ದರ್ಶನ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ನಿಖಿಲ್ ಕುಮಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಎಂದು ಗುರುತಿಸಿಕೊಂಡಿರುವ ಪೌರಾಣಿಕ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 7 ರಂದು ಅಂದ್ರೆ ಭಾನುವಾರ ಸಂಜೆ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಆಗುತ್ತಿದೆ. ಈ ಸಮಾರಂಭಕ್ಕೆ ಎಲ್ಲ ಕಲಾವಿದರು ಬರಲಿದ್ದಾರೆ ಎಂಬ ನಿರೀಕ್ಷೆ ಇದೆ.
ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ನಿಖಿಲ್ ಕುಮಾರ್ ನಡುವೆ ಎಲ್ಲವು ಸರಿಯಿಲ್ಲ ಎಂಬ ಮಾತಿದೆ. ದುರ್ಯೋಧನ ಪಾತ್ರಧಾರಿ ದರ್ಶನ್ ಅವರಿಗಿಂತ ಅಭಿಮನ್ಯು ಪಾತ್ರಕ್ಕೆ ಹೆಚ್ಚು ಮಾನ್ಯತೆ ನೀಡಲಾಗಿದೆ ಎಂಬ ಆರೋಪ ಇತ್ತು.

ಇಂತಹ ಸುದ್ದಿ ಹರಿದಾಡಿದ ಬಳಿಕ ದರ್ಶನ್ ಮತ್ತು ನಿಖಿಲ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ನಿಖಿಲ್ ವರ್ಸಸ್ ದರ್ಶನ್ ಎನ್ನುವ ರೀತಿಯಲ್ಲೇ ಬಿಂಬಿತವಾಗಿತ್ತು. ಆಮೇಲೆ ಮಂಡ್ಯ ಚುನಾವಣೆ ವೇಳೆಯೂ ಈ ವಾರ್ ಮತ್ತಷ್ಟು ಹೆಚ್ಚಾಯಿತು. ಇದೀಗ, ಈ ವಾರ್, ಮುನಿಸು, ಅಂತೆ-ಕಂತೆಗಳಿಗೆ ಬ್ರೇಕ್ ಬಿದ್ದಿದೆ. ದರ್ಶನ್ ಮತ್ತು ನಿಖಿಲ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಖಿಲ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಆಡಿಯೋ ರಿಲೀಸ್ ನಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

''ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ.. ಈ ಪಾತ್ರದಿಂದ ನಾನು ಸಾಕಷ್ಟು ಕಲಿತೆ.. ಅಂಬರೀಶ್ ಅಂಕಲ್, ದರ್ಶನ್‌ರವರು, ಅರ್ಜುನ್ ಸರ್ಜಾರವರು, ರವಿಚಂದ್ರನ್‌ರವರು, ಶಶಿ ಕುಮಾರ್‌ರವರು, ಭಾರತಿ ವಿಷ್ಣುವರ್ಧನ್ ರವರಂತಹ ಚಿತ್ರರಂಗದ ದಿಗ್ಗಜರೆಲ್ಲಾ ಅಭಿನಯಿಸಿರುವ ಬಹುತಾರಾಗಣದ ಸಿನಿಮಾ ಇದಾಗಿದೆ.. ದೊಡ್ಡ ದೊಡ್ಡ ಕಲಾವಿದರನ್ನೆಲ್ಲಾ ಒಟ್ಟಿಗೆ ಸೇರಿಸಿ ಸಿನಿಮಾ ಮಾಡೋದು ಸಾಮಾನ್ಯ ವಿಷಯ ಅಲ್ಲ.. ನಿರ್ಮಾಪಕ ಮುನಿರತ್ನ ಅವರು ನಿಜಕ್ಕೂ ಅಂತಹ ದೊಡ್ಡ ಸಾಧನೆ ಮಾಡಿದ್ದಾರೆ..''

''ಇನ್ನೂ ಚಿತ್ರ ಇಷ್ಟು ಅದ್ಭುತವಾಗಿ ಮೂಡಿ ಬರೋಕೆ ನಿರ್ದೇಶಕ ನಾಗಣ್ಣ ಹಾಗೂ ನಾಗೇಂದ್ರ ಪ್ರಸಾದ್ ಸಾಕಷ್ಟು ಶ್ರಮಿಸಿದ್ದಾರೆ ಅವರಿಗೆ ನಿಜಕ್ಕೂ ನಾನು ಕೃತಜ್ಞ.. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಿನಿಮಾ ಮತ್ತಷ್ಟು ಕಳೆಗಟ್ಟುವಂತೆ ಒಳ್ಳೊಳ್ಳೆ ಹಾಡುಗಳನ್ನು ನೀಡಿದ್ದಾರೆ... ಒಟ್ಟಾರೆ ಇಡೀ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.. 5 ಭಾಷೆಗಳಲ್ಲಿ ಏಕ ಕಾಲದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ.. ವಿಶ್ವದಲ್ಲೇ ಪ್ರಥಮ ಬಾರಿಗೆ ಪೌರಾಣಿಕ ಸಿನಿಮಾವೊಂದು 3ಡಿಯಲ್ಲಿ ಮೂಡಿ ಬರುತ್ತಿದೆ.''
''ಕನ್ನಡಿಗರ ಇಂತಹ ಹೊಸ ಪ್ರಯತ್ನವನ್ನ ಕನ್ನಡಿಗರೆಲ್ಲರೂ ಪ್ರೊತ್ಸಾಹಿಸಬೇಕು.. ಇನ್ನೂ ಸಿನಿಮಾದ ಹಾಡುಗಳು ಇದೇ ತಿಂಗಳ 7ನೇ ತಾರೀಖು ಬಿಡುಗಡೆ ಆಗ್ತಿವೆ.. ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಬರ್ತಿದೀನಿ.. ಆ ಅದ್ಬುತವನ್ನ ಕಣ್ತುಂಬಿಕೊಳ್ಳೋಕೆ ನೀವು ಮರೆಯದೆ ಬನ್ನಿ ನಮ್ಮೆಲ್ಲರ ಖುಷಿಯನ್ನ ಇನ್ನು ಹೆಚ್ಚು ಮಾಡಿ...'' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











