ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಹೆಸರು ಪ್ರಕಟ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅವರ ನಟನೆಯ 'ರೈಡರ್' ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಅವರ ಹೊಸ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ.
ಇಂದು (ಜನವರಿ 22) ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ ನಿಖಿಲ್ ನಟನೆಯ ಹೊಸ ಸಿನಿಮಾದ ಹೆಸರನ್ನು ಘೋಷಿಸಲಾಗಿದೆ.
ಮಂಜು ಅಥರ್ವ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದು, ಸಿನಿಮಾದ ಹೆಸರು 'ಯದುವೀರ'. ಸಿನಿಮಾವನ್ನು ಕೆವಿಎನ್ ಬ್ಯಾನರ್ ಅಡಿಯಲ್ಲಿ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾದ ಪೋಸ್ಟರ್ ಸಹ ಇಂದು ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ ಒಂದು ಕೈಯಲ್ಲಿ ಟೀ ಗ್ಲಾಸ್ ಹಿಡಿದು ಸಿಗರೇಟು ಸೇದುತ್ತ ರಗಡ್ ಲುಕ್ ಕೊಡುತ್ತಿರುವ ನಿಖಿಲ್‌ರ ಚಿತ್ರವಿದೆ. ಪೋಸ್ಟರ್‌ನಲ್ಲಿ ಕಪ್ಪು ಬಣ್ಣವೇ ಪ್ರಧಾನವಾಗಿದ್ದು, ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಆಗಿರಬಹುದೆಂಬ ಅನುಮಾನ ಮೂಡಿಸುತ್ತಿದೆ.
ಯದುವೀರ ಮೈಸೂರಿನ ರಾಜರ ಹೆಸರು ಈ ಹೆಸರು ಇಟ್ಟಿದ್ದಕ್ಕೆ ಸಿನಿಮಾಕ್ಕೆ ಆಕ್ಷೇಪ ಎದುರಾಗುವ ಸಂಭವವೂ ಇದೆ. ಆದರೆ ಈವರೆಗೆ ಯಾವುದೇ ಆಕ್ಷೇಪಗಳು ಕೇಳಿ ಬಂದಿಲ್ಲ.
ಇಂದು (ಜನವರಿ 22) ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ. ಆದರೆ ಕೊರೊನಾ ಸಂಕಷ್ಟದ ಪರಿಸ್ಥಿತಿ ಇರುವ ಕಾರಣ ತಾವು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹುಟ್ಟುಹಬ್ಬ ಆಚರಣೆ ಮಾಡುವ ಬದಲಿಗೆ ಕೋವಿಡ್ ನಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ನಿಖಿಲ್ ಮನವಿ ಮಾಡಿದ್ದಾರೆ.
'ಯದುವೀರ' ಸಿನಿಮಾದ ಬಳಿಕ ನಂದ ಕಿಶೋರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಂದ ಕಿಶೋರ್ ಪ್ರಸ್ತುತ ಕೊಬ್ರಿ ಮಂಜು ಪುತ್ರನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಟನೆಯ ಕೊನೆಯ ಸಿನಿಮಾ 'ರೈಡರ್' ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾವನ್ನು ಆನಂದ್ ಆಡಿಯೋ ನಿರ್ಮಾಣ ಮಾಡಿತ್ತು. ಸಿನಿಮಾ ಹಿಟ್ ಎನಿಸಿಕೊಂಡಿತು. ಸಿನಿಮಾದ ಪ್ರಚಾರಕ್ಕಾಗಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಮುಂತಾದೆಡೆಗಳಲ್ಲಿ ನಿಖಿಲ್ ಸಂಚಾರ ಮಾಡಿದ್ದರು. ಸಿನಿಮಾದ ಪೈರಸಿ ಕಾಪಿ ಹೊರಬಂದ ಕಾರಣ ಸಿನಿಮಾಕ್ಕೆ ತುಸು ಹಿನ್ನೆಡೆ ಉಂಟಾಯಿತು.


Click it and Unblock the Notifications











