'ರೈಡರ್'ಗೆ ಪೈರಸಿ ಕಾಟ: ನಿಖಿಲ್ ಕುಮಾರಸ್ವಾಮಿ ಬೇಸರ
ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾ ಬಿಡುಗಡೆ ಆಗಿ ಮೂರೇ ದಿನಕ್ಕೆ ಆಘಾತವೊಂದನ್ನು ಎದುರಿಸಿದೆ. ಸಿನಿಮಾ ರಾಜ್ಯದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ವೇಳೆಯಲ್ಲಿಯೇ ಸಿನಿಮಾದ ಪೈರಸಿ ಕಾಪಿ ಹೊರಬಂದಿದೆ.
ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದು, ನಿನ್ನೆ ಮೈಸೂರಿನ ಲಿಡೋ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಮಯ ಸಿನಿಮಾದ ಪೈರಸಿ ಕಾಪಿ ಹೊರಬಿದ್ದಿರುವ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
Recommended Video
''ನಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ತಾ ಇದೆ. ಆದರೆ ಇದೀಗ ಇಡೀ ತಂಡಕ್ಕೆ ದುಃಖ ಆಗುವ ಘಟನೆ ನಡೆದಿದೆ. ಇಂದು ಲಹರಿ ಸಂಸ್ಥೆಯ ವೇಣು ಅವರು ಕರೆ ಮಾಡಿ, 'ರೈಡರ್' ಸಿನಿಮಾದ ಪೈರಸಿ ಆಗಿದೆ, ತಮಿಳು ರಾಕರ್ಸ್ ವೆಬ್‌ಸೈಟ್‌ನಲ್ಲಿ ಸಿನಿಮಾ ಇದೆ ಎಂದರು. ತುಂಬ ಕಷ್ಟ ಪಟ್ಟು, ಎರಡು ವರ್ಷ ಶ್ರಮ ಹಾಕಿ 'ರೈಡರ್' ಸಿನಿಮಾ ಮಾಡಿದ್ದೇವೆ. ಸಿನಿಮಾದ ಒಬ್ಬ ನಿರ್ಮಾಪಕರಾದ ಸಂತೋಶ್ ಅವರು ಬಡ್ಡಿಗೆ ಹಣ ತಂದು ಸಿನಿಮಾದ ಮೇಲೆ ಹಾಕಿದ್ದಾರೆ'' ಎಂದರು ನಿಖಿಲ್.

''ಸ್ನೇಹಿತರು, ಬಂಧುಗಳ ಅಭಿಪ್ರಾಯ ಕೇಳಿ ಸಿನಿಮಾಕ್ಕೆ ಬನ್ನಿ''
''ಇದು ಬಹಳ ಕಷ್ಟದ ಸಮಯ. ಈ ಸಂದರ್ಭದಲ್ಲಿ ಒಂದು ಒಳ್ಳೆ ಸಿನಿಮಾ ಮಾಡುವುದು ಬಹಳ ಕಷ್ಟವಿದೆ. ನಾನು ಇಂದು ಕನ್ನಡಿಗರಲ್ಲಿ ಕೈ ಜೋಡಿಸಿ ಮನವಿ ಮಾಡ್ತೇನೆ, ಕನ್ನಡಿಗರು ಪೈರಸಿಗೆ ಬೆಂಬಲ ಕೊಡಬಾರದು, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ನಮ್ಮ ಸಿನಿಮಾ ಚೆನ್ನಾಗಿದೆ ಎಂದೇ ನಾವು ಹೇಳುತ್ತೇವೆ, ಆದರೆ ನೀವು 'ರೈಡರ್' ಸಿನಿಮಾ ವೀಕ್ಷಿಸಿರುವ ನಿಮ್ಮ ಸ್ನೇಹಿತರು, ಬಂಧುಗಳ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಬನ್ನಿ '' ಎಂದು ವಿಶ್ವಾಸದಿಂದ ನುಡಿದರು ನಿಖಿಲ್ ಕುಮಾರಸ್ವಾಮಿ.

