For Quick Alerts
  ALLOW NOTIFICATIONS  
  For Daily Alerts

  ನೀವು ನಂಬ್ತೀರಾ...ಐದೂ ಸ್ವಮೇಕು ಕನ್ನಡ ಚಿತ್ರಗಳು!

  By *ಕೆ. ಸತ್ಯನಾರಾಯಣ
  |

  ನಂಬಿದರೆನಂಬಿ ಬಿಟ್ಟರೆ ಬಿಡಿ. ಕಳೆದ ವಾರ ಸೆಟ್ಟೇರಿದ ಐದು ಕನ್ನಡ ಚಿತ್ರಗಳೂ ರೀಮೇಕಲ್ಲ. ಕಳೆದ ಎರಡು ವರ್ಷದಿಂದ ಕನ್ನಡ ಚಿತ್ರೋದ್ಯಮದ ವಿದ್ಯಮಾನಗಳನ್ನು ಗಮನಿಸುತ್ತಿರುವವರಿಗೆ ಇದು ಅಚ್ಚರಿಯ ಬೆಳವಣಿಗೆ. ಅಂತೂ ರೀಮೇಕಿಗೆ ತೆರಿಗೆ ವಿನಾಯಿತಿ ರದ್ದು ಮಾಡಲಾಗುವುದು ಅನ್ನುವ ಸರಕಾರದ ಬೆದರಿಕೆ ಕೊಂಚ ಮಟ್ಟಿಹೆ ಬಿಸಿ ಮುಟ್ಟಿಸಿದಂತೆ ಕಾಣಿಸುತ್ತಿದೆ.

  ಅಪ್ಪು, ಲವ್‌ಯೂ, ವಂಶಕ್ಕೊಬ್ಬ, ಸೂರ್ಯ ಐಪಿಎಸ್‌, ಅತಿಥಿ - ಈ ಐದು ಚಿತ್ರಗಳಿಗೆ ಕಳೆದ ವಾರ ಮುಹೂರ್ತ ನೆರವೇರಿತು. ಐದೂ ಚಿತ್ರಗಳು ಬೇರೆ ಬೇರೆ ಕಾರಣಕ್ಕೆ ಕುತೂಹಲ ಮೂಡಿಸಿವೆ.

  ಅಪ್ಪು ಚಿತ್ರದ ಮೂಲಕ ರಾಜ್‌ ಕೊನೆಯ ಪುತ್ರ ಪುನೀತ್‌ ನಾಯಕನಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಪುನೀತ್‌ನ್ನು ನಾಯಕ ಪಟ್ಟದಲ್ಲಿ ಕೂರಿಸಲು ರಾಜ್‌ ಕುಟುಂಬ ಸಿದ್ಧತೆ ನಡೆಸಿತ್ತು. ಸಿಂಗೀತಂ ಶ್ರೀನಿವಾಸ್‌ ಅವರಿಂದ ಹಿಡಿದು ನಾಗತಿ ಹಳ್ಳಿ ಚಂದ್ರಶೇಖರ್‌ ತನಕ ಐದಾರು ನಿರ್ದೇಶಕರಿಗೆ ಈ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಅವರೆಲ್ಲರೂ ರಿಟನ್‌ ಟೆಸ್ಟ್‌ನಲ್ಲಿ ಫೇಲ್‌ ಆದ ನಂತರ ಪ್ರತ್ಯಕ್ಷರಾದವರು ಪೂರಿ ಜಗನ್ನಾಥ್‌. ತೆಲುಗು ಮೂಲದ ಈ ನಿರ್ದೇಶಕನ ಬಗ್ಗೆ ರಾಜ್‌ ಕುಟುಂಬಕ್ಕೆ ವಿಶ್ವಾಸ ಮೂಡುವದಕ್ಕೆ ಕಾರಣವಾಗಿದ್ದು ಯುವರಾಜ ಚಿತ್ರದ ಯಶಸ್ಸು.

