ಜನ್ಮದಿನದ ನೆಪದಲ್ಲಿ ಮತ್ತೆ ಪಾನಿಪುರಿ ತಿಂದು ಸಂಭ್ರಮಿಸಿದ 'ನಿಧಿಮಾ'
'ಲವ್ ಮಾಕ್‌ಟೇಲ್' ಚಿತ್ರದಲ್ಲಿ ನಾಯಕಿ ನಿಧಿಮಾಳ ಪಾನಿಪುರಿ ಪ್ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಬಹುತೇಕ ಯುವತಿಯರ ಬದುಕಿಗೆ ಹತ್ತಿರವಾಗಿ ಕಂಡಿದ್ದರಿಂದ ಆ ಸನ್ನಿವೇಶವನ್ನು ಮೆಚ್ಚಿಕೊಂಡಿದ್ದರು. ಕೇಳಿದಾಗಲೆಲ್ಲ ಪಾನಿಪುರಿ ಕೊಡಿಸಬೇಕು, ಮಧ್ಯರಾತ್ರಿಯಾದರೂ ಅಂಗಡಿ ಓಪನ್ ಮಾಡಿಸಿ ಅವರನ್ನು ಕಾಡಿ ಬೇಡಿ ಪಾನಿಪುರಿ ಮಾಡಿಸಬೇಕು ಇತ್ಯಾದಿ ಮುದಕೊಡುವ ಸಂಕಷ್ಟಗಳನ್ನು ಅನೇಕರು ಅನುಭವಿಸಿದ್ದಾರೆ!
Recommended Video
ಹಾಗೆಯೇ ನಿಧಿಮಾ ಪಾನಿಪುರಿ ಬಯಕೆ ಇತ್ತು. ಪಾನಿಪುರಿ ಇದ್ದರೆ ಸಾಕು ಬೇರೇನೂ ಬೇಡ ಎನ್ನುವಂತೆ ಪಾನಿಪುರಿ ತಿನ್ನುವ ದೃಶ್ಯಗಳು 'ಲವ್ ಮಾಕ್‌ಟೇಲ್'ನಲ್ಲಿತ್ತು. ವಾಸ್ತವವಾಗಿಯೂ ನಿಧಿಮಾ ಪಾತ್ರಧಾರಿ ಮಿಲನಾ ನಾಗರಾಜ್ ಅಷ್ಟೊಂದು ಪಾನಿಪುರಿ ಪ್ರಿಯರು ಎನಿಸುತ್ತದೆ. ಅವರು ಹಂಚಿಕೊಂಡಿರುವ ಫೋಟೊವೊಂದು ಅದನ್ನು ಸಾರಿ ಹೇಳುವಂತಿದೆ.

ಬರ್ಥಡೇ ಗಿಫ್ಟ್
ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡ 'ನಿಧಿಮಾ' ಮಿಲನಾ ನಾಗರಾಜ್ ಪಾನಿಪುರಿ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಅತ್ಯಂತ ರುಚಿಕರ ಬರ್ಥಡೇ ಗಿಫ್ಟ್ ಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್ ಎಂದು ತಮ್ಮ ಆಪ್ತರಾದ ಹೇಮಾ ಸಾಲಿಮಠ್ ಅವರನ್ನು ಟ್ಯಾಗ್ ಮಾಡಿಕೊಂಡು ಧನ್ಯವಾದ ಹೇಳಿದ್ದಾರೆ.

