ಪತ್ನಿಯ ಸೀಮಂತ ಸಂಭ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಂದೆ ಆಗುವ ನಿರೀಕ್ಷೆಯಲ್ಲಿದ್ದಾರೆ. ನಿಖಿಲ್ ಹಾಗೂ ರೇವತಿ ಮಗುವಿನ ನಿರೀಕ್ಷೆಯಲ್ಲಿದ್ದು, ಕೆಲವೇ ತಿಂಗಳಲ್ಲಿ ದೇವೇಗೌಡರ ಕುಟುಂಬಕ್ಕೆ ಪುಟ್ಟ ಮಗುವಿನ ಆಗಮನವಾಗಲಿದೆ.
ತಾಯಿಯಾಗುತ್ತಿರುವ ರೇವತಿಗೆ ಇಂದು ಸೀಮಂತ ಶಾಸ್ತ್ರ ಮಾಡಲಾಗುತ್ತಿದೆ. ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ನಿಖಿಲ್ ಕುಮಾರಸ್ವಾಮಿ ಮಾಡುತ್ತಿದ್ದಾರೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಾನ್ವಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದೇವೇಗೌಡರ ಕುಟುಂಬದ ಸಂಬಂಧಿಗಳು, ನಿಖಿಲ್-ರೇವತಿಯ ಗೆಳೆಯರು, ಆಪ್ತೇಷ್ಟರಿಗಷ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಕೆಲವು ತಿಂಗಳ ಹಿಂದೆಯೇ ರೇವತಿ-ನಿಖಿಲ್ ಪೋಷಕರಾಗುತ್ತಿರುವ ಸುದ್ದಿ ಹರಡಿತ್ತು. ಸ್ವತಃ ಕುಮಾರಸ್ವಾಮಿ ಅವರೇ ಈ ವಿಷಯವನ್ನು ಮೊದಲಿಗೆ ಮಾಧ್ಯಮಗಳಿಗೆ ತಿಳಿಸಿದ್ದರು. ನಂತರ ನಿಖಿಲ್ ಕುಮಾರಸ್ವಾಮಿ ಸಹ ಈ ಸುದ್ದಿಯನ್ನು ಧೃಡಪಡಿಸಿದ್ದರು.

ಮಗುವಿನ ಬಗ್ಗೆ ಭವಿಷ್ಯ ನುಡಿದಿರುವ ವಿನಯ್ ಗುರೂಜಿ
ನಿಖಿಲ್ ಹಾಗೂ ರೇವತಿ ಜೋಡಿಗೆ ಯಾವ ಮಗು ಆಗಲಿದೆ ಎಂದು ವಿನಯ್ ಗುರೂಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಜೆಡಿಎಸ್ ಮುಖಂಡ ಟಿ.ಎ.ಶರವಣ ಮನೆಗೆ ಆಗಮಿಸಿದ್ದ ವಿನಯ್ ಗುರೂಜಿ, ಕುಮಾರಸ್ವಾಮಿ ಬಳಿ ರೇವತಿ-ನಿಖಿಲ್ ಮಗುವಿನ ವಿಷಯ ಮಾತನಾಡಿದ್ದು, ''ನಿಖಿಲ್-ರೇವತಿಗೆ ಗಂಡು ಮಗು ಆಗುತ್ತದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುತ್ತದೆ'' ಎಂದಿದ್ದಾರೆ. ಅಷ್ಟೇ ಅಲ್ಲದೆ ''ನಿಖಿಲ್‌ಗೆ ಶಾಸಕನಾಗುವ ಯೋಗ ಇದೆ, ಜೆಡಿಎಸ್‌ಗೂ ಭವಿಷ್ಯದಲ್ಲಿ ಉತ್ತಮ ದಿನಗಳು ಇವೆ'' ಎಂದಿದ್ದಾರೆ.

ಕಳೆದ ವರ್ಷ ನಡೆದಿದ್ದ ವಿವಾಹ
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕೊರೊನಾ ನಡುವೆಯೇ ವಿವಾಹವಾದರು. ಬಿಡದಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಆಪ್ತ ಕುಟುಂಬ ವರ್ಗದ ಸಮ್ಮುಖದಲ್ಲಿ ನಿಖಿಲ್-ರೇವತಿಯ ವಿವಾಹ ನಡೆಯಿತು. ಮದುವೆ ನಂತರ ಕೆಲ ಕಾಲ ಬಿಡದಿಯಲ್ಲಿಯೇ ಈ ಜೋಡಿ ವಾಸವಿದ್ದರು. ಬಿಡದಿ ಸಮೀಪ ಜಮೀನಿನಲ್ಲಿ ಕೃಷಿ ಆರಂಭಿಸಿದ್ದರು. ಜೊತೆಗೆ ಹೊಸ ಮನೆ ನಿರ್ಮಾಣ ಕಾರ್ಯವನ್ನೂ ಆರಂಭಿಸಿದ್ದರು ನಿಖಿಲ್ ಕುಮಾರಸ್ವಾಮಿ. ಪರಸ್ಪರ ಅನ್ಯೋನ್ಯವಾಗಿರುವ ನಿಖಿಲ್-ರೇವತಿ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿಗಳಲ್ಲೊಂದು.

ಪತ್ನಿಯೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ
ನಿಖಿಲ್ ಕುಮಾರಸ್ವಾಮಿ ಆಗಾಗ್ಗೆ ಪತ್ನಿಯೊಂದಿಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಪತ್ನಿಯೊಂದಿಗೆ ಗಣೇಶ ಹಬ್ಬ ಆಚರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮಾತ್ರವೇ ಅಲ್ಲದೆ ಪತ್ನಿಯೊಂದಿಗಿನ ಹಲವು ಚಿತ್ರಗಳನ್ನು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವರ ಚಿತ್ರಗಳು ದಂಪತಿಯ ನಡುವಿನ ಅನ್ಯೋನ್ಯತೆಯನ್ನು ತೋರಿಸುತ್ತವೆ.

ಸಿನಿಮಾ, ರಾಜಕೀಯ ಎರಡರಲ್ಲೂ ಬ್ಯುಸಿ
ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ನಿಖಿಲ್ ನಟನೆಯ 'ರೈಡರ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. 'ರೈಡರ್' ಸಿನಿಮಾವು ಸೆಪ್ಟೆಂಬರ್ 28 ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಸಿನಿಮಾವು ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ. ಇದರ ಜೊತೆಗೆ ನಟ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ. ಈ ನಡುವೆ ಮಂಜು ಅಥರ್ವ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ. ಮಂಜು ಅಥರ್ವಗೆ ಇದು ಮೊದಲ ಸಿನಿಮಾ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.


Click it and Unblock the Notifications











