"ಗುರುದೇವ್ ಹೊಯ್ಸಳ ಸಿನ್ಮಾ ನೋಡಿ ಎಂದ ರಮ್ಯಾಗೆ, ಮೊದಲು ನೀವು ಕನ್ನಡ ಕಲೀರಿ" ಎಂದ ನೆಟ್ಟಿಗರು
ಆಕ್ಷನ್ ಥ್ರಿಲ್ಲರ್ 'ಗುರುದೇವ್ ಹೊಯ್ಸಳ' ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ನವೀನ್ ಶಂಕರ್ ನಟನೆಯ ಈ ಪೊಲೀಸ್ ಡ್ರಾಮಾ ಸ್ಯಾಂಡಲ್‌ವುಡ್‌ನಲ್ಲಿ ಬಹಳ ದಿನಗಳಿಂದ ಸಖತ್ ಸದ್ದು ಮಾಡುತ್ತಿತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಗೆದ್ದಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ವಿಜಯ್ .ಎನ್ ನಿರ್ದೇಶನದ 'ಗುರುದೇವ್ ಹೊಯ್ಸಳ' ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ತೆರೆ ತರಲಾಗಿದೆ. 'ಗುರುದೇವ್ ಹೊಯ್ಸಳ' ಅವತಾರದಲ್ಲಿ ಧನಂಜಯ ಖಾಕಿ ಖದರ್ ತೋರಿಸಿದ್ದಾರೆ. ನಟಿ ರಮ್ಯಾ ಕೂಡ ಚಿತ್ರತಂಡದ ಜೊತೆ ಸೇರಿ ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರೂ ಸಿನಿಮಾ ನೋಡುವಂತೆ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.

ಆದರೆ ನಟಿ ರಮ್ಯಾ ಟ್ವೀಟ್‌ಗೆ ನೆಟ್ಟಿಗರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಮೊದಲು ನೀವು ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಟ್ವೀಟ್ ಮಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡುತ್ತಿದ್ದಾರೆ. ಕಳೆದ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬಹುತೇಕ ಇಂಗ್ಲೀಷ್‌ನಲ್ಲೇ ಮಾತನಾಡಿದರು ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಕನ್ನಡ ಕಾರ್ಯಕ್ರಮದಲ್ಲಿ ಇಷ್ಟೊಂದು ಇಂಗ್ಲೀಷ್ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.

ರಶ್ಮಿಕಾ ತತ್ಸಮ, ರಮ್ಯಾ ತದ್ಭವ ಅಂತೆಲ್ಲಾ ಕಾಲೆಳೆದರು. ರಮ್ಯಾ ಭಾಗಿ ಆಗಿದ್ದ ಎಪಿಸೋಡ್ ಬಗ್ಗೆ ಸಾಕಷ್ಟು ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಯೂಟ್ಯೂಬರ್ ಡಾ. ಬ್ರೋನ ಶೋಗೆ ಕರೆಸುವ ಬಗ್ಗೆ ರಾಘವೇಂದ್ರ ಹುಣಸೂರು ನೀಡಿದ ಹೇಳಿಕೆಯನ್ನು ರಮ್ಯಾ ಇಂಗ್ಲೀಷ್ ವ್ಯಾಮೋಹಕ್ಕೆ ಸೇರಿಸಿ ಟ್ರೋಲ್ ಮಾಡಿದ್ದರು. ಇಂತಹವರನ್ನು ಯಾಕೆ ಸಾಧಕರ ಸೀಟಿನಲ್ಲಿ ಕೂರಿಸುತ್ತೀರಾ ಎಂದಿದ್ದರು.
ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ "ಮುದ್ದು ಅಜ್ಜಿಯರಿಗೋಸ್ಕರ ಮುಂದಿನ ಶೋನಲ್ಲಿ ಕನ್ನಡದಲ್ಲೇ ಮಾತನಾಡುತ್ತೀನಿ" ಎಂದು ಉಡಾಫೆಯ ಉತ್ತರ ಕೊಟ್ಟಿದ್ದರು. ಈ ಪ್ರತಿಕ್ರಿಯೆ ಕೂಡ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಇದೀಗ 'ಗುರುದೇವ್ ಹೊಯ್ಸಳ' ಸಿನಿಮಾ ನೋಡಿ ಮಾಡಿರುವ ಟ್ವೀಟ್ ಕೂಡ ಕೆಲವರಿಗೆ ಬೇಸರ ತರಿಸಿದೆ.
"ಸಖತ್ ಮಾಸ್ ಎಂಟರ್‌ಟೈನರ್. ಧನು ಸ್ವ್ಯಾಗ್ ಮತ್ತು ಸಂಭಾಷಣೆ, ನವೀನ್ ಆಟಿಟ್ಯೂಡ್ ಮತ್ತು ಕಿಲ್ಲರ್ ಲುಕ್ಸ್, ಅಮೃತ ನಗು ಹಾಗೂ ಅಭಿನಯ ಚೆನ್ನಾಗಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ. ವೀಕೆಂಡ್ ಪ್ಲ್ಯಾನ್ ಫಿಕ್ಸ್ ಮಾಡಿ, ಹೊಯ್ಸಳ ನೋಡಿ" ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. "ಒಂದಾದರೂ ಕನ್ನಡ ಟ್ವೀಟ್ ಮಾಡಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, "ಕನ್ನಡದಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳಿ" ಎಂದು ಮತ್ತೊಬ್ಬರು ಬರೆದಿದ್ದಾರೆ. "ಕನ್ನಡ ಕಲಿತು ಎಲ್ಲರಿಗೂ ಮಾದರಿ ಆಗಿ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬಹಳ ವರ್ಷಗಳ ನಂತರ ನಟಿ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ ಜೋಡಿಯಾಗಿ ನಟಿಸುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲೇ ಈ ಸಿನಿಮಾ ಕೂಡ ಮೂಡಿ ಬರ್ತಿದೆ. ಈಗಾಗಲೇ ಮುಹೂರ್ತ ಕೂಡ ನೆರವೇರಿದೆ. 7 ವರ್ಷಗಳ ಹಿಂದೆ ಕೊನೆಯದಾಗಿ ರಮ್ಯಾ ನಟನೆಯ 'ನಾಗರಹಾವು' ಸಿನಿಮಾ ರಿಲೀಸ್ ಆಗಿತ್ತು.


Click it and Unblock the Notifications