  ಕುಸಿದು ಬೀಳುತ್ತಿದ್ದ ಶಿವರಾಜ್‌ ಇಮೇಜನ್ನು ಪುನರ್‌ ಸ್ಥಾಪಿಸಿದ ಕ್ರೆಡಿಟ್ಟು ಜಗನ್ನಾಥ್‌ಗೆ ಸಂದಾಯವಾಯಿತು. ಅಪ್ಪು ಚಿತ್ರದ ಕತೆ ಮತ್ತು ಚಿತ್ರಕತೆಯೂ ಜಗನ್ನಾಥ್‌ ಅವರದೇ. ಕಂಪ್ಯೂಟರ್‌ನಿಂದ ಹಿಡಿದು ಗ್ರಾನೈಟ್‌ ವ್ಯಾಪಾರದ ತನಕ ಸಕಲ ವಿದ್ಯೆಗಳಲ್ಲೂ ಪಾರಂಗತನಾಗಿರುವ ಪುನೀತ್‌ಗೆ ಈಗ ಬೇಕಾಗಿರುವುದು ಜನಪ್ರಿಯತೆ.

  ಆದರೆ ಚಿತ್ರೋದ್ಯಮದ ಮೇಲೆ ರಾಜ್‌ ಕುಟುಂಬದ ಹಿಡಿತ ದಿನೇ ದಿನೇ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪುನೀತ್‌ ಗೆಲ್ಲುವುದು ಸುಲಭದ ಮಾತೇನಲ್ಲ. ರಾಜ್‌ ಪುತ್ರ ಅನ್ನುವ ಲೇಬಲ್‌ ಈಗ ಉಪಯೋಗಕ್ಕೆ ಬರಲಾರದು. ಅದೂ ಸಾಲದು ಎಂಬಂತೆ ಪುನೀತ್‌ಗಿಂತ ಸುಂದರವಾಗಿರುವ ಹುಡುಗರು ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಪುನೀತ್‌ಗೆ ಗೊತ್ತಿದೆ ಅನ್ನುವುದಕ್ಕೆ ಸಾಕ್ಷಿಯಾಗಿ, ಮುಹೂರ್ತದ ದಿನ ಆತ 'ನನಗೆ ಭಯವಾಗುತ್ತಿದೆ " ಅಂದರು. ಭಯ ಇರಬೇಕು, ಆಗಲೇ ಉದ್ಧಾರವಾಗೋದಕ್ಕೆ ಸಾಧ್ಯ ಎಂದು ಮಗನ ಮಾತಿಗೆ ಧ್ವನಿಗೂಡಿಸಿದರು ರಾಜ್‌.

  ಶಿವಮಣಿಗೇನೂ ಭಯವಿಲ್ಲಪ್ಪಾ ...

