ಕನ್ನಡದ 'ವಿಕ್ರಾಂತ್ ರೋಣ' ಪೋಸ್ಟರ್ ಕಾಪಿ ಮಾಡಿದ್ರಾ 'ಭೂತ್ ಪೊಲೀಸ್'?
ಕಿಚ್ಚ ಸುದೀಪ್ ಅಭಿನಯದಲ್ಲಿ ತಯಾರಾಗಿರುವ 'ವಿಕ್ರಾಂತ್ ರೋಣ' ಸಿನಿಮಾ ಡಬ್ಬಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದೀಗ, ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್‌ನ್ನು ಬಾಲಿವುಡ್ ಚಿತ್ರತಂಡವೊಂದು ಕದ್ದು ಮಾಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಹಿಂದಿಯಲ್ಲೂ ಸಿನಿಮಾ ಬರಲಿದೆ. ಹೀಗಿರುವಾಗ ಹಿಂದಿ ಮೇಕರ್ಸ್ ಇಂತಹದೊಂದು ಕೆಲಸ ಮಾಡಿದ್ದೇಕೆ ಎಂಬ ಅನುಮಾನ ಕಾಡ್ತಿದೆ. ಸೌತ್ ಇಂಡಿಯಾ ಸಿನಿಮಾಗಳನ್ನು ಕಾಪಿ ಮಾಡುವುದು, ರಿಮೇಕ್ ಮಾಡುವುದು ಬಾಲಿವುಡ್‌ನಲ್ಲಿ ಹೆಚ್ಚಾಗಿದೆ. ಇದೀಗ, ಪೋಸ್ಟರ್‌ನ್ನು ಸಹ ಯಥಾವತ್ತು ಭಟ್ಟಿ ಇಳಿಸಿರುವುದು ನೆಟ್ಟಿಗರ ಟೀಕೆಗೆ ಗುರಿ ಮಾಡಿದೆ. ಮುಂದೆ ಓದಿ...

'ಭೂತ್ ಪೊಲೀಸ್' ಪೋಸ್ಟರ್
ಪವನ್ ಕೃಪಲಾನಿ ನಿರ್ದೇಶನದಲ್ಲಿ ತಯಾರಾಗಿರುವ 'ಭೂತ್ ಪೊಲೀಸ್' ಚಿತ್ರದ ಪೋಸ್ಟರ್‌ಗಳು ಇತ್ತೀಚಿಗಷ್ಟೆ ರಿಲೀಸ್ ಆಗಿವೆ. ರಿಲೀಸ್ ದಿನಾಂಕ ಘೋಷಿಸಿದ ಚಿತ್ರತಂಡ ಹೊಸ ಪೋಸ್ಟರ್‌ಗಳನ್ನು ಅನಾವರಣಗೊಳಿಸಿತ್ತು. ಇದರಲ್ಲಿ ಯಾಮಿ ಗೌತಮ್ ಮತ್ತು ಜಾಕ್ವಲೀನ್ ಫರ್ನಾಂಡೀಸ್ ಪೋಸ್ಟರ್ ನಕಲು ಎಂದು ಹೇಳಲಾಗುತ್ತಿದೆ. ಈ ಪೋಸ್ಟರ್‌ಗಳು ಕನ್ನಡದ 'ವಿಕ್ರಾಂತ್ ರೋಣ' ಚಿತ್ರದ ಪೋಸ್ಟರ್‌ಗಳನ್ನು ನೆನೆಪಿಸುತ್ತಿದೆ.

