ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ನಿಖಿಲ್ ಕುಮಾರ್
ಸ್ಯಾಂಡಲ್ ವುಡ್ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿಖಿಲ್ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲೇ ವಿಶೇಷ ಪೂಜೆ ಮಾಡಿ, ತಂದೆ-ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಿಖಿಲ್ ತಂದೆ-ತಾಯಿಯ ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೂಜೆಯ ಬಳಿಕ ನಿಖಿಲ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದ್ದು, ಈ ಸಂಭ್ರಮದಲ್ಲಿ ಪತ್ನಿ ಜೊತೆಯಲ್ಲಿರುವುದು ನಿಖಿಲ್ ಗೆ ಡಬಲ್ ಸಂತಸ.
ಪತಿಯ ಹುಟ್ಟುಹಬ್ಬದ ದಿನ ರೇವತಿ ಪಿಂಕ್ ಬಣ್ಣದ ಜೆರಿ ಸೀರಿಯಲ್ಲಿ ಕಂಗೊಳಿಸಿದ್ದಾರೆ. ಮದುವೆ ಬಳಿಕ ಮೊದಲ ಹುಟ್ಟುಹಬ್ಬವನ್ನು ಇಬ್ಬರು ಸಂತಸದಿಂದ ಆಚರಿಸಿದ್ದಾರೆ.

ಇನ್ನು ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿ, ಪ್ರೀತಿಯ ಸಂದೇಶ ರವಾನಿಸುತ್ತಿದ್ದಾರೆ. ನಿಖಿಲ್ ಕುರುಕ್ಷೇತ್ರ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ.
ಕುರುಕ್ಷೇತ್ರ ಬಳಿಕ ನಿಖಿಲ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಸ್ವಲ್ಪ ಸಮಯದ ಬಳಿಕ ರೈಡರ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ರೈಡರ್ ಪೋಸ್ಟರ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ರೈಡರ್ ಚಿತ್ರಕ್ಕೆ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈಡರ್ ನಿಜ ಜೀವನದಿಂದ ಸ್ಫೂರ್ತಿ ಪಡೆದ ಸಿನಿಮಾ ಎಂದು ಹೇಳಲಾಗುತ್ತಿದೆ. ಕ್ರೀಡಾಧಾರಿತ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ಸಧ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.


Click it and Unblock the Notifications