ನಿಜವಾದ ಪಾತ್ರವೇ ಇರಬೇಕು...
ಮಿಲನಾ ನಾಗರಾಜ್ ಅವರು ಮತ್ತೆ ಪಾನಿಪುರಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಪುಟಿದೆದ್ದಿದ್ದಾರೆ. ಅವರಿಗೆ ಲವ್ ಮಾಕ್‌ಟೇಲ್ ಸನ್ನಿವೇಶಗಳು ನೆನಪಾಗಿವೆ. ನಿಧಿಮಾ ಪಾತ್ರದಲ್ಲಿನ ಗುಣಗಳು ವಾಸ್ತವವಾಗಿ ಮಿಲನಾ ನಾಗರಾಜ್ ಅವರಲ್ಲಿಯೇ ಇತ್ತು ಎನಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಮತ್ತೆ ಪಾನಿಪುರಿ ತಿಂತೀರಾ
ಹೆಚ್ಚಿನ ಕಾಮೆಂಟ್‌ಗಳು ಫೋಟೊದ ಕುರಿತಾಗಿರುವುದಕ್ಕಿಂತ ಪಾನಿಪುರಿಯ ಕುರಿತಾಗಿಯೇ ಇದೆ. 'ಲವ್ ಮಾಕ್‌ಟೇಲ್ 2'ದಲ್ಲಿಯೂ ಬಂದು ಪಾನಿಪುರಿ ತಿಂತಿರಾ ಎಂದು ಕೆಲವರು ಕೇಳಿದ್ದಾರೆ. ಪಾನಿಪುರಿ ಅಂದರೆ ನಿಜಕ್ಕೂ ಅಷ್ಟೊಂದು ಇಷ್ಟವೇ? ಜಾಸ್ತಿ ತಿನ್ನಬೇಡಿ ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ.

ಅನಾರೋಗ್ಯಕ್ಕೆ ಕಾರಣ
'ಲವ್ ಮಾಕ್‌ಟೇಲ್' ಹಿಟ್ ಆದಾಗ ಈ ಚಿತ್ರದ ಪಾನಿಪುರಿ ಸನ್ನಿವೇಶಗಳೇ ಅನೇಕ ಮೀಮ್‌ಗಳಿಗೆ ವಸ್ತುವಾಗಿದ್ದವು. ನಿಧಿಮಾ ಅನಾರೋಗ್ಯಕ್ಕೆ ಪಾನಿಪುರಿಯಲ್ಲಿದ್ದ ಹುಳವೇ ಕಾರಣ ಎಂಬಂತಹ ತಮಾಷೆಯ ಮೀಮ್‌ಗಳು ಸೃಷ್ಟಿಯಾಗಿದ್ದವು. ಈಗಲೂ ಕೆಲವರು ಅಂತಹ ಕಾಮೆಂಟ್ ಹಾಕಿದ್ದಾರೆ. ಮೊದಲನೆಯ ಭಾಗದಲ್ಲಿ ಪಾನಿಪುರಿ ತಿಂದೇ ಕ್ಯಾನ್ಸರ್ ಬಂದಿತ್ತು. ಈಗ ಮತ್ತೆ ತಿನ್ನುತ್ತಿದ್ದೀರಲ್ಲ ಎಂದು ಕೇಳಿದ್ದಾರೆ.

ಅದೃಷ್ಟ ಮಾಡಿದ್ದೆ ಎಂದಿದ್ದ ಕೃಷ್ಣ
"ನಿನ್ನ ಪರಿಶುದ್ಧವಾದ ಪ್ರೀತಿ, ನಿನ್ನ ಪರಿಶುದ್ಧವಾದ ಹೃದಯ, ಪರಿಶುದ್ಧವಾದ ನಗು, ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನಿಜವಾದ ಸಂತೋಷ ಅಂದರೆ ಏನು ಎಂದು ನನಗೆ ತೋರಿಸಿದೆ. ಇದು ನನಗೆ ನಿಧಿಮಾ ಬರೆಯಲು ಪ್ರೇರಣೆಯಾಯಿತು. ಹುಟ್ಟುಹಬ್ಬದ ಶುಭಾಶಯಗಳು" ಎಂದು ಮಿಲನಾ ಜನ್ಮದಿನ ನಟ ಡಾರ್ಲಿಂಗ್ ಕೃಷ್ಣ ತಮ್ಮ ಭಾವಿ ಪತ್ನಿಗೆ ಶುಭ ಹಾರೈಸಿದ್ದರು. 'ನಿಧಿಮಾ ಬರಿ ಒದೆಯುತ್ತಾಳಷ್ಟೇ, ಆದರೆ ಮಿಲನಾ... ನೀವೇ ಫೋಟೊದಲ್ಲಿ ನೋಡುತ್ತೀರಲ್ಲ, ಹೀಗೆ...' ಎಂದು ಮಿಲನಾ ನಾಗರಾಜ್ ತಮ್ಮ ಬೆನ್ನ ಮೇಲೆ ನಿಂತ ಫೋಟೊ ಹಂಚಿಕೊಂಡಿದ್ದರು.


Click it and Unblock the Notifications