ಸುದೀಪ್ ಸ್ಟೈಲ್‌ನಲ್ಲೇ ಯಾಮಿ ಎಂಟ್ರಿ
ಗುಹೆಯೊಂದರಲ್ಲಿ ಕಿಚ್ಚ ಸುದೀಪ್ ಬಲಗೈಯಲ್ಲಿ ಪಂಜು ಹಿಡಿದು ಎಡಗೈಯಲ್ಲಿ ಚಾಟಿ ಹಿಡಿದಿರುವ ವಿಕ್ರಾಂತ್ ಪೋಸ್ಟರ್ ಬಹಳ ತಿಂಗಳ ಹಿಂದೆಯೇ ತೆರೆಕಂಡಿತ್ತು. ಈಗ ರಿಲೀಸ್ ಆಗಿರುವ ಭೂತ್ ಪೊಲೀಸ್ ಪೋಸ್ಟರ್‌ನಲ್ಲಿ ಯಾಮಿ ಗೌತಮ್ ಸಹ ಬಲಗೈಯಲ್ಲಿ ಪಂಜು ಹಿಡಿದು ಗುಹೆಯಲ್ಲಿ ಒಳ ಪ್ರವೇಶಿಸುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಈ ಎರಡು ಪೋಸ್ಟರ್‌ಗಳಲ್ಲಿನ ಶೀರ್ಷಿಕೆ ವಿನ್ಯಾಸ, ಬಣ್ಣದಲ್ಲಿ ಸಾಮ್ಯತೆ ಇದೆ. ಹಾಗಾಗಿ, ಇದು ವಿಕ್ರಾಂತ್ ರೋಣ ಪೋಸ್ಟರ್ ನಕಲು ಎಂದು ಸುಲಭವಾಗಿ ಹೇಳಬಹುದು.

ಸೈಫ್ ಪೋಸ್ಟರ್ ವಿವಾದ
ಯಾಮಿ ಗೌತಮ್, ಜಾಕ್ವಲಿನ್ ಜೊತೆ ಸೈಫ್ ಅಲಿ ಖಾನ್ ಹಾಗೂ ಅರ್ಜುನ್ ಕಪೂರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ತರೆಕಂಡಿದ್ದ ಸೈಫ್ ಅಲಿ ಖಾನ್ ಪೋಸ್ಟರ್ ಸಹ ವಿವಾದಕ್ಕೆ ಗುರಿಯಾಗಿತ್ತು. ಸೈಫ್ ಪೋಸ್ಟರ್‌ನಲ್ಲಿ ಹಿಂದೂ ಸಂತರ ಬಗ್ಗೆ ಅವಹೇಳನ ಮಾಡುವ ರೀತಿ ಬಳಕೆ ಮಾಡಲಾಗಿದೆ, ಇದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹದ್ದು ಎಂಬ ಆರೋಪ ಕೇಳಿ ಬಂದಿತ್ತು.

ದ್ವಿತ್ವ ಪೋಸ್ಟರ್ ವಿವಾದ
ಇತ್ತೀಚಿಗಷ್ಟೆ ಕನ್ನಡದಲ್ಲಿ 'ದ್ವಿತ್ವ' ಚಿತ್ರದ ಪೋಸ್ಟರ್ ಸುದ್ದಿ ಭಾರಿ ಸದ್ದು ಮಾಡಿತ್ತು. ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ದ್ವಿತ್ವ ಸಿನಿಮಾದ ಟೈಟಲ್ ಲುಕ್ ಅನಾವರಣಗೊಂಡಿತ್ತು. ಈ ಪೋಸ್ಟರ್ ನಕಲು ಎಂಬ ಟೀಕೆ ವ್ಯಕ್ತವಾಗಿತ್ತು. ಬಳಿಕ, ಇದು ನಕಲು ಮಾಡಿಲ್ಲ, ವಿನ್ಯಾಸ ಖರೀದಿ ಮಾಡಿ ಅದಕ್ಕೆ ಪುನೀತ್ ಫೋಟೋ ಸೇರಿಸಿ ಡಿಸೈನ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
Recommended Video

ಒಟಿಟಿಯಲ್ಲಿ ಭೂತ್ ಪೊಲೀಸ್
ಫ್ಯಾಂಟಸಿ ಸಿನಿಮಾ ಎನಿಸಿಕೊಂಡಿರುವ 'ಭೂತ್ ಪೊಲೀಸ್' ಸೆಪ್ಟೆಂಬರ್ 17ಕ್ಕೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರಗಳು ಯಥಾಸ್ಥಿತಿಗೆ ಬಂದಿಲ್ಲ. ಹಾಗಾಗಿ, ಆನ್‌ಲೈನ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ವಿಕ್ರಾಂತ್ ರೋಣ ಸಿನಿಮಾ ಸಹ ಫ್ಯಾಂಟಸಿ ಮಾದರಿಯಾಗಿದೆ ಎನ್ನುವುದು ವಿಶೇಷ.


Click it and Unblock the Notifications











