ಶ್ರೀಮುರಳಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ರಿಲೀಸ್ ಮಾಡಿದ 'ಬಘೀರ' ಪೋಸ್ಟರ್‌ಗೆ ಕೆಟ್ಟ ಪ್ರತಿಕ್ರಿಯೆ!

ಹೊಂಬಾಳೆ ಫಿಲ್ಮ್ಸ್ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬಘೀರ ಚಿತ್ರವನ್ನು ನಿರ್ಮಿಸಲಿದ್ದೇವೆ ಎಂದು ಘೋಷಿಸಿ ವರ್ಷವೇ ಕಳೆದಿದೆ. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಶನ್‌ನಲ್ಲಿ ಬಂದ ಕಾಂತಾರ, ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿರುವ ರಾಘವೇಂದ್ರ ಸ್ಟೋರ್ಸ್ ಚಿತ್ರಗಳಿಗಿಂತಲೂ ಮೊದಲು ಘೋಷಣೆಯಾಗಿದ್ದು ಇದೇ ಭಘೀರ ಚಿತ್ರ.
ಹೀಗೆ ಬಹಳ ಹಿಂದೆಯೇ ಘೋಷಣೆಯಾಗಿ ತಡವಾಗಿ ಚಿತ್ರೀಕರಣ ಆರಂಭಿಸಿರುವ ಭಘೀರ ಚಿತ್ರದ ಬಗ್ಗೆ ಕೂಡ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಉಗ್ರಂ ಬಳಿಕ ಕಮ್‌ಬ್ಯಾಕ್ ಮಾಡಿದ ಶ್ರೀಮುರಳಿಗೆ ಗಟ್ಟಿಯಾಗಿ ಘರ್ಜಿಸುವಂತಹ ಚಿತ್ರಗಳಾವುವೂ ಇನ್ನೂ ಸಿಕ್ಕಿಲ್ಲ. ಈ ಕೊರತೆಯನ್ನು ಬಘೀರ ಚಿತ್ರ ನೀಗಿಸಲಿದೆ ಎಂದು ಸಿನಿ ರಸಿಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿನಿ ರಸಿಕರಲ್ಲಿ ಇಷ್ಟರ ಮಟ್ಟಕ್ಕೆ ಈ ಚಿತ್ರ ನಿರೀಕ್ಷೆ ಹುಟ್ಟಿಸಲು ಕಾರಣ ಚಿತ್ರಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ ಎನ್ನುವ ಅಂಶ. ಹೌದು, ಈ ಚಿತ್ರದ ಕತೆಯನ್ನು ಪ್ರಶಾಂತ್ ನೀಲ್ ಬರೆದಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಡಾ. ಸೂರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಪೋಸ್ಟರ್‌ಗಳ ಮೂಲಕ ಕಿಕ್ ಏರಿಸಿದ್ದ ಬಘೀರ ಚಿತ್ರತಂಡ ಇಂದು ( ಡಿಸೆಂಬರ್ 17 ) ಶ್ರೀ ಮುರಳಿ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗರ ಬೇಸರ
ಈ ಹಿಂದೆ ಬಿಡುಗಡೆಗೊಳಿಸಿದ್ದ ಭಘೀರ ಚಿತ್ರದ ಪೋಸ್ಟರ್ ಅನ್ನೇ ಬಳಸಿ ಒಂದಷ್ಟು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಅದನ್ನೇ ಹುಟ್ಟುಹಬ್ಬದ ವಿಶೇಷ ಪೋಸ್ಟರ್ ಹೊಂಬಾಳೆ ಫಿಲ್ಮ್ಸ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಬದಲು ಹಳೇ ಪೋಸ್ಟರ್ ಅನ್ನೇ ಬಿಡುಗಡೆ ಮಾಡಿ ನಿರಾಸೆ ಮೂಡಿಸಿದ್ದೀರ ಎಂದು ಬೇಸರ ಹೊರಹಾಕಿದ್ದಾರೆ.

ಪೋಸ್ಟರ್ ಕಾಪಿಯಲ್ಲ
ಇನ್ನು ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿರುವ ಭಘೀರ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಹಳೆಯ ಪೋಸ್ಟರ್‌ನಲ್ಲಿದ್ದ ಶ್ರೀಮುರಳಿ ಅವರ ಭಾವಚಿತ್ರವನ್ನು ಬಳಸಲಾಗಿದ್ದು, ಅದಕ್ಕೆ ಮಾಸ್ಕ್ ಹಾಕಿದ್ದಾರೆ ಅಷ್ಟೇ, ಇಷ್ಟು ಅಸಡ್ಡೆ ಏಕೆ ಎಂದು ಹಲವರು ಕಿಡಿಕಾರಿದ್ದಾರೆ. ಆದರೆ ಈ ಆಪಾದನೆಗಳ ಹಾಗೆ ಚಿತ್ರತಂಡ ಹಳೆಯ ಪೋಸ್ಟರ್‌ನಲ್ಲಿದ್ದ ಶ್ರೀಮುರಳಿ ಅವರ ಭಾವಚಿತ್ರವನ್ನು ಬಳಸಿ ಈ ಹೊಸ ಪೋಸ್ಟರ್ ಬಿಡುಗಡೆಗೊಳಿಸಿಲ್ಲ, ಬದಲಾಗಿ ಹೊಸ ಭಾವಚಿತ್ರವನ್ನೇ ಬಳಸಿದೆ. ಹಳೆಯ ಪೋಸ್ಟರ್‌ನಲ್ಲಿ ಕಣ್ಣನ್ನು ಅರ್ಧ ಮಾತ್ರ ತೆರೆದು ಖಡಕ್ ಲುಕ್ ಕೊಟ್ಟಿದ್ದ ಶ್ರೀಮುರಳಿ, ಈ ಬಾರಿ ಕಣ್ಣನ್ನು ಪೂರ್ತಿ ತೆರೆದು ಮಾಸ್ಕ್ ಮುಖಕ್ಕೆ ಮಾಸ್ಕ್ ಧರಿಸಿ ಲುಕ್ ಕೊಟ್ಟಿದ್ದಾರೆ. ಆದರೆ ಎರಡೂ ಪೋಸ್ಟರ್‌ಗಳನ್ನು ನೋಡಿ ತಕ್ಷಣ ಒಂದೇ ರೀತಿ ಕಾಣುವ ಕಾರಣ ನೆಟ್ಟಿಗರು ಈ ಆರೋಪವನ್ನು ಮಾಡಿದ್ದಾರೆ. ಇನ್ನೂ ಕೆಲವರು ಮತ್ತದೇ ಡಾರ್ಕ್ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆ
ಇನ್ನು ಈ ಹಿಂದೆ ಬೀರ್‌ಬಲ್ ಎಂಬ ಚಿತ್ರದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್ ಸದ್ಯ ಹಲವಾರು ಬಿಗ್ ಪ್ರಾಜೆಕ್ಟ್‌ಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ, ಗಣೇಶ್ ನಟನೆಯ ಬಾನ ದಾರಿಯಲ್ಲಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ರುಕ್ಮಿಣಿ ವಸಂತ್ ಈಗ ಭಘೀರ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕನ್ನಡದ ಮತ್ತೊಬ್ಬ ಬ್ಯುಸಿ ನಟಿ ಹುಟ್ಟಿಕೊಂಡಿದ್ದಾರೆ.


Click it and Unblock the Notifications











