ರಾಗಿ ಬೆಳೆದ ನಿಖಿಲ್ ಕುಮಾರಸ್ವಾಮಿ, ಭೇಷ್ ಎಂದ ದೇವೇಗೌಡ
ಮದುವೆಯಾದ ಬಳಿಕ ಹಲವು ಹೊಸತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಕೃಷಿ ಕಾಯಕವನ್ನು ಪ್ರಾರಂಭಿಸಿದ್ದರು. ರಾಜಕೀಯ ಹಾಗೂ ನಟನೆ ಜೊತೆಗೆ ಕೃಷಿಕನೂ ಆಗಲು ಹೊರಟಿದ್ದರು.
Recommended Video
ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ರಾಮನಗರದ ಕೇತಗಾನಹಳ್ಳಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದ ನಿಖಿಲ್ ಕುಮಾರಸ್ವಾಮಿ ಇದೀಗ ಅಲ್ಲಿ ರಾಗಿ ಬೆಳೆದಿದ್ದಾರೆ. ಮೊಮ್ಮಗನ ಕೃಷಿ ನೋಡಲು ಖುದ್ದು ಮಾಜಿ ಪ್ರಧಾನಿ ದೇವೇಗೌಡರು ಹೊಲಕ್ಕೆ ಆಗಮಿಸಿದ್ದಾರೆ. ಜೊತೆಗೆ ಕುಮಾರಸ್ವಾಮಿ ಸಹ ಇದ್ದಾರೆ.
ದೇವೇಗೌಡರು ಹೊಲದಲ್ಲಿ ನಿಂತು ರಾಗಿ ತೆನೆ ಪರಿಶೀಲಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, 'ರಾಮನಗರದ ಕೇತಗಾನಹಳ್ಳಿಯಲ್ಲಿ ನಾನು ಮತ್ತು ಕುಮಾರಣ್ಣನವರು ಅತ್ಯಂತ ಪ್ರೀತಿ, ಕಕ್ಕುಲತೆಗಳಿಂದ ಕೃಷಿ ಮಾಡಿದ್ದೇವೆ. ನಮ್ಮಿಬ್ಬರ ಈ ಕೃಷಿ ಕಾರ್ಯವನ್ನು ಮಣ್ಣಿನ ಮಗ, ರೈತರ ನಾಯಕ ದೇವೇಗೌಡರು ಖುದ್ದು ವೀಕ್ಷಿಸಿ ಖುಷಿಪಟ್ಟ ಸಂದರ್ಭವಿದು' ಎಂದಿದ್ದಾರೆ. ವಿಡಿಯೋದಲ್ಲಿ ಕುಮಾರಸ್ವಾಮಿ ಸಹ ಇದ್ದಾರೆ.

ಎಲ್ಲ ರೈತ ಮಕ್ಕಳಿಗೂ ಯಶಸ್ಸು ಸಿಗಲಿ: ನಿಖಿಲ್ ಹಾರೈಕೆ
ಹಲವು ತಿಂಗಳುಗಳ ಹಿಂದೆ ತಾವು ಕೃಷಿ ಆರಂಭಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ನಿಖಿಲ್ 'ನಾನು ಸಹಾ ರೈತನ ಮಗನಾಗಿದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ಇದೇ ರೀತಿ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ' ಎಂದಿದ್ದರು ನಿಖಿಲ್.

ಕೃಷಿಕನಾಗುವತ್ತ ನಿಖಿಲ್ ಕುಮಾರಸ್ವಾಮಿ
ಕಳೆದ ಜುಲೈ ತಿಂಗಳಲ್ಲಿ ಕೃಷಿಗೆ ಭೂಮಿ ಹದಮಾಡಲು ಆರಂಭಿಸಿದ್ದ ನಿಖಿಲ್ ಇದೀಗ ರಾಗಿ ಬೆಳೆದಿದ್ದಾರೆ. ರಾಗಿ ಮಾತ್ರವಲ್ಲದೆ ಇತರೆ ತರಕಾರಿಗಳನ್ನು ಸಹ ನಿಖಿಲ್ ಬೆಳೆಯುತ್ತಿದ್ದಾರೆ. ಕೃಷಿ ಮಾಡುವ ಆ ಮೂಲಕ ನಟನೆ, ರಾಜಕೀಯದ ಜೊತೆಗೆ ಕೃಷಿಯನ್ನೂ ವೃತ್ತಿಯನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಕೃಷಿ ಬಗ್ಗೆ ಹಾಗೂ ರೈತರ ಬಗ್ಗೆ ತಮಗೆ ಇರುವ ಒಲವು ಮತ್ತು ಗೌರವಗಳನ್ನು ಭಾಷಣಗಳಲ್ಲಿ, ಸಂದರ್ಶನಗಳಲ್ಲಿ ಪ್ರಕಟಿಸಿದ್ದಾರೆ.

ಹೊಸ ಮನೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ
ಲಾಕ್‌ಡೌನ್ ಸಮಯದಲ್ಲಿ ಮದುವೆಯಾದ ನಿಖಿಲ್ ಕುಮಾರಸ್ವಾಮಿ ಆಗಿನಿಂದಲೂ ತಮ್ಮ ಬಹುಸಮಯವನ್ನು ತೋಟದ ಮನೆಯಲ್ಲಿಯೇ ಕಳೆದಿದ್ದಾರೆ. ಅಷ್ಟೇ ಅಲ್ಲದೆ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಿಸಿದ್ದಾರೆ.

'ರೈಡರ್' ಸಿನಿಮಾ ಬಿಡುಗಡೆಗೆ ತಯಾರು
ನಿಖಿಲ್ ಕುಮಾರಸ್ವಾಮಿ ಅಭಿನಯದ 'ರೈಡರ್' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ನಡುವೆ ಶಿವರಾಜ್ ಕುಮಾರ್ ಜೊತೆಗೆ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ನಿರ್ದೇಶಕ ಕೃಷ್ಣ ಜೊತೆಗೆ ಸಿನಿಮಾ ಒಂದು ಮಾಡಲಿದ್ದಾರೆ.


Click it and Unblock the Notifications











