸಿ ಎನ್ನುತ್ತಿದ್ದಾರೆ.
ಒಟ್ನಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗುತ್ತಿದೆ. ಆಕ್ರೋಶ ಭುಗಿಲೇಳುವ ಮುನ್ನ, ತಪ್ಪನ್ನ ಸರಿಮಾಡಿಕೊಂಡು.. ರಶ್ಮಿಕಾ ಮಂದಣ್ಣ ಅಂಜನಿ ಪುತ್ರ ಚಿತ್ರದ ಬಗ್ಗೆ ಮಾತನಾಡುತ್ತಾರಾ..? ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