  ನಿರ್ದೇಶಕ ಶಿವಮಣಿಗೆ ಇಂಥ ಭಯವಿಲ್ಲ. ಯಾಕೆಂದರೆ ಕ್ಯಾಮರಾ ಮುಂದೆ ತಾನು ಹೇಗೆ ಕಾಣಿಸ್ತೀನಿ ಅನ್ನೋದು ಅವರಿಗೆ ಗೊತ್ತಿದೆ. ಒಂದೂವರೆ ಲಕ್ಷ ಖರ್ಚು ಮಾಡಿ ಫೋಟೋ ಸೆಷನ್‌ ಮಾಡಿಸಿದ್ದಾರೆ. ಚಿತ್ರಸೆಟ್ಟೇರುವುದಕ್ಕೆ ಒಂದೂವರೆ ತಿಂಗಳ ಮೊದಲೇ ಮಾಧ್ಯಮ ಗೋಷ್ಠಿ ನಡೆಸಿ ಭರ್ಜರಿ ಪ್ರಚಾರವನ್ನೂ ಪಡೆದುಕೊಂಡಿದ್ದಾಗಿದೆ. ಕಳೆದ ಭಾನುವಾರ ಕಂಠೀರವದಲ್ಲಿ ಲವ್‌ಯೂ ಚಿತ್ರದ ಮುಹೂರ್ತ . ಅವತ್ತು ಬೆಂಗಳೂರಿನ ಗೋಡೆಗಳಲ್ಲಿ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಕಂಠೀರವ ಸ್ಟುಡಿಯೋದ ತುಂಬಾ ಬ್ಯಾನರ್‌ಗಳು. ಈ ಚಿತ್ರದ ನಾಯಕ ಪಾತ್ರ ಚಿತ್ರದುದ್ದಕ್ಕೂ ಓಡುತ್ತಲೇ ಇರುತ್ತದೆ. ಹೈವೇಯಲ್ಲಿ, ಸಬ್‌ವೇನಲ್ಲಿ, ಬೀಚ್‌ನ ಮರಳು ಹಾಸಿಗೆಯ ಮೇಲೆ, ಸುರಂಗದೊಳಗೆ ಪ್ರೀತಿಯನ್ನು ಹುಡುಕುತ್ತಾ ಆತ ಓಡ್ತಾನೇ ಇರುತ್ತಾನೆ. ಹೀಗೆ ಮಣಿ ಚಿತ್ರದ ಕತೆ ಹೇಳಿದರು. ಅವರನ್ನು ಪ್ರೀತಿಸುವುದಕ್ಕೆ ಚಾಂದಿನಿ ಇದ್ದಾರೆ. ದ್ವೇಷಿಸುವುದಕ್ಕೆ ರಘುವರನ್‌ ಇದ್ದಾರೆ.

  ಹಳೇ ಗಂಡನ ಪಾದಕ್ಕೆ ಶರಣಾದ ಪಾಟೀಲರು

  ಇತ್ತಿತ್ತಲಾಗಿ ಬೀಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬಿ.ಸಿ.ಪಾಟೀಲ್‌ ಮರಳಿಯತ್ನವ ಮಾಡುತ್ತಿದ್ದಾರೆ. ಚಿತ್ರದ ಹೆಸರು 'ಸೂರ್ಯ ಐಪಿಎಸ್‌". ಅವರ ಹಿಂದಿನ ಚಿತ್ರ ಶಿವಪ್ಪನಾಯಕ ಗ್ರಾಮೀಣ ಪ್ರದೇಶಗಳಲ್ಲಷ್ಟೇ ಯಶಸ್ಸು ಕಂಡಿದ್ದು ಪಾಟೀಲ್‌ ತಲೆ ಕೆಡಿಸಿದೆ. ಅದಕ್ಕಾಗಿ ಈ ಬಾರಿ ಹಳೇ ಅವತಾರಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ಅವರು ಸಸ್ಪೆಂಡ್‌ ಆಗಿರುವ ಪೊಲೀಸ್‌ ಅಧಿಕಾರಿ.

  ನಿಜಬದುಕಲ್ಲೂ ಅವರ ಅವಸ್ಥೆ ಅದೇ ಆಗಿರುವುದರಿಂದ ಈ ಚಿತ್ರದ ಕತೆ ತುಂಬಾ ನೈಜವಾಗಿದೆ ಅನ್ನಬಹುದು. ಪಾಟೀಲ್‌ ಅಮಾನತಿಗೆ ಕಾರಣರಾದ ಪೊಲೀಸ್‌ ಅಧಿಕಾರಿ ದಿನಕರ್‌ ಅವರನ್ನೇ ಹೋಲುವ ಪಾತ್ರವೂ ಚಿತ್ರದಲ್ಲಿದೆ ಅನ್ನುವ ಸುದ್ದಿಯಿದೆ.

  ಆದರೆ ಆನ್‌ ದಿ ರೆಕಾರ್ಡ್‌ ಪಾಟೀಲ್‌ ಹೇಳುವ ಪ್ರಕಾರ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗುವಿನಂಥ ಗಂಭೀರ ಸಮಸ್ಯೆಗಳತ್ತ ಚಿತ್ರ ಕ್ಷಕಿರಣ ಹರಿಸುತ್ತದೆ. ಕನ್ನಡ ಚಿತ್ರಗಳನ್ನು ಉತ್ತರ ಕರ್ನಾಟಕಕ್ಕೆ ತಲುಪಿಸುವ ಪಾಟೀಲರ ಲೇಟೆಸ್ಟ್‌ ಸ್ಕೀಮ್‌ ಕೂಡ ಇಲ್ಲಿ ಚಾಲ್ತಿಯಲ್ಲಿರುತ್ತೆ.

