ಮುನಿರತ್ನ ಜೊತೆಗಿನ ಸ್ನೇಹ ಸಂಬಂಧಕ್ಕೆ ಪೂರ್ಣವಿರಾಮವಿಟ್ಟ ನಿಖಿಲ್ ಕುಮಾರಸ್ವಾಮಿ
ನಿರ್ಮಾಪಕ, ಪ್ರಸ್ತುತ ಆರ್‌ಆರ್ ನಗರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಇಂದು (ಅಕ್ಟೋಬರ್ 27) ಮಾತನಾಡಿದ್ದಾರೆ.
Recommended Video

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಆರ್‌ಆರ್ ನಗರ ಉಪಚುನಾವಣೆ ಪ್ರಚಾರಕ್ಕೆಂದು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುನಿರತ್ನ ಜೊತೆಗಿನ ಸ್ನೇಹದ ಬಗ್ಗೆ ಸ್ಪಷ್ಟನೆ ನೀಡಿದರು.
ತುಸು ಬಿರುಸಾಗಿಯೇ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಅವರ ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ನೀಡಿದ್ದರು, ನನ್ನ ಕೆಲಸ ಮುಗಿಸಿ ನಾನು ಹೊರಬಂದೆ ಅಷ್ಟೆ, ಸಿನಿಮಾ ಮುಗಿದ ನಂತರವೇ ನನ್ನ ಅವರ ಸ್ನೇಹ ಮುಗಿದಿದೆ' ಎಂದರು.

ನಾನೊಬ್ಬ ನಟ, ಪಾತ್ರ ಮುಗಿಸಿ ಹೊರಬಂದೆ: ನಿಖಿಲ್
'ನಾನೊಬ್ಬ ನಟ ಅಷ್ಟೆ, ಅವರು ನೀಡಿದ ಪಾತ್ರ ಮುಗಿಸಿ ಹೊರಬಂದೆ, ಅವರಿಗೂ ನನಗೂ ಯಾವುದೇ ಸ್ನೇಹವಿಲ್ಲ, ಸಿನಿಮಾ ಮುಗಿದ ಕೂಡಲೇ ನಮ್ಮ ಸ್ನೇಹ ಮುಗಿದಿದೆ. ನಾನೀಗ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ' ಎಂದರು ನಿಖಿಲ್.

'ವೈಯಕ್ತಿಕ ಹಿತಾಸಕ್ತಿಗೆ ಕಾರ್ಯಕರ್ತರಿಗೆ ಮೋಸ ಮಾಡುವುದಿಲ್ಲ'
'ನನ್ನ ವೈಯಕ್ತಿಕ ಹಿತಾಸಕ್ತಿಗೆ ಪಕ್ಷದ ಕಾರ್ಯಕರ್ತರಿಗೆ ವಿಷ ನೀಡುವ ಕಾರ್ಯವನ್ನು ನಾನು ಮಾಡುವುದಿಲ್ಲ. ನನ್ನ ಹಾಗೂ ಮುನಿರತ್ನ ಗೆಳೆತನದ ಬಗ್ಗೆ ಹಲವು ವದಂತಿಗಳನ್ನು ಕ್ಷೇತ್ರದಲ್ಲಿ ಹಬ್ಬಿಸಲಾಗಿದೆ. ಆದರೆ ಆ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬಾರದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರ ಗೆಲುವಿಗೆ ಶ್ರಮವಹಿಸಬೇಕು' ಎಂದರು.

ಕಾಂಗ್ರೆಸ್ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಒಕ್ಕಲಿಗ ಜಾತಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವೇ ಈ ಹಿಂದೆ ಮುನಿರತ್ನಗೆ ಎರಡು ಭಾರಿ ಟಿಕೆಟ್ ನೀಡಿ ಗೆಲ್ಲಿಸಿದೆ. ಆಗ ಕಾಂಗ್ರೆಸ್ ನವರ ಜಾತಿ ಪ್ರೇಮ ಎಲ್ಲಿ ಹೋಗಿತ್ತು' ಎಂದು ಪ್ರಶ್ನಿಸಿದ್ದಾರೆ.

ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ: ನಿಖಿಲ್
'ಆರ್‌ಆರ್ ನಗರದಲ್ಲಿ ಜೆಡಿಎಸ್ ಗೆಲುವಿನ ರೇಸ್‌ನಲ್ಲಿ ಇಲ್ಲ ಎಂದುಕೊಂಡಿದ್ದಾರೆ, ಆದರೆ ಜೆಡಿಎಸ್ ಪರವಾಗಿ ತಳಮಟ್ಟದಲ್ಲಿ ತರಂಗಗಳು ಏಳುತ್ತಿವೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ, ನಮ್ಮ ಅಭ್ಯರ್ತಿ ಕೃಷ್ಣಮೂರ್ತಿ ಅವರ ತಂದೆ 25 ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ, ಸೋತು ಪಕ್ಷ ಬಿಡುವ ಅಭ್ಯರ್ಥಿಗಳಿಗಿಂತಲೂ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಗೆಲುವಿನ ವಿಶ್ವಾಸ ಹೆಚ್ಚಿಸಿದೆ' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.


Click it and Unblock the Notifications











