ಮೈಸೂರಿನಲ್ಲಿ ಮದುವೆ ಮಂಟಪದಲ್ಲಿ ನವ ದಂಪತಿಯಿಂದ ಪುನೀತ್‌ಗೆ ಶ್ರದ್ಧಾಂಜಲಿ
ನಟ ಪುನೀತ್ ಇನ್ನಿಲ್ಲವಾಗಿ ಇವತ್ತಿಗೆ ಮೂರನೇ ದಿನ. ಇಂದು ಬೆಳಗ್ಗೆ ಮಣ್ಣಲ್ಲಿ ಮಣ್ಣಾಗಿರುವ ಅಪ್ಪು, ಅಮ್ಮನ ಪಕ್ಕದಲ್ಲಿ ಜಾಗ ಪಡೆದಿದ್ದಾರೆ. ಈ ನೋವಿನ ನಡುವೆಯೇ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಪುನೀತ್‌ರನ್ನು ಕಳುಹಿಸಿಕೊಟ್ಟಿದ್ದಾರೆ. ಇತ್ತ ಅಭಿಮಾನಿಗಳು ಕೂಡ ಭಾರವಾದ ಮನಸ್ಸಿನಲ್ಲಿ ಅಪ್ಪು ಇನ್ನಿಲ್ಲ ಅನ್ನೋದನ್ನು ಅರಗಿಸಿಕೊಳ್ಳುತ್ತಿದ್ದಾರೆ. ಹೀಗೆ ಎಲ್ಲಿ ನೋಡಿದರು ಪುನೀತ್ ನೆನಪುಗಳು, ಅವರ ಸರಳತೆಯ ವಿಡಿಯೋಗಳು, ಸಿನಿಮಾ ಹಾಡುಗಳು ಎಲ್ಲೆಲ್ಲೂ ಕಾಣಸಿಗುತ್ತಿದೆ. ಅಷ್ಟರ ಮಟ್ಟಿಗೆ ಜನ ಪುನೀತ್‌ರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸಾಕಷ್ಟು ಮಂದಿ ತಮ್ಮದೇ ಶೈಲಿಯಲ್ಲಿ ಪುನೀತ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಪುನೀತ್ ಸ್ಮರಣೆಗಳು ಆಗುತ್ತಿವೆ. ಅಂತಾರಾಷ್ಟ್ರೀಯ ಟಿವಿ ಮಾಧ್ಯಮಗಳು ಅಪ್ಪು ಸಾವಿನ ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಇದೀಗ ಮೈಸೂರಿನ ನವ ದಂಪತಿಗಳು ಮದುವೆ ಮಂಟಪದಲ್ಲೆ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆ ನವ ವಧು ವರರು ಕ್ಯಾಂಡಲ್ ಹಚ್ಚಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇಂದು ಮೈಸೂರಿನ ಕನಕ ಭವನದಲ್ಲಿ ಮದುವೆ ಆಗುತ್ತಿರುವ ಮನುಕಿರಣ್ ಮತ್ತು ಲಾವಣ್ಯಾಗೆ ಪುನೀತ್ ಅಂದರೆ ಅಚ್ಚು ಮೆಚ್ಚು. ಇವರಿಬ್ಬರು ಕೂಡ ಪುನೀತ್‌ರನ್ನು ಮೊದಲಿನಿಂದಲೂ ಇಷ್ಟ ಪಡುತ್ತಿದ್ದರು. ಪುನೀತ್ ನಟನೆಯ ಎಲ್ಲಾ ಸಿನಿಮಾವನ್ನು ನೋಡಿರುವ ಇವರು ಅಪ್ಪಟ ಅಭಿಮಾನಿಗಳಂತೆ.

ಅಪ್ಪು ನಿಧನದ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳಲು ಇಷ್ಟ ಇಲ್ಲದೇ ಇದ್ದರೂ ಮೊದಲೇ ಎಲ್ಲವೂ ಸಿದ್ದವಾಗಿದ್ದರಿಂದ ಮದುವೆಯನ್ನು ಸರಳವಾಗಿ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ನೆರೆದಿದ್ದ ಕುಟುಂಬ ಸದಸ್ಯರು ಕೂಡ ವಧು ವರನ ಜೋತೆಗೆ ಶ್ರದ್ಧಾಂಜಲಿ ಸಲ್ಲಿಕೆಯಲ್ಲಿ ಜೊತೆಗೂಡಿದ್ದಾರೆ. ಮದುವೆ ಮಂಟಪದ ಬೆಳಕನ್ನು ಆರಿಸಿ ಕ್ಯಾಂಡಲ್ ಹಿಡಿದು ಒಂದು ನಿಮಿಷ ಎಲ್ಲರು ಸೇರಿ ಮೌನವ್ರತ ಮಾಡಿ ಪುನೀತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಇಂದು ಬೆಳಗ್ಗೆ ಪುನೀತ್‌ಗೆ ಸಕಲ ಸರ್ಕಾರಿ ಗೌರವದೊಂದಿಗೆ ವಿದಾಯ ನೀಡಲಾಗಿದೆ. ಕುಶಲತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಪುನೀತ್ ಪಾರ್ಥೀವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯ್ತು.ಈಡಿಗ ಸಮುದಾಯ ಸಂಪ್ರದಾಯದಂತೆ ಪುನೀತ್ ಅಂತ್ಯಕ್ರೀಯೆ ನಡೆದಿದ್ದು, ವಿನಯ್ ರಾಜ್‌ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ.ಪರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಗಿದೆ.


Click it and Unblock the Notifications