  ಜಗ್ಗೇಶ್‌ ನಿವೃತ್ತಿಯಾಗಲು ಇನ್ನೂ 4 ವರ್ಷವಿದೆಯಂತೆ !

  ವಂಶಕ್ಕೊಬ್ಬ ಎಂದಿನಂತೆ ಜಗ್ಗೇಶ್‌ ಬ್ರಾಂಡ್‌ ಚಿತ್ರ. ಎಂದಿನಂತೆ ಅವರ ಜೊತೆ ಕುಣಿಯುವುದಕ್ಕೆ ಇಂಪೋರ್ಟೆಡ್‌ ನಾಯಕಿಯರು. ಎಂದಿನಂತೆ ಮೂವತ್ತು ದಿನಗಳ ಚಿತ್ರೀಕರಣ. ಮಾಣಿಕ್‌ ಚಂದ್‌ ಒಂಬತ್ತು ವರ್ಷದ ನಂತರ ಚಿತ್ರ ನಿರ್ಮಾಣಕ್ಕೆ ಮರಳುತ್ತಿದ್ದಾರೆ ಅನ್ನೋದು ಏಕೈಕ ಹೈಲೈಟು.

  ಬಾಲಾಜಿ ಸಿಂಗ್‌ ನಿರ್ದೇಶನವಿದೆ. ಮುಹೂರ್ತ ನಡೆದದ್ದು ಜಗ್ಗೇಶ್‌ ಅವರ ಫೇವರಿಟ್‌ ಜಾಗವಾದ ದೇವಯ್ಯ ಪಾರ್ಕ್‌ನ ಗಣೇಶನ ಗುಡಿಯಲ್ಲಿ . ಜಗ್ಗೇಶ್‌ ಅವರ ರಾಜಕೀಯ ಕನೆಕ್ಷನ್ನು ದೃಢಪಡಿಸುವುದಕ್ಕೋ ಎಂಬಂತೆ ವಾರ್ತಾಸಚಿವ ಶಿವಣ್ಣ ಮತ್ತು ಸಾರಿಗೆ ಸಚಿವ ಸಗೀರ ಅಹ್ಮದ್‌ ಮುಹೂರ್ತದಲ್ಲಿ ಹಾಜರಿದ್ದರು.

  ಸಿನಿಮಾ ಪ್ರೇಮಿ ಶಿವಣ್ಣ ಎಂದಿನಂತೆ ಫ್ಲ್ಯಾಷ್‌ಬ್ಯಾಕ್‌ಗೆ ಹೊರಟು ಹೋದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ತಾವೀಗ ಸಿನಿಮಾ ನಟನಾಗಬೇಕಿತ್ತು ಅಂದರು. ಕಾಲೇಜು ಮುಗಿಸಿದಾಕ್ಷಣ ಮೈಸೂರಿನ ಪ್ರೀಮಿಯರ್‌ ಸ್ಟುಡಿಯೋ ಗೇಟ್‌ ಮುಂದೆ ಶಿವಣ್ಣ ದಿನಗಟ್ಟಲೆ ನಿಂತಿದ್ದರಂತೆ. ಆದರೆ ಯಾರೂ ಅವಕಾಶ ಕೊಡಲಿಲ್ಲ. ನಟನಾಗಲಿಲ್ಲ ಅನ್ನುವ ಬೇಜಾರಿಗೆ ರಾಜಕಾರಣಿಯಾದರಂತೆ.

