ಮತ ಎಣಿಕೆಗೆ 2 ದಿನ ಸಮಯ ಬೇಕಾ ಎಂದ ಉಪ್ಪಿಗೆ ಕೌಂಟರ್ ಮೇಲೆ ಕೌಂಟರ್ ಕೊಟ್ಟ ನೆಟ್ಟಿಗರು!
ಕರ್ನಾಟಕ ರಾಜ್ಯದಲ್ಲಿ ಸದ್ಯ ಚುನಾವಣಾ ಕಾವು ಜೋರಾಗಿದೆ. ಹೌದು, ಮುಂದಿನ ತಿಂಗಳು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲೆಡೆ ಈ ಕುರಿತ ಚರ್ಚೆಗಳು ನಡೆಯುತ್ತಿವೆ. ಇನ್ನು ಇಂದು ( ಮಾರ್ಚ್ 29 ) ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಾಸಭೆ ಚುನಾವಣೆ ಯಾವಾಗ ನಡೆಯಲಿದೆ ಹಾಗೂ ಮತ ಎಣಿಕೆ ಯಾವಾಗ ನಡೆಯಲಿದೆ ಎಂಬ ದಿನಾಂಕವನ್ನು ಘೋಷಿಸಿದೆ.
ಮೇ 10ರಂದು ಚುನಾವಣೆ ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಮೇ 13ರಂದು ಮತಎಣಿಕೆ ನಡೆಯಲಿದೆ ಎಂದು ಪ್ರಕಟಿಸಿದೆ. ಹೀಗೆ ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಜನ ಸಾಮಾನ್ಯರು ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು, ಫಲಿತಾಂಶ ಅತಂತ್ರವಾದರೆ ಯಾವ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಚ ಚುಕ್ಕಾಣಿ ಹಿಡಿಯಬಹುದು ಎಂಬ ಊಹೆಗಳನ್ನು ಮಾಡುತ್ತಿದ್ದಾರೆ.

ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಜತೆಗೆ ಕನ್ನಡ ಚಲಚಿತ್ರರಂಗದ ನಟ ಉಪೇಂದ್ರ ಮುಂದಾಳತ್ವದ ಉತ್ತಮ ಪ್ರಜಾಕೀಯ ಪಕ್ಷವೂ ಸಹ ಅಖಾಡಕ್ಕೆ ಇಳಿಯುತ್ತಿದೆ. ಉಪೇಂದ್ರ ಸ್ಥಾಪಿಸಿರುವ ಈ ಪಕ್ಷದಿಂದ ಉಪೇಂದ್ರ ಅವರು ಸ್ಪರ್ಧಿಸುತ್ತಿಲ್ಲ. ಹೊರತಾಗಿ ಪಕ್ಷ ಸೇರ್ಪಡೆಗೊಂಡಿರುವ ಇತರೆ ಕಾರ್ಯಕರ್ತರು ಸ್ಪರ್ಧೆಗೆ ಇಳಿಯಲಿದ್ದಾರೆ.
ರಾಜಕೀಯದ ವಿರುದ್ಧ ಸದಾ ವಾದ ಮಾಡುವ ಉಪೇಂದ್ರ ಅವರು ಆಡಳಿತದ ವೈಖರಿ ಬದಲಾಗಬೇಕು, ರಾಜಕೀಯ ವ್ಯವಸ್ಥೆ ಬದಲಾಗಬೇಕು ಎಂದು ಹಲವಾರು ಬಾರಿ ವಾದಿಸಿದ್ದಾರೆ. ಅದರಂತೆ ಇದೀಗ ಇಂದು ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಹಾಗೂ ಮತ ಎಣಿಕೆಯ ದಿನಾಂಕಗಳ ಬಗ್ಗೆಯೂ ಸಹ ಉಪೇಂದ್ರ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಪ್ರಶ್ನೆಯೊಂದನ್ನು ಎಸೆದಿದ್ದಾರೆ.

