Exclusive: ವಿದೇಶದಿಂದ ಬಂದು ಸಿಹಿಸುದ್ದಿ ಕೊಟ್ಟ ನಿಖಿಲ್: ದೊಡ್ಡ ಬ್ಯಾನರ್‌ನಲ್ಲಿ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮುಂದಿನ ವಾರವೇ ಹೊಸ ಸಿನಿಮಾ ಶುರುವಾಗುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊಂಚ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಿಖಿಲ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದಾರೆ. ಬಹಳ ದಿನಗಳಿಂದ ಮಾತುಕತೆ ಹಂತದಲ್ಲಿದ್ದ ಚಿತ್ರಕ್ಕೆ ಕೊನೆಗೂ ಜೀವ ಸಿಗ್ತಿದೆ.
'ರೈಡರ್' ಬಳಿಕ ನಿಖಿಲ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಲಿಲ್ಲ. 'ಯಧುವೀರ್' ಹೆಸರಿನಲ್ಲಿ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ನಿಂತೇ ಹೋಯ್ತು. ಈ ವರ್ಷ ನಿಖಿಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆಯಾಗಿತ್ತು. ಆದರೆ ಚುನಾವಣೆ ಕಾರಣ ಆ ಸಿನಿಮಾ ಚಿತ್ರೀಕರಣ ಶುರುವಾಗಿರಲಿಲ್ಲ. ಈ ಚಿತ್ರವನ್ನು ಕೆ. ಪಿ ಶ್ರೀಕಾಂತ್ ಮತ್ತು ಲಹರಿ ಸಂಸ್ಥೆಯ ಜಿ. ಮನೋಹರನ್ ನಿರ್ಮಾಣ ಮಾಡಬೇಕಿದೆ. ಹೊಸ ನಿರ್ದೇಶಕ ಮನೋಹರ್ ಚಿತ್ರವನ್ನು ನಿರ್ದೇಶನ ಮಾಡಬೇಕಿದೆ. ಈ ಸಿನಿಮಾ ಶುರುವಾಗುವುದಕ್ಕೂ ಮುನ್ನ ನಿಖಿಲ್ ಒಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಸೈ ಎಂದಿದ್ದಾರೆ.

'ಜಾಗ್ವಾರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಿಖಿಲ್ ಬಳಿಕ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಮಿಂಚಿದರು. 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ಗಮನ ಸೆಳೆದರು. 2 ವರ್ಷದ ಹಿಂದೆ ಬಂದ 'ರೈಡರ್' ಸಿನಿಮಾ ಪ್ರೇಕ್ಷಕರ ಮನಗೆದ್ದರೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆ ಬಳಿಕ ಯಾವುದೇ ಸಿನಿಮಾದಲ್ಲಿ ನಿಖಿಲ್ ನಟಿಸಲಿಲ್ಲ. ವಿಧಾನಸಭೆ ಚುನಾವಣೆ ಬಳಿಕ ಫ್ಯಾಮಿಲಿ ಸಮೇತ ನಿಖಿಲ್ ವಿದೇಶ ಪ್ರವಾಸ ಕೈಗೊಂಡಿದ್ದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದ ನಿಖಿಲ್ ಕುಮಾರ್ ಈ ಬಾರಿ ರಾಮನಗರದ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಬಳಿಕ ಪಕ್ಷದ ಯುವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. "ಈ ಚುನಾವಣೆಯಲ್ಲಿ ಸೋಲೇ ಕೊನೆಯಲ್ಲ. ಸೋತಿದ್ದರೂ ಸಹ ಪಕ್ಷದಿಂದ ದೂರ ಉಳಿಯದೇ ಪಕ್ಷವನ್ನು ಬೆಳೆಸಲು ದುಡಿಯುತ್ತೇನೆ. ಪಕ್ಷ ಮರು ನಿರ್ಮಾಣ ಆಗಬೇಕು. ಅದಕ್ಕಾಗಿ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದರು.

ತಮಿಳಿನ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿಖಿಲ್ ಹೀರೊ ಆಗಿ ಸಿನಿಮಾವೊಂದು ನಿರ್ಮಾಣವಾಗಲಿದೆ. ಮುಂದಿನ ವಾರವೇ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಈ ಸಿನಿಮಾ ಮೂಲಕ ಲೈಕಾ ಸಂಸ್ಥೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಲೈಕಾ ಬ್ಯಾನರ್‌ನಲ್ಲಿ ನಿಖಿಲ್ ಹೀರೊ ಆಗಿ ಸಿನಿಮಾ ನಿರ್ಮಾಣದ ಚರ್ಚೆ ನಡೀತಿತ್ತು. ಇದೀಗ ಅದು ಅಂತಿಮವಾಗಿದ್ದು ಆಗಸ್ಟ್ 23ರಂದು ಸಿನಿಮಾ ಸೆಟ್ಟೇರಲಿದೆ.
ಬಹಳ ಅದ್ಧೂರಿಯಾಗಿ ನಿಖಿಲ್ 4ನೇ ಸಿನಿಮಾ ಶುರುವಾಗಲಿದೆ. ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಘಟಾನುಘಟಿ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ಸಿದ್ಧವಾಗಲಿದೆ. ಪರಭಾಷೆಯ ನಿರ್ದೇಶಕರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ.
ದಳಪತಿ ವಿಜಯ್ ನಟನೆಯ 'ಕತ್ತಿ' ಚಿತ್ರದ ಮೂಲಕ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿತ್ತು. ಬಳಿಕ 'ವಡಾ ಚೆನ್ನೈ', '2.O', 'ದರ್ಬಾರ್', 'ಪೊನ್ನಿಯಿನ್ ಸೆಲ್ವನ್' ಭಾಗ-1 ಮತ್ತು ಭಾಗ-2 ಹೀಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಿಸಿದೆ. ಸದ್ಯ 'ಇಂಡಿಯನ್- 2', 'ಚಂದ್ರಮುಖಿ- 2', 'ಲಾಲ್ ಸಲಾಂ' ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಗೆತ್ತಿಕೊಂಡಿದೆ. ಆ ಸಾಲಿಗೆ ನಿಖಿಲ್ ಕುಮಾರ್ ನಟನೆಯ ಸಿನಿಮಾ ಕೂಡ ಸೇರಿಕೊಳ್ತಿದೆ.
ಇನ್ನು ನಂದಕಿಶೋರ್ ನಿರ್ದೇಶನದಲ್ಲಿ ನಿಖಿಲ್ ಹೀರೊ ನಟಿಸೋ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಚಿತ್ರಕ್ಕೆ 'ಮಾನ್‌ಸ್ಟರ್' ಟೈಟಲ್ ಪರಿಶೀಲಿಸುತ್ತಿರುವುದಾಗಿ ಹೇಳಲಾಗಿತ್ತು. ಅದೇ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಾ ಎನ್ನುವ ಊಹಾಪೋಹ ಕೂಡ ಇದೆ. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











