ಪೆನ್ ಡ್ರೈವ್ ಪ್ರಜ್ವಲ್ ? ಹಾಸನದ ಸಂಸದರಿಗೂ ನನಗೂ ಸಂಬಂಧ ಇಲ್ಲ ಎಂದ ನಿಖಿಲ್ ಕುಮಾರಸ್ವಾಮಿ..!
ರಾಜಕೀಯದಲ್ಲಿ ಯಾರು ಶಾಶ್ವತವಾಗಿ ಶತ್ರುತ್ವವನ್ನ ಮುಂದುವರೆಸಲ್ಲ. ಕೊನೆವರೆಗೆ ಯಾರು ಮಿತ್ರರಾಗಿಯೂ ಉಳಿಯಲ್ಲ. ಇಷ್ಟೇ ಯಾಕೆ ಇಲ್ಲಿ ಸಂಬಂಧ ಮತ್ತು ಕುಟುಂಬಕ್ಕೂ ಬೆಲೆ ಇಲ್ಲ. ಉದಾಹರಣೆಗೆ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರ್ ಅವರನ್ನೇ ತೆಗೆದುಕೊಳ್ಳಿ
ಹೌದು. ಪ್ರಜ್ವಲ್ ಮತ್ತು ನಿಖಿಲ್ .. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಸದಸ್ಯರು. ರಾಜಕೀಯದಲ್ಲಿ ಇಬ್ಬರು ಕೂಡ ಸಕ್ರಿಯರಾಗಿರುವವರು. ಇನ್ನೂ ಹೆಚ್ಚೇನಿಲ್ಲ.. ಎರಡೂವರೆ ವರ್ಷದ ಹಿಂದೆ ಜೆಡಿಎಸ್ ಪಕ್ಷ ಕಟ್ಟಲು ಮತ್ತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಒಂದಾಗಿದ್ದೇವೆ ಎಂದು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯ ಜೆಡಿಎಸ್ ಕಾರ್ಯಾಗಾರದಲ್ಲಿ ಖುದ್ದು ಪ್ರಜ್ವಲ್ ರೇವಣ್ಣ ಅವರೇ ಸ್ಪಷ್ಟಪಡಿಸಿದ್ದರು. ಇಷ್ಟೇ ಅಲ್ಲ ಅವತ್ತು ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ನಾವು ಒಂದೇ ಎಂದಿದ್ದರು.

ಆದರೆ ಈಗ ಪ್ರಜ್ವಲ್ ರೇವಣ್ಣ ಅವರಿಗೂ ಮತ್ತು ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಖಂಡತುಂಡವಾಗಿ ಮಾತನಾಡಿದರು ನಿಖಿಲ್ ಕುಮಾರ ಸ್ವಾಮಿ. ಹೌದು.. ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನಲಾದ ಪೆನ್ ಡ್ರೈವ್ ದೇಶದೆಲ್ಲೆಡೆ ಪ್ರಜ್ವಲಿಸುತ್ತಿರುವ ಹಿನ್ನೆಲೆ,ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ, ಹಾಗೂ ಅವರ ಸೋದರ ನಿಖಿಲ್ ಕುಮಾರಸ್ವಾಮಿ ಅವರ ಅಭಿಪ್ರಾಯ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿ ಇತ್ತು. ಉತ್ತರಕ್ಕಾಗಿಯೇ ಇವತ್ತು ಅನೇಕರು ಕಾಯ್ತಿದ್ದರು ಕೂಡ. ಹೀಗಾಗಿ ಭಾರೀ ಜನಾಭಿಪ್ರಾಯದ ಮೇರೆಗೆ ಉತ್ತರವನ್ನ ನೀಡಿರುವ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರ ಹೆಸರನ್ನ ಹೇಳಲು ಕೂಡ ಮೀನಾ ಮೇಷ ಎಣಿಸಿದರು.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಆರೋಗ್ಯವನ್ನು ವಿಚಾರಿಸಿದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಹಾಸನದ ವಿಚಾರಕ್ಕೂ ನನಗೂ ಸಂಬಂಧ ಇಲ್ಲ ಅಂದರು. ನಾನು ಹೆಚ್ಚು ಹಾಸನ ಜಿಲ್ಲೆಗೆ ಕಾಲಿಟ್ಟವನಲ್ಲ, ಹಾಸನಾಂಬೆ ದರ್ಶನಕ್ಕೆ ಹೋಗುತ್ತಿದ್ದೆ. ನನಗಾಗಲಿ, ಹಾಸನ ಸಂಸದರಿಗೆ ಹೆಚ್ಚಿನ ಸಂಪರ್ಕ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಅವರ ಹೆಸರು ಹೇಳಲು ಕೂಡ ನಿಖಿಲ್ ಕುಮಾರಸ್ವಾಮಿ ಹಿಂದೇಟು ಹಾಕಿದರು. ನಾನು ಅವರಿಗೆ ಯಾವುದೇ ಬುದ್ಧಿ ಅಥವಾ ಸಲಹೆಗಳನ್ನು ನೀಡುವಷ್ಟು ದೊಡ್ಡವನಲ್ಲ ಎಂದು ಕೂಡ ಹೇಳಿದರು ನಿಖಿಲ್.

