ಎರಡೆರಡು ಕಾರಣಕ್ಕೆ ಕಿಚ್ಚ ಸುದೀಪ್ ಮಗಳು ಸಾನ್ವಿ ಟ್ರೋಲ್; ಅಷ್ಟಕ್ಕೂ ಆಗಿದ್ದೇನು?
ಸೆಲೆಬ್ರೆಟಿಗಳ ಪ್ರತಿ ನಡೆಯನ್ನು ಜನ ಗಮನಿಸುತ್ತಿರುತ್ತಾರೆ. ನಟ-ನಟಿಯರು ಮಾತ್ರವಲ್ಲ ಅವರ ಮಕ್ಕಳ, ಕುಟುಂಬ ಸದಸ್ಯರ ಬಗ್ಗೆಯೂ ಅಭಿಮಾನಿಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಇನ್ನು ತಾರೆಯರ ಮಕ್ಕಳು ಕೊಂಚ ಲೈಮ್‌ಲೈಟ್‌ಗೆ ಬಂದುಬಿಟ್ಟರೆ ಮುಗೀತು. ಆಡಿ ಕೊಂಡಾಡುತ್ತಾರೆ. ಕೆಲವೊಮ್ಮೆ ಟ್ರೋಲ್ ಮಾಡುವುದು ಇದೆ.
ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರದ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಇದರ ಬೆನ್ನಲ್ಲೇ ಜೀ ಕನ್ನಡ ಸರೆಗಮಪ ಶೋನಲ್ಲಿ ಭಾಗಿ ಆಗಿದ್ದರು. ಕಿಚ್ಚ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕಳೆದ ವೀಕೆಂಡ್ ಎಪಿಸೋಡ್‌ಗಳು ಸಖತ್ ಸದ್ದು ಮಾಡಿದೆ. ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಕೂಡ ವೇದಿಕೆ ಏರಿ ಕಳೆ ಹೆಚ್ಚುವಂತೆ ಮಾಡಿದ್ದರು.

ಶೋಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟಿದ್ದ ಸುದೀಪ್ ಮಗಳು ಸಾನ್ವಿ ಬೊಂಬಾಟ್ ಆಗಿ ಹಾಡು ಹಾಡಿ ರಂಜಿಸಿದರು. ಅಷ್ಟು ದೊಡ್ಡ ವೇದಿಕೆಯಲ್ಲಿ ಮಗಳ ಹಾಡುವುದನ್ನು ನೋಡಿ ಸುದೀಪ್ ಖುಷಿಯಾದರು. ಆನಂದದಿಂದ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. ಇಡೀ ಫ್ಯಾಮಿಲಿ ವೇದಿಕೆ ಏರಿ ಅಭಿಮಾನಿಗಳ ಮನಗೆದ್ದರು. ಆದರೆ ಸಾನ್ವಿ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡದೇ ಇಂಗ್ಲೀಷ್ ಮಾತನಾಡಿದರು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 3 ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾನ್ವಿ ಟ್ರೋಲ್ ಆಗುತ್ತಿದ್ದಾರೆ. ಆಕೆ 'ಜಸ್ಟ್ ಮಾತ್ ಮಾತಲ್ಲಿ' ಹಾಡು ಹಾಡಿ ಚಪ್ಪಾಳೆ ಗಿಟ್ಟಿಸಿದರು ಸರಿ. ಆದರೆ ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡುವುದು ಬೇಡವೇ? ಸುದೀಪ್ ಮಗಳಿಗೆ ಕನ್ನಡ ಹೇಳಿಕೊಟ್ಟಿಲ್ವಾ? ಸಾನ್ವಿಗೆ ಕನ್ನಡ ಮಾತನಾಡಲು ಬರಲ್ವಾ? ಅಥವಾ ಬೇಕಂತಲೇ ಮಾತನಾಡಲಿಲ್ವಾ? ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಕೆಲ ಸುದೀಪ್ ಅಭಿಮಾನಿಗಳು ಕೂಡ ಸಾನ್ವಿ ಕನ್ನಡದಲ್ಲಿ ಮಾತನಾಡಲಿಲ್ಲ ಎನ್ನುವ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ, ಕಾನ್ವೆಂಟ್‌ನಲ್ಲೇ ಓದಿರಬಹುದು. ಆದರೆ ಸರಿಗಮಪ ಅಚ್ಚ ಕನ್ನಡದ ಕಾರ್ಯಕ್ರಮ. ಅಂತಹ ವೇದಿಕೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಬಹುದಿತ್ತಲ್ಲಾ, ಎಂದು ಟ್ರೋಲ್ ಮಾಡುತ್ತಿದ್ದಾರೆ. ಸ್ವತಃ ಸುದೀಪ್ ಸಾಕಷ್ಟು ಸಂದರ್ಭಗಳಲ್ಲಿ ಬೇರೆಯವರಿಗೆ ಕನ್ನಡದ ಪಾಠ ಮಾಡಿದ್ದಾರೆ. ಆದರೆ ಮಗಳಿಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳಬಹುದಿತ್ತಲ್ಲ ಎನ್ನುತ್ತಿದ್ದಾರೆ.
