»   » ಕೆಜಿ ರಸ್ತೆಯಲ್ಲಿ ಹೊಸ ಇತಿಹಾಸ ಬರೆದ ತೆಲುಗಿನ ಬಾಹುಬಲಿ

ಕೆಜಿ ರಸ್ತೆಯಲ್ಲಿ ಹೊಸ ಇತಿಹಾಸ ಬರೆದ ತೆಲುಗಿನ ಬಾಹುಬಲಿ

By: ಬಾಲರಾಜ್ ತಂತ್ರಿ
Subscribe to Filmibeat Kannada

ಒಂದು ಕಾಲದಲ್ಲಿ ಬೆಂಗಳೂರಿನ ಮೆಜಿಸ್ಟಿಕ್ ಭಾಗ ಕನ್ನಡ ಚಿತ್ರದ ಹೆಬ್ಬಾಗಿಲಿನಂತಿತ್ತು. ಮೂವಿಲ್ಯಾಂಡ್, ಅಭಿನಯ ಚಿತ್ರಮಂದಿರ ಬಿಟ್ಟರೆ ಉಳಿದ ಹೆಚ್ಚಿನ ಚಿತ್ರಮಂದಿರಗಳು ಕನ್ನಡ ಚಿತ್ರವನ್ನೇ ಪ್ರದರ್ಶಿಸುತ್ತಿದ್ದವು.

ಬದಲಾದ ದಿನಗಳಲ್ಲಿ, ಸಿನಿಮಾವನ್ನು ವ್ಯಾಪಾರದ ದೃಷ್ಠಿಯಲ್ಲಿ ನೋಡೋದು ಹೆಚ್ಚಾದಂತೆ ಈ ಭಾಗದಲ್ಲಿ ಕನ್ನಡ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳಲ್ಲಿ ತೆಲುಗು ಮತ್ತು ಹಿಂದಿ ಚಿತ್ರದ ಪ್ರದರ್ಶನಗಳು ಹೆಚ್ಚಾದವು.

ಹೊಸಬರ ಕನ್ನಡ ಸಿನಿಮಾಗಳು ಕೆಜಿ ರಸ್ತೆಯಲ್ಲಿ ಚಿತ್ರಮಂದಿರಕ್ಕಾಗಿ ಪರದಾಡುತ್ತಿದ್ದಾಗ, ಪರಭಾಷಾ ಚಿತ್ರಗಳು ರಾಜಾರೋಷವಾಗಿ ಈ ಭಾಗದಲ್ಲಿ ವಿಜೃಂಭಿಸಲಾರಂಭಿಸಿತು. ಹೊಸಬರ ನೋವನ್ನು ಕೇಳುವವರೇ ಇಲ್ಲದಂತಾಯಿತು.

Never before: Telugu movie Bahubali released three theaters in K G Road, Bengaluru

ನಾಲ್ಕು ವಾರಗಳ ನಂತರ ಕನ್ನಡೇತರ ಚಿತ್ರಗಳು ಬಿಡುಗಡೆಯಾಗಬೇಕೆನ್ನುವ ನಿಯಮವನ್ನು ಗಾಳಿಗೆ ತೂರಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ಒದ್ದಾಡುವ ಪರಿಸ್ಥಿತಿ ಬಂದದ್ದು ವಿಪರ್ಯಾಸ. (ಬಾಹುಬಲಿ ಚಿತ್ರವಿಮರ್ಶೆ)

ಇದಕ್ಕಿಂತ ಸೋಜಿಗದ ಸಂಗತಿಯೆಂದರೆ ಕನ್ನಡ ಚಿತ್ರಗಳಿಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕಾಗಿರುವ ಸ್ಥಾನದಲ್ಲಿರುವ ಚಲನಚಿತ್ರ ಮಂಡಳಿ ಈ ಬಗ್ಗೆ ಹೆಚ್ಬಾಗಿ ತಲೆಕೆಡಿಸಿಕೊಳ್ಳಲು ಹೋಗಲೇ ಇಲ್ಲ.

ಮಂಡಳಿಯವರು ಮತ್ತು ಕನ್ನಡದ ನಿರ್ಮಾಪಕರೇ ಪರಭಾಷಾ ಚಿತ್ರದ ವಿತರಣೆ ಹಕ್ಕು ಪಡೆದು ಕನ್ನಡ ಚಿತ್ರಗಳಿಗೆ ಒಂದು ರೀತಿಯಲ್ಲಿ ಇವರೇ ಶತ್ರುಗಳಂತಾದರು. ಹೇಳುವವರಿಲ್ಲ, ಕೇಳುವವರಿಲ್ಲದೇ ಲಂಗುಲಗಾಮು ಇಲ್ಲದೇ ಕನ್ನಡದ ದೊಡ್ಡ ಸ್ಟಾರ್ ನಟರಿಗೇ ಸಿಗದಷ್ಟು ಚಿತ್ರಮಂದಿರಗಳು ಪರಭಾಷಾ ಚಿತ್ರಗಳಿಗೆ ಸಿಗಲಾರಂಭಿಸಿತು.