ನಿರ್ಮಾಪಕರೊಂದಿಗೆ ಚರ್ಚಿಸಿ ಕ್ರಮ: ನಿಖಿಲ್
''ನಾವು ಪೈರಸಿಗೆ ಬಲಿ ಆಗ್ತಾ ಇದ್ದೀವಿ. ಒಟಿಟಿ, ಸ್ಯಾಟಲೈಟ್, ಡಿಜಿಟಲ್ ಆಗಮನದಿಂದ ಚಿತ್ರಮಂದಿರಕ್ಕೆ ಜನ ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಮ್ಮ 'ರೈಡರ್' ಸಿನಿಮಾಕ್ಕೆ ಜನ ಬರುತ್ತಿದ್ದಾರೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎಂಬುದನ್ನು ತೋರಿಸಿದ್ದಾರೆ. ಆದರೆ ಈ ಪೈರಸಿಯಿಂದ ನಮ್ಮ ಸಿನಿಮಾ ಬಲಿ ಆಗಬಾರದು. ನಾನು ಪ್ರಚಾರ ಕಾರ್ಯದಲ್ಲಿರುವ ಕಾರಣ ನಿರ್ಮಾಪಕರೊಟ್ಟಿಗೆ ಈ ಬಗ್ಗೆ ಮಾತನಾಡಲು ಆಗಿಲ್ಲ. ಇಂದು ರಾತ್ರಿ ನಿರ್ಮಾಪಕರ ಬಳಿ ಮಾತನಾಡಿ, ಪೈರಸಿ ವಿರುದ್ಧ ಕೈಗೊಳ್ಳಬೇಕಾದ ಕಾನೂನು ಕ್ರಮದ ಬಗ್ಗೆ ಚರ್ಚೆ ಮಾಡುತ್ತೇನೆ'' ಎಂದರು ನಿಖಿಲ್ ಕುಮಾರಸ್ವಾಮಿ.

ಪೈರಸಿ ಹಿಂದೆ ರಾಜಕೀಯ ಪಿತೂರಿ ಅಡಗಿದೆಯಾ?
''ಪೈರಸಿ ವಿರುದ್ಧ ನಾನೊಬ್ಬನೇ ಏನೂ ಮಾಡಲು ಆಗಲ್ಲ. ಚಿತ್ರರಂಗದ ಹಿರಿಯರು, ಸರ್ಕಾರ ಎಲ್ಲವೂ ಒಟ್ಟಾಗಿ ಪೈರಸಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದ ಎಲ್ಲರೂ ಒಟ್ಟಾಗಿ ಪೈರಸಿ ವಿರುದ್ಧ ಹೋರಾಡಲಿದ್ದಾರೆ ಎಂದರು. ಮುಂದುವರೆದು, ಸಿನಿಮಾದ ಪೈರಸಿ ಆಗಿರುವುದರ ಹಿಂದೆ ರಾಜಕೀಯ ಪಿತೂರಿ ಇರಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿ, ''ರಾಜಕೀಯ ಕಾರಣವಾ ಗೊತ್ತಿಲ್ಲ, ನಮಗೆ ಗೊತ್ತಿಲ್ಲದ ವಿಚಾರವಾಗಿ ಬೇರೆಯವರ ಮೇಲೆ ಆರೋಪ ಮಾಡಬಾರದು. ಪೈರಸಿ ಆಗಿದೆ, ಅದರ ವಿರುದ್ಧ ಕ್ರಮ ಕೈಗೊಳ್ಳಲು ಏನು ಮಾಡಬಹುದು ಎಂಬುದಷ್ಟೆ ನಮ್ಮ ಮುಂದಿರುವ ಯೋಚನೆ'' ಎಂದರು ನಿಖಿಲ್.

ಕೌಟುಂಬಿಕ ಪ್ರೇಕ್ಷಕರು ಬರುತ್ತಿದ್ದಾರೆ: ನಿಖಿಲ್
'ರೈಡರ್' ಸಿನಿಮಾ ಎಲ್ಲೆಡೆ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಿನೇ-ದಿನೇ ಕಲೆಕ್ಷನ್ ಹೆಚ್ಚಾಗುತ್ತಾ ಹೋಗುತ್ತಿದೆ. ಸಿನಿಮಾಕ್ಕೆ ಮಾಸ್ ಪ್ರೇಕ್ಷಕರ ಜೊತೆಗೆ ಕೌಟುಂಬಿಕ ಪ್ರೇಕ್ಷಕರು ಸಹ ಬರುತ್ತಿದ್ದಾರೆ. ಸತತ ಎರಡು ವರ್ಷ ಶ್ರಮ ಹಾಕಿ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನಮ್ಮ ಶ್ರಮಕ್ಕೆ ಕನ್ನಡಿಗರು ತಕ್ಕ ಪ್ರತಿಫಲ ನೀಡಲಿದ್ದಾರೆ ಎಂದರು. ಮೈಸೂರು, ಬೆಂಗಳೂರು, ತುಮಕೂರು ಇತರ ಜಿಲ್ಲೆಗಳಲ್ಲಿ ಪ್ರಚಾರ ಪ್ರವಾಸದಲ್ಲಿರುವ ನಿಖಿಲ್ ಕುಮಾರಸ್ವಾಮಿ, ನಿನ್ನೆ ರಾಮನಗರ, ಚನ್ನಪಟ್ಟಣ, ಮೈಸೂರು ಹಾಗೂ ಇತರ ಪಟ್ಟಣಗಳ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಶನಿವಾರದಂದು ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರಗಳಲ್ಲಿ ತಮ್ಮ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಿದರು.


Click it and Unblock the Notifications











