ಹೊಸಬರಿಗೆ ಶೆಟ್ಟರ ಬೆಂಬಲ: ತ್ರಿಕೋನ ಪ್ರೇಮಕಥೆಯ 'ಅಭಿರಾಮಚಂದ್ರ' ರಿಲೀಸ್ ಯಾವಾಗ?
ಸ್ಯಾಂಡಲ್‌ವುಡ್‌ನಲ್ಲಿ ಅದೆಷ್ಟೋ ದೊಡ್ಡ ಸಿನಿಮಾ ಬರಲಿ. ಅದೆಂತಹದ್ದೇ ದಾಖಲೆ ಮಾಡಲಿ ಹೊಸಬರ ಮಾತ್ರ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆಯೂ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಇಂತಹ ಪ್ರಯತ್ನಗಳಲ್ಲೊಂದು ಸಿನಿಮಾ 'ಅಭಿರಾಮಚಂದ್ರ'.
ಇದೂವರೆಗೂ ಸಿನಿಮಾ ಟೈಟರ್ ಹಾಗೂ ಪೋಸ್ಟರ್ ಕುತೂಹಲ ಕೆರಳಿಸಿತ್ತು. ಇನ್ನೇನು ಸಿನಿಮಾ ಬಿಡುಗಡೆಗೆ ಸಮೀಪಿಸುತ್ತಿದೆ ಅನ್ನುವಾಗಲೇ 'ಅಭಿರಾಮಚಂದ್ರ' ಸಿನಿಮಾ ಟ್ರೈಲರ್ ರಿಲೀಸ್ ಮಾಡಲಾಗಿದೆ. ಹೊಸಬರ ಈ ಪ್ರಯತ್ನಕ್ಕೆ ಸ್ಯಾಂಡಲ್‌ವುಡ್‌ನ ಇಬ್ಬರು ತಾರೆಯರು ಬೆಂಬಲ ಕೊಟ್ಟಿದ್ದಾರೆ.

'ಅಭಿರಾಮಚಂದ್ರ' ಬಾಲ್ಯದ ಸ್ನೇಹ ಹಾಗೂ ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿದೆ. ಹೊಸಬರ ಪ್ರಯತ್ನವನ್ನು ಕಂಡಿರೋ ಸ್ಯಾಂಡಲ್‌ವುಡ್ ನಟರಿಬ್ಬರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರೇ ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ. ಇವರಿಬ್ಬರೂ 'ಅಭಿರಾಮಚಂದ್ರ' ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
'ಅಭಿರಾಮಚಂದ್ರ' ಸಿನಿಮಾವನ್ನು ನಾಗೇಂದ್ರ ಗಾಣಿಗ ನಿರ್ದೇಶನ ಮಾಡಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಮಾಡಿರೋ ತಂಡ ಸಿನಿಮಾವನ್ನು ಅಕ್ಟೋಬರ್ 6ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕುಂದಾಪುರ ಕನ್ನಡ ಭಾಷೆಯನ್ನು ಬಳಸಿದ್ದಕ್ಕೆ ಪ್ರಮೋದ್ ಶೆಟ್ಟಿ ಭೇಷ್ ಎಂದಿದ್ದಾರೆ.
"ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ನನಗೆ ಇಷ್ಟವಾಗಿದ್ದು ಏನಂದ್ರೆ, ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಲು ಮೀಟರ್ ಬೇಕು. ಆ ಮೀಟರ್ ಅಭಿರಾಮಚಂದ್ರ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಯಾಕೆಂದರೆ, ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ಈ ಟ್ರೈಲರ್‌ನಲ್ಲಿ ಆ ಭಾಷೆ ಪ್ರಾಮಿಸಿಂಗ್ ಆಗಿ ಕಾಣುತ್ತಿದೆ. ನಿರ್ದೇಶಕರ ಹಲವಾರು ಗೆಳೆಯರು ಈ ಸಿನಿಮಾದ ಪ್ರೀಮಿಯರ್ ಶೋವನ್ನು ಸ್ಪಾನ್ಸರ್ ಮಾಡುತ್ತಿದ್ದು, ನಾನೂ ಅವರಿಗೆ ಸಾಥ್ ಕೊಡುತ್ತಿದ್ದೇನೆ." ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ನಟಿಸಿರುವ ರಥ ಕಿರಣ್‌ಗೂ 'ಅಭಿರಾಮಚಂದ್ರ'ದ ಬಗ್ಗೆ ತುಂಬಾನೇ ನಂಬಿಕೆ ಇದೆ. "ನನ್ನನ್ನು ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಮಾಡಿದ್ದು ಅಪ್ಪು ಸರ್. ಆ ಬಳಿಕ ಸುನಿ ಸರ್. ಅವರ ಬೆಂಬಲ ಇರದೇ ಹೋಗಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಈ ಸಿನಿಮಾದ ಆರಂಭದಿಂದ ಇಲ್ಲಿವರೆಗೂ ಬೆನ್ನೆಲುಬಾಗಿ ನಿಂತವರು ರವಿ ಬಸ್ರೂರ್. ಅವರೂ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಹಾಗೇ ಸಂಗೀತ ನೀಡಿದ್ದಾರೆ. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸರ್ ಬೆಂಬಲವಾಗಿ ನಿಂತಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಮಗ ಮಾಡಿದ್ದಾರೆ." ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅಭಿಯಾಗಿ ಕಿರಣ್ ಕಾಣಿಸಿಕೊಂಡಿದ್ದರೆ, ರಾಮನಾಗಿ ಸಿದ್ದು ಮೂಲಿಮನಿ ಚಂದ್ರನಾಗಿ ನಾಟ್ಯರಂಗ ನಟಿಸಿದ್ದಾರೆ. ಮೂವರ ನಾಯಕ ಕಥೆಯೇ 'ಅಭಿರಾಮಚಂದ್ರ'. ಇವರಿಗೆ ನಾಯಕಿಯಾಗಿ ಶಿವಾನಿ ರೈ ಇದ್ದಾರೆ. "ಇದು ನನ್ನ ಮೊದಲ ಸಿನಿಮಾ. ನಾನು ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸರ್ ಕಥೆ ಹೇಳಿದಾಗ ತುಂಬಾ ಕನೆಕ್ಟ್ ಆಯಿತು. ಇದೊಂದು ತ್ರಿಕೋನ ಪ್ರೇಮ ಕಥೆ" ಎಂದಿದ್ದಾರೆ.
ಇನ್ನು ಈ ಸಿನಿಮಾ ನಿರ್ದೇಶಿಸಿದ್ದ ನಾಗೇಂದ್ರ ಗಾಣಿಗ 'ಕಿರಿಕ್ ಪಾರ್ಟಿ' ಸಿನಿಮಾಗೆ ಸಹಾಯಕ ನಿರ್ದೇಶಕನಾಗಿದ್ದರು. ಈಗ ಸ್ವತಂತ್ರ ನಿರ್ದೇಶಕರಾಗಿ 'ಅಭಿರಾಮಚಂದ್ರ' ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರಗಳ ಜೊತೆ ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು, ಪವನ್ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