ಇದಕ್ಕೆ ಕೊಡಬಹುದಾದ ಒಂದು ದಿನದ ಹಿಂದಿನ ಉದಾಹಣೆಯೆಂದರೆ ತೆಲುಗಿನ ಬಾಹುಬಲಿ ಚಿತ್ರ. ಕರ್ನಾಟಕದ ಹೆಚ್ಚಿನ ಚಿತ್ರಮಂದಿರಗಳು ಚಿತ್ರದ ಬಾಹುಬಲದ ಪಾಲಾದವು. ಹೊಸಬರ ಮತ್ತು ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ರಂಗಿತರಂಗ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಜಾಗಗಳಲ್ಲಿ ಬಾಹುಬಲಿ ಚಿತ್ರ ಪ್ರದರ್ಶನವಾಯಿತು.

ರಂಗಿತರಂಗ ಚಿತ್ರತಂಡ ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ದೂರು ಸಲ್ಲಿಸಿತು. ಇದರಿಂದ ಚಿತ್ರತಂಡಕ್ಕೆ ಏನು ಲಾಭವಾಯಿತೋ ತಾಯಿ ಭುವನೇಶ್ವರಿಯೇ ಬಲ್ಲಳು.

ಇದುವರೆಗೆ ಕನ್ನಡದ ಯಾವುದೇ ಚಿತ್ರವೊಂದು ಮಾಡದ ದಾಖಲೆಯನ್ನು ತೆಲುಗಿನ ಬಾಹುಬಲಿ ಚಿತ್ರ ಮಾಡಿತು. ಪರಭಾಷಾ ಚಿತ್ರವೊಂದು ಕರ್ನಾಟಕದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಿಡುಗಡೆಯಾಯಿತು. (ಬಾಹುಬಲಿ ವಿತರಣಾ ಹಕ್ಕಿನ ಹಿಂದಿದೆ ಮಾಸ್ಟರ್ ಪ್ಲಾನ್)

Never before: Telugu movie Bahubali released three theaters in K G Road, Bengaluru

ಇನ್ನೊಂದು ವಿಪರ್ಯಾಸವೆಂದರೆ ಕನ್ನಡ ಚಿತ್ರಗಳ ಹೆಬ್ಬಾಗಿಲು ಕೆ ಜಿ ರಸ್ತೆಯ ಮೂರು ಚಿತ್ರಮಂದಿರಗಳಲ್ಲಿ ಬಾಹುಬಲಿ ಚಿತ್ರ ಬಿಡುಗಡೆಯಾಗುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನೇ ಪ್ರಶ್ನಿಸುವಂತೆ ಮಾಡಿತು. ಭಾರೀ ಹೈಪ್ ಹುಟ್ಟುಹಾಕಿದ್ದ ರನ್ನ ಅಥವಾ ವಜ್ರಕಾಯ ಚಿತ್ರಕ್ಕೂ ಇದು ಸಾಧ್ಯವಾಗಲಿಲ್ಲ.

ಕೆ ಜಿ ರಸ್ತೆಯ ಭೂಮಿಕಾ, ತ್ರಿಭುವನ್ ಮತ್ತು ಕೈಲಾಶ್ ಚಿತ್ರಮಂದಿರಗಳಲ್ಲಿ ಬಾಹುಬಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದುವರೆಗಿನ ಕನ್ನಡ ಚಿತ್ರಗಳ ಇತಿಹಾಸದಲ್ಲಿ ಜೋಗಿ, ಜೋಗಯ್ಯ, ರಾಜ್ ದಿ ಶೋಮ್ಯಾನ್ ಹೀಗೆ ಕೆಲವು ಚಿತ್ರಗಳು ಮಾತ್ರ ಗಾಂಧಿನಗರದ ಎರಡು ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದವು.

ಇದನ್ನೆಲ್ಲಾ ಮೀರಿ ಕನ್ನಡೇತರ ಚಿತ್ರವೊಂದು ಅದೂ ಕೆಜಿ ರಸ್ತೆಯಲ್ಲಿ ಏಕಕಾಲದಲ್ಲಿ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಾಹುಬಲಿ ಚಿತ್ರಕ್ಕೆ ಕರ್ನಾಟಕದ ಹಂಚಿಕೆದಾರರು ಕನ್ನಡದ ಲೀಡಿಂಗ್ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ ಪಿ ಶ್ರೀಕಾಂತ್.

ನಾನೂ ಒಬ್ಬ ಕನ್ನಡಿಗ, ಕನ್ನಡ ಚಿತ್ರಗಳಿಗೆ ತೊಂದರೆ ಮಾಡುವುದಿಲ್ಲ ಎಂದಿದ್ದರು ಈ ಹಂಚಿಕೆದಾರರು, ಆದರೆ ಆಗಿದ್ದೇ ಬೇರೆ. ಥ್ಯಾಂಕ್ಸ್ ನಿಮ್ಮ ಕನ್ನಡ ಸೇವೆ ಹೀಗೇ ಮುಂದುವರಿಯಲಿ..

ಒಂದಿಷ್ಟು ಜನ, ಒಂದಷ್ಟು ದಿನ ಕನ್ನಡಾನಾ ಪರಭಾಷಾ ಚಿತ್ರಗಳು ತುಳಿತಾ ಇದ್ದಾರೆಂತಾ ಕೂಗಾಡ್ತಾರೆ.. ಚೇಂಬರ್ ನವರಿಗೆ ದೂರು ಹೋಗುತ್ತೆ. ಅವರು ಅದನ್ನು ಫೈಲಿಗೆ ಹಾಕಿ ಇತಿಹಾಸದ ಪುಟಕ್ಕೆ ಸೇರಿಸ್ತಾರೆ.

English summary
Never before: Telugu movie Bahubali released in three theaters in K G Road, Bengaluru. None of the Kannada movies so far in this region released in this number.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada