twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ರಾಜಕೀಯ ಭವಿಷ್ಯ ನಿಂತಿರೋದು 'ಅಮರ್' ನಿರ್ಧಾರದ ಮೇಲೆ

    By ಲವಕುಮಾರ್
    |

    ಮಂಡ್ಯ, ಜನವರಿ 13: ಬಿಳಿಬಣ್ಣದ ಜರಿ ಪಂಚೆಯುಟ್ಟು ಮಂಡ್ಯಕ್ಕೆ ಎಂಟ್ರಿ ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ನೋಡಿದವರಿಗೆ ಇದು ರಾಜಕೀಯದ ಗೆಟಪ್ ಎನ್ನುವುದು ಗೊತ್ತಾಗಿ ಬಿಡುತ್ತದೆ. ಆದರೆ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ನಿರ್ಧಾರದ ಮೇಲೆಯೇ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ನಿಂತಿದೆ ಎಂಬುದು ಅಷ್ಟೇ ಸತ್ಯ.

    ಸದ್ಯಕ್ಕೆ ಶೀಘ್ರವೇ ಬಿಡುಗಡೆಯಾಗಲಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಪ್ರಚಾರಕ್ಕಾಗಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಿರುವುದಾಗಿ ನಿಖಿಲ್ ಕುಮಾರಸ್ವಾಮಿ ಹೇಳುತ್ತಿದ್ದಾರೆಯಾದರೂ ಇದರ ಹಿಂದೆ ರಾಜಕೀಯದ ಉದ್ದೇಶವನ್ನು ತಳ್ಳಿ ಹಾಕಲಾಗುತ್ತಿಲ್ಲ.

    ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ

    ಏಕೆಂದರೆ ಚಿತ್ರ ಪ್ರಚಾರದೊಂದಿಗೆ ರಾಜಕೀಯ ಲಾಭವನ್ನು ಪಡೆಯುವ ಹಾದಿಯಲ್ಲಿರುವ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದು, ಅದು ಖಚಿತವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಆದರೂ ಅದು ಅಷ್ಟು ಸುಲಭವಲ್ಲ ಎಂಬುದನ್ನು ಅಲ್ಲಿನ ರಾಜಕೀಯ ಪರಿಸ್ಥಿತಿಗಳು ಹೇಳುತ್ತಿವೆ.

    ಈಗಾಗಲೇ ಹಾಸನದಿಂದ ಪ್ರಜ್ವಲ್ ರೇವಣ್ಣ ಮತ್ತು ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು ಅದು ಖಚಿತ ಎಂಬುದು ಈಗ ಸ್ಪಷ್ಟವಾದಂತೆ ಗೋಚರಿಸುತ್ತಿದೆ. ಮುಂದೆ ಓದಿ..

     ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ

    ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ

    ಇಷ್ಟಕ್ಕೂ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದು ಚಿತ್ರ ಪ್ರಚಾರಕ್ಕೆ ಎನ್ನುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮದ್ದೂರು ತಾಲೂಕು ಭಾರತೀನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮುಖಂಡರು ಒತ್ತಾಯ ಮಾಡುತ್ತಿದ್ದು, ಅವರ ಒತ್ತಾಸೆಯನ್ನು ಗೌರವಿಸುತ್ತೇನೆ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರ ಆದೇಶದಂತೆ ನಡೆಯುತ್ತೇನೆ ಎಂದು ಹೇಳಿದ್ದು, ಆ ಮಾತು ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ ಎಂಬುದನ್ನು ಸಾರಿ ಹೇಳುವಂತಿದೆ.

     ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಿದ್ದಾರೆ

    ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಿದ್ದಾರೆ

    ಇನ್ನೊಂದೆಡೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರ ಎರಡರಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಜತೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷ ಕಟ್ಟುವ ಜವಾಬ್ದಾರಿಯೂ ನನ್ನ ಮೇಲಿದೆ ಎನ್ನುವ ಮೂಲಕವೂ ಮುಂದಿನ ದಿನಗಳಲ್ಲಿ ಫುಲ್ ಟೈಂ ರಾಜಕೀಯ ಮಾಡುವ ಉದ್ದೇಶವನ್ನು ನಿಖಿಲ್ ಹೊರಹಾಕಿರುವುದು ಕಾಣುತ್ತಿದೆ. ಇದೆಲ್ಲದರ ನಡುವೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿರವರು ದೇವೇಗೌಡರಿಗೆ ಇದು ಕೊನೆಯ ಚುನಾವಣೆ. ಅವರ ಸ್ವಂತ ಕ್ಷೇತ್ರವಾಗಿದ್ದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರಿಗೆ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಹೀಗಾಗಿ ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡುವುದಿಲ್ಲ ಬದಲಿಗೆ ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಿದ್ದಾರೆ ಎಂಬ ಹೇಳಿಕೆಯನ್ನು ತೇಲಿಬಿಟ್ಟಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

