ನಿಖಿಲ್ ಕುಮಾರಸ್ವಾಮಿ ಮುಂದೆ ಮತ್ತೊಂದು ಸಿನಿಮಾ, ಮದುವೆಗೆ ಮುಂಚೆ ಬ್ಯುಸಿಯೋ ಬ್ಯುಸಿ
ಮದುವೆ ಮೂಡ್‌ನಲ್ಲಿರುವ ನಿಖಿಲ್ ಕುಮಾರಸ್ವಾಮಿ ಅವರು ಮದುವೆ ಬ್ಯುಸಿಯ ನಡುವೆಯೂ ಸಿನಿಮಾ ಕಾರ್ಯವನ್ನು ನಿಲ್ಲಿಸಿಲ್ಲ. ಕೊರೊನಾ ಭೀತಿಯಿಂದ ಚಿತ್ರೀಕರಣ ಎಲ್ಲೆಡೆ ರದ್ದಾಗಿದ್ದರೂ ಸಹ ಕತೆ ಕೇಳುವುದು, ಹೊಸ ಚಿತ್ರಗಳಿಗೆ ಸಹಿ ಹಾಕುವ ಕಾರ್ಯ ಮುಂದುವರೆಸಿದ್ದಾರೆ.
Recommended Video
ಹೌದು, ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆ ನಡೆಯಲಿದೆ. ಇಬ್ಬರ ಮದುವೆ ರಾಜ್ಯದ ಗಮನ ಸೆಳೆದಿದೆ. ಪ್ರಸ್ತುತ ಕೊರೊನಾ ಭೀತಿಯಿಂದಾಗಿ ಮದುವೆ ಕಾರ್ಯಗಳಿಗೆ ಅಲ್ಪ ಹಿನ್ನೆಡೆ ಆಗಿದೆಯಾದರೂ ಬಹುತೇಕ ಈ ಹಿಂದೆ ನಿಗಿದಿಯಾದ ದಿನದಂದೇ ಮದುವೆ ನೆರವೇರಲಿದೆ ಎನ್ನಲಾಗುತ್ತಿದೆ.
ಆದರೆ ಈ ನಡುವೆ ನಿಖಿಲ್ ಕುಮಾರಸ್ವಾಮಿ ಸಿನಿಮಾಗಳ ಅಭಿನಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾದ ನಂತರ ರಾಜಕೀಯಕ್ಕೆ ಇಳಿದಿದ್ದ ನಿಖಿಲ್ ಅಲ್ಲಿ ಸೋಲನುಭವಿಸಿದ್ದರು. ಆದರೆ ಚುನಾವಣೆ ನಂತರ ಮರಳಿ ಸಿನಿಮಾಕ್ಕೆ ಬಂದಿದ್ದು ಈಗಾಗಲೇ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಹೊಸ ಚಿತ್ರವೊಂದಕ್ಕೆ ಸಹಿ ಹಾಕಿರುವ ನಿಖಿಲ್
ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಿಖಿಲ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಕ್ರೀಡೆ ಸಂಬಂಧಿತ ಕತೆಯಾಗಿದೆ. ಆದರೆ ಈ ನಡುವೆ ಹೊಸ ಚಿತ್ರವೊಂದಕ್ಕೆ ನಿಖಿಲ್ ಸಹಿ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ-ಎ.ಪಿ.ಅರ್ಜುನ್ ಜೋಡಿ
ಲವ್ ಸ್ಟೋರಿಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಲ್ಪಡುವ ನಿರ್ದೇಶಕ ಎ.ಪಿ.ಅರ್ಜುನ್ ಅವರೊಟ್ಟಿಗೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮಾಡಲಿದ್ದಾರೆ. ಮಾತುಕತೆ ಅಂತಿಮವಾಗಿದ್ದು, ಮುಂದಿನ ವಾರ ಚಿತ್ರಕತೆ ಪೂಜೆ ನೆರವೇರುವ ಸಾಧ್ಯತೆ ಇದೆ.

ಪ್ರೇಮಕತೆ ಆಗಿರಲಿದೆ ಸಿನಿಮಾ
ಚಿತ್ರವನ್ನು ನಿಖಿಲ್ ಕುಮಾರಸ್ವಾಮಿ ಅವರ ಸ್ವಂತ ನಿರ್ಮಾಣ ಸಂಸ್ಥೆಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ನಾಯಕರು ಅವರೇ ಆಗಿರಲಿದ್ದಾರೆ. ಎ.ಪಿ.ಅರ್ಜುನ್ ನಿರ್ದೇಶನವಿರುವ ಕಾರಣ ಸಿನಿಮಾ ಅಪ್ಪಟ ಪ್ರೇಮ ಕತೆ ಆಗಿರಲಿದೆ ಎಂಬ ಬಗ್ಗೆ ಅನುಮಾನವಿಲ್ಲ. ಚಿತ್ರದ ಇತರ ತಾರಾಗಣ ಇನ್ನೂ ಅಂತಿಮವಾಗಿಲ್ಲ.

ಮದುವೆ ಬಳಿಕ ಸಿನಿಮಾ ಸೆಟ್ಟೇರುವ ಸಾಧ್ಯತೆ
ಎ.ಪಿ.ಅರ್ಜುನ್ ಅವರ 'ಕಿಸ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಈಗ 'ಅದ್ದೂರಿ ಲವರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ನಿಖಿಲ್ ಅವರ ಸಿನಿಮಾಕ್ಕೆ ಚಿತ್ರಕತೆ ಬರೆಯುತ್ತಿದ್ದಾರೆ. ನಿಖಿಲ್ ಮದುವೆ ನಂತರ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.


Click it and Unblock the Notifications