  ಸಿನಿಮಾ ಸೆಟ್‌ನಲ್ಲಿ ಇತರ ವಿಷಯಗಳನ್ನೇ ಮಾತನಾಡುವ ಜಗ್ಗೇಶ್‌ ಮೊನ್ನೆ ಟೀವಿ ಮೇಲೆ ಹರಿಹಾಯ್ದರು. ಇನ್ನು ನಾಲ್ಕು ವರ್ಷದಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ ಅಂದರು. 'ಆ ಹೊತ್ತಿಗೆ ಅಸೆಂಬ್ಲಿ ಚುನಾವಣೆ ಬರುತ್ತೆ ಬಿಡಿ " ಎಂದು ಪತ್ರಕರ್ತರು ಜೋಕ್‌ ಮಾಡಿದಾಗ ಅಹುದಹುದು ಎಂಬಂತೆ ಗಹಗಹಿಸಿ ನಕ್ಕರು.

  ಶೇಷಾದ್ರಿಯವರಿಂದ ಮತ್ತೆ ಚಿತ್ರಮಿತ್ರರ ಚಿತ್ರ

  ಮುನ್ನುಡಿ ಖ್ಯಾತಿಯ ಶೇಷಾದ್ರಿ ನಿರ್ದೇಶನದ ಅತಿಥಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಮಾರತಹಳ್ಳಿಯ ಸೇತುವೆಯ ಕೆಳಗೆ. ಫುಟ್‌ಪಾತ್‌ನಲ್ಲೇ ಸುದ್ದಿಗೋಷ್ಠಿ, ಊಟ ತಿಂಡಿ. ಊಟ ರುಚಿಸದೇ ಇದ್ದವರಿಗೆ ಪ್ರಕಾಶ್‌ ರೈ ಮಾತಿನಿಂದ ಹೊಟ್ಟೆ ತುಂಬಿತು. ಚಿತ್ರದಲ್ಲಿ ಉಗ್ರಗಾಮಿಯ ಪಾತ್ರ ನಿರ್ವಹಿಸುತ್ತಿರುವ ರೈ ಒಳ್ಳೇ ಸಿನಿಮಾ ನಿರ್ಮಾಣದ ಅಗತ್ಯವನ್ನು ಪ್ರತಿಪಾದಿಸಿದರು. ಉಳ್ಳವರು ವರ್ಷಕ್ಕೊಂದಾದರೂ ಉತ್ತಮ ಚಿತ್ರ ತಯಾರಿಸಬೇಕು ಎಂದು ಕರೆ ಕೊಟ್ಟರು. 'ಅತಿಥಿ"ಯಂಥಾ ಚಿತ್ರಗಳ ನಿರ್ಮಾಣವನ್ನು ಒಂದು ಚಳವಳಿ ಎಂದೇ ಕರೆದು ಸಂತೋಷಪಟ್ಟರು. ನಟನ ಬೆನ್ನಿಗಂಟಿದ ಇಮೇಜನ್ನು ಅಸಹ್ಯ ಅಮೇಧ್ಯ ಎಂದು ಗೇಲಿ ಮಾಡಿದರು.

  ಅತಿಥಿಯ ಕತೆ ಒಬ್ಬ ಉಗ್ರಗಾಮಿ ಮತ್ತು ಅವನೊಂದಿಗೆ ಅಚಾನಕ್‌ ಆಗಿ 20 ದಿನ ಕಳೆಯುವ ವೈದ್ಯನ ಸುತ್ತ ಸುತ್ತುತ್ತದೆ. ವೈದ್ಯನ ತಲ್ಲಣ, ಭಯೋತ್ಪಾದಕನ ತವಕಗಳೇ ಘಟನೆಗಳಾಗಿ, ಕತೆಯಾಗಿ ಮುಂದುವರೆಯುತ್ತದೆ. ಸಕಲೇಶಪುರದಲ್ಲೇ 12 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಅವಸರದಲ್ಲಿದ್ದಾರೆ ಶೇಷಾದ್ರಿ. ಇದು ಚಿತ್ರಮಿತ್ರರ ಚಿತ್ರ.

  English summary
  Five kannada nonremake films to be released soon

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X