ಇನ್ನೂ ನನಗೆ ಒಂದು ವಿಷಯಕ್ಕೆ ದುಃಖ ಆಗಿದೆ, ಆ ವಿಡಿಯೋಗಳನ್ನು ನೋಡಲು ನಾನು ಧೈರ್ಯ ಮಾಡಲಿಲ್ಲ, ನನ್ನ ಸ್ನೇಹಿತರು ಫೋನ್ ಮಾಡಿ ಹೇಳಿದರು. ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿದ್ದಾರೆ. ಆ ಹೆಣ್ಣು ಮಕ್ಕಳ ಮುಖ ಕಾಣುವ ರೀತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ರೀತಿ ವಿಡಿಯೋ ಬಿಡುಗಡೆ ಮಾಡಿರುವವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.
ನನಗೆ ನಾಲ್ಕು ದಿನಗಳಿಂದ ವೈರಲ್ ಫಿವರ್ ಆಗಿತ್ತು. ಹಾಗಾಗಿ, ಅಜ್ಜಿ-ತಾತಗೆ ಹುಷಾರಿಲ್ಲವೆಂದು ಪೋನ್ ಅಲ್ಲಿ ಮಾತನಾಡಿದ್ದೆ. ಈಗ ಬಂದು ಅವರ ಆರೋಗ್ಯ ವಿಚಾರಿಸಿದ್ದೇನೆ. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್ ಐಟಿ ರಚನೆ ಮಾಡಿದೆ. ತನಿಖೆ ನಡೀತಾ ಇದೆ ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ ಅದರ ಬಗ್ಗೆ ನಾನು ಮಾತನಾಡೋಕ್ಕೆ ಹೋಗಲ್ಲ ಎಂದರು.

ಈ ಪ್ರಕರಣವನ್ನು ರಾಜಕೀಯವಾಗಿ ತಪ್ಪು ದಾರಿಗೆ ಎಳೆಯಲಾಗುತ್ತಿದ್ದು, ರಾಜ್ಯದ ಜನಕ್ಕೆ ತಪ್ಪು ಸಂದೇಶ ಕೊಡುವ ಕೆಲಸ ಆಗುತ್ತಿದೆ ಎಂದ ನಿಖಿಲ್ ಕುಮಾರ್ ಸ್ವಾಮಿ ಎಚ್‌ಡಿ ದೇವೇಗೌಡರು ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರ ಬದುಕು ರಾಜ್ಯದ ಜನರಿಗೆ ಗೊತ್ತಿದೆ ಎಂದರು. ವಿಶೇಷವಾಗಿ ದೇವೇಗೌಡ ಅವರ ಜೀವನ ತೆರೆದ ಪುಸ್ತಕವಾಗಿದ್ದು, ಅಜ್ಜಿ ಚೆನ್ನಮ್ಮ ಜೊತೆಗೆ ನಮ್ಮ ತಾತ ಯಾವ ರೀತಿ ಬದುಕಿದ್ರು ಎನ್ನುವುದು ನಮಗೆ ಸ್ಫೂರ್ತಿಯಾಗಿದೆ. ದೇವೇಗೌಡರಿಗೆ 92 ವರ್ಷ ಆಗಿದ್ದು, ಈ ಘಟನೆಯಿಂದ ಸಹಜವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಒಬ್ಬರೇ ವಿಶ್ರಾಂತಿ ತೆಗೆದುಕೊಳ್ತಾ ಇದ್ದಾರೆ. ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದು ಹೇಳಿದರು.
ಒಟ್ನಲ್ಲಿ ಪ್ರಜ್ವಲ್ ರೇವಣ್ಣ ನಮ್ಮ ಕುಟುಂಬದವರಲ್ಲ ಅವರು ಬೇರೆ ವಾಸವಾಗಿದ್ದಾರೆ ಎಂದು ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದೀಗ ನಿಖಿಲ್ ಕುಮಾರ್ ಕೂಡ ನನಗೂ ಅವರಿಗೂ ಸಂಬಂಧ ಇಲ್ಲವೆಂದಿದ್ದಾರೆ. ಈ ಬಿರುಕು ಮೂಡಿದ ಸಂಬಂಧ ಮುಂದೆ ಸರಿ ಹೋಗುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