ಆದರೆ ಉಪೇಂದ್ರ ಅವರ ಈ ಪೋಸ್ಟ್‌ಗೆ ಪಾಸಿಟಿವ್ ಕಾಮೆಂಟ್‌ಗಳಿಗಿಂತ ನೆಗೆಟಿವ್ ಕಾಮೆಂಟ್‌ಗಳೇ ಹೆಚ್ಚಾಗಿ ಬಂದಿವೆ. ಹೌದು, ಉಪೇಂದ್ರ "ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ?" ಬರೆದುಕೊಂಡಿದ್ದಾರೆ.
ಉಪೇಂದ್ರ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗನೋರ್ವ 'ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ release ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ?' ಎಂದು ಕಾಮೆಂಟ್ ಮಾಡುವ ಮೂಲಕ ಕೌಂಟರ್ ನೀಡಿದ್ದಾರೆ.
ಮತ್ತೋರ್ವ ನೆಟ್ಟಿಗ ಈ ಕುರಿತು ಪ್ರತಿಕ್ರಿಯಿಸಿದ್ದು "ಹೌದು. ಏಕೆಂದರೆ ಮತ ಎಣಿಕೆ ಮಷೀನ್ ಗಳನ್ನು ಎಲ್ಲಾ ಮತ ಕ್ಷೇತ್ರ ಗಳಿಂದ ಒಂದು ಕಡೆ ಕೇಂದ್ರೀಕರಿಸಲು ಮತ್ತು. ಮತ ಎಣಿಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಒಟ್ಟುಗೂಡಿಸಲು. ಮತ್ತು ಸೆಕ್ಯೂರಿಟಿ ನಿಯೋಜನೆಗೆ ಸಮಯ ಬೇಕು. ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಬೇಕು" ಎಂದು ಕಾಮೆಂಟ್ ಮಾಡಿದ್ದು ಎರಡು ದಿನಗಳ ಸಮಯ ಏತಕ್ಕಾಗಿ ಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಹೇಳಿದ್ದಾರೆ.
"ಚುನಾವಣೆ ಸಿನೆಮಾ ಅಲ್ಲ ಮದ್ವೆ ಆದ ದೃಶ್ಯದ ನಂತರ ಮಗು ಆಗೋಕೆ, ಕಾಮನ್ ಸೆನ್ಸ್ ಬೇಕು ಗುರು" ಹಾಗೂ "ಅಲ್ಲ ಗುರು ಚುನಾವಣೆ ಆಯೋಗದವರಿಗೆ ಅಷ್ಟು ಜ್ಞಾನವಿಲ್ಲದೆ ಎರಡು ದಿನ ನಿಗದಿಪಡಿಸಿಕೊಳ್ಳುತ್ತಾರ ನಿಮ್ಮ ಬುದ್ಧಿವಂತಿಕೆ ಇಷ್ಟ ಆಗುತ್ತೆ ಅತಿ ಬುದ್ಧಿವಂತಿಕೆ ಇಷ್ಟ ಆಗಲ್ಲ , ನೀವು ಶೂಟಿಂಗ್ ಮುಗಿದ ಕುಂಬಳಕಾಯಿ ಹೊಡೆದ ತಕ್ಷಣ ನಿಮ್ಮ ಚಿತ್ರ ಬಿಡುಗಡೆ ಮಾಡ್ತೀರಾ ಉತ್ತರ ಕೊಡಿ" ಎಂದು ಕಾಮೆಂಟ್ ಮಾಡಿರುವ ನೆಟ್ಟಿಗರು ಯೋಚಿಸಿ ಪ್ರಶ್ನೆಗಳನ್ನು ಕೇಳಿ, ಯೋಚಿಸದೇ ಬಾಯಿಗೆ ಬಂದ ಪ್ರಶ್ನೆಗಳನ್ನು ಕೇಳಬೇಡಿ ಎಂದು ಉಪ್ಪಿಗೆ ಕೌಂಟರ್ ಕೊಟ್ಟಿದ್ದಾರೆ. ಇವಿಷ್ಟೇ ಅಲ್ಲದೇ ಈ ಪೋಸ್ಟ್‌ಗೆ ಇನ್ನೂ ಅನೇಕ ಕಾಮೆಟ್‌ಗಳನ್ನು ಮಾಡಿರುವ ನೆಟ್ಟಿಗರು ಪ್ರಶ್ನೆ ಮೂಲಕ ಎಡವಿದ ಉಪೇಂದ್ರಗೆ ಕಾಮೆಂಟ್ ದಾಳಿ ನಡೆಸಿದ್ದಾರೆ.


Click it and Unblock the Notifications