     ಕಾಂಗ್ರೆಸ್ ಮಂಡ್ಯದಲ್ಲಿ ನೆಲಕಚ್ಚಿದಂತೆಯೇ!

    ಕಾಂಗ್ರೆಸ್ ಮಂಡ್ಯದಲ್ಲಿ ನೆಲಕಚ್ಚಿದಂತೆಯೇ!

    ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅದಕ್ಕೆ ಕಾರಣವೂ ಇದೆ. ಈಗಾಲೇ ಮಂಡ್ಯ ಜೆಡಿಎಸ್ ನ ಹಿಡಿತದಲ್ಲಿದೆ. ಮುಂದಿನ ಐದು ವರ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಅಲ್ಲಿಗೆ ಕಾಂಗ್ರೆಸ್ ಮಂಡ್ಯದಲ್ಲಿ ನೆಲಕಚ್ಚಿದಂತೆಯೇ. ಇದೆಲ್ಲವನ್ನು ಅರಿತ ದೇವೇಗೌಡರ ಕುಟುಂಬದ ವಿರೋಧಿಯೂ ಆದ ಹಾಸನದ ಕಾಂಗ್ರೆಸ್ ಮುಖಂಡ ಮಾಜಿ ಸಚಿವರಾದ ಎ.ಮಂಜು ಅವರು ಮಂಡ್ಯದಿಂದ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯ ಮಾಡಿದ್ದಾರೆ. ಜತೆಗೆ ಮಂಡ್ಯ ಯುವ ಕಾಂಗ್ರೆಸ್ ಕೂಡ ಅಭಿಷೇಕ್ ಅವರೇ ಮಂಡ್ಯದಿಂದ ಸ್ಪರ್ಧಿಸಲಿ ಎಂಬ ಒತ್ತಾಯವನ್ನು ಮಾಡುತ್ತಾ ಬಂದಿದೆ.

     ಮಂಡ್ಯದಲ್ಲಿ ಮಾತ್ರ ಒಮ್ಮತಕ್ಕೆ ಬರುವುದು ಕಷ್ಟ

    ಮಂಡ್ಯದಲ್ಲಿ ಮಾತ್ರ ಒಮ್ಮತಕ್ಕೆ ಬರುವುದು ಕಷ್ಟ

    ಬಹುಶಃ ಇದನ್ನರಿತ ನಿಖಿಲ್ ಕುಮಾರಸ್ವಾಮಿ ಅವರು ಕೊನೆಗಳಿಗೆಯಲ್ಲಿ ದೇವೇಗೌಡರ ಹೆಸರನ್ನು ಎಳೆದು ತಂದಿದ್ದಾರೆ. ಮೈತ್ರಿ ಸರ್ಕಾರಗಳು ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆಯಿಂದ ಸೀಟು ಹಂಚಿಕೊಂಡರೂ ಮಂಡ್ಯದಲ್ಲಿ ಮಾತ್ರ ಒಮ್ಮತಕ್ಕೆ ಬರುವುದು ಕಷ್ಟವಾಗಲಿದೆ ಎನ್ನುವುದು ಈಗಿನ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವವರಿಗೆ ತಿಳಿಯುತ್ತಿದೆ.ಅಭಿಷೇಕ್ ಅವರು ಸ್ಪರ್ಧೆಗಿಯುವಂತೆ ಒತ್ತಾಯಗಳನ್ನು ಯುವ ಸಮೂಹ ಮಾಡುತ್ತಿದೆ. ಅವರು ಏನು ಮಾಡುತ್ತಾರೆ. ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

    Read more about: nikhil gowda abhishek
    English summary
    According to sources Prajwal Revanna from Hassan and Nikhil Kumaraswamy from Mandya contest to upcoming Lok Sabha election. Here's a brief report on this.
    Sunday, January 13, 2019, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X