ಪರಭಾಷಿಕರು 'ಕನ್ನಡ್' ಎಂದಾಗ 'ಅದು ಕನ್ನಡ್ ಅಲ್ಲ ಕನ್ನಡ' ಎಂದು ಸುದೀಪ್ ತಿದ್ದಿದ್ದರು. ಬಿಗ್‌ಬಾಸ್ ಸ್ಪರ್ಧಿಗಳು ಕನ್ನಡ ಬಿಟ್ಟು ಹೆಚ್ಚು ಇಂಗ್ಲೀಷ್ ಮಾತನಾಡಿದ್ದಾಗ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಬಗ್ಗೆ ಸುದೀಪ್ ಸಹ ಸಲಹೆ ನೀಡಿದ್ದರು ಎಂದು ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಹೇಳಿದ್ದರು. ಇದೆಲ್ಲದರ ನಡುವೆ ಸಾನ್ವಿ ಸರಿಗಮಪ ಶೋನಲ್ಲಿ ಯಾಕೆ ಕನ್ನಡ ಮಾತನಾಡಲಿಲ್ಲ ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. 10 ನಿಮಿಷ ವೇದಿಕೆ ಮೇಲಿದ್ದ ಸಾನ್ವಿ "ಪ್ರತಿವರ್ಷ" ಎನ್ನುವ ಒಂದೇ ಒಂದು ಕನ್ನಡ ಪದ ಬಳಸಿದ್ದರು ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಸುದೀಪ್ ಅವರಿಗೆ ನೇಮು ಫೇಮು ಸಿಕ್ಕಿದ್ದು ಕನ್ನಡದಿಂದ, ಕನ್ನಡಿಗರಿಂದ ಅಲ್ಲವೇ? ಮಗಳಿಗೆ ಯಾಕೆ ಕನ್ನಡ ಹೇಳಿಕೊಟ್ಟಿಲ್ಲ ಎಂದು ಖಾರವಾಗಿಯೇ ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಸಾನ್ವಿ ಬೆಂಬಲಕ್ಕೆ ನಿಂತಿದ್ದಾರೆ. ಈ ಕಾಲದ ಹುಡುಗಿ. ಅಷ್ಟು ಚೆನ್ನಾಗಿ ಕನ್ನಡ ಹಾಡು ಹಾಡಿದ್ದಾಳೆ. ಸುಖಾಸುಮ್ಮನೆ ಟ್ರೋಲ್ ಮಾಡುವುದು ಯಾಕೆ? ಎಂದು ಹೇಳುತ್ತಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಸಾನ್ವಿ ಥ್ರೋರ್ ಜೀನ್ಸ್(ಅಲ್ಲಲ್ಲಿ ಹರಿದ ಡಿಸೈನ್) ಪ್ಯಾಂಟ್ ತೊಟ್ಟು ಬಂದಿದ್ದರು. ಕೆಲವರು ಇದಕ್ಕೂ ಚಕಾರ ಎತ್ತಿದ್ದಾರೆ. ಒಂದು ಕನ್ನಡದ ಕಾರ್ಯಕ್ರಮಕ್ಕೆ ಇಂತಹ ಕಾಸ್ಟ್ಯೂಮ್ ಧರಿಸಿ ಬರೋದು ಸರೀನಾ? ಎಂದು ಟ್ರೋಲ್ ಮಾಡಿದ್ದಾರೆ.
ಸಾನ್ವಿ ಸುದೀಪ್ ಗಾಯಕಿಯಾಗಿ ಗಮನ ಸೆಳೆದಿದ್ದಾರೆ. 'ಜಿಮ್ಮಿ' ಚಿತ್ರದ ಟೈಟಲ್ ಟೀಸರ್‌ಗೂ ಹಾಡಿದ್ದರು. ಇನ್ನು ಕೆಲ ತಿಂಗಳ ಹಿಂದೆ 'ಅನ್ನಪೂರ್ಣ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾ' ಸ್ಕೂಲ್‌ನಲ್ಲಿ ನಟನೆ ಕಲಿತು ಬಂದಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಬಣ್ಣ ಹಚ್ಚಿ ಸುದೀಪ್ ಮಗಳು ನಟಿಸಿದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











