ರೇವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ 'ಪ್ರೇಮ ಕವಿ'ಯಾದ ನಿಖಿಲ್.!
ಬಹುಶಃ ನಿಖಿಲ್ ಕುಮಾರ್ ಇಷ್ಟೊಂದು ರೊಮ್ಯಾಂಟಿಕ್ ಅಂತ ಯಾರಿಗೂ ಗೊತ್ತೇ ಇರಲಿಲ್ಲವೇನೋ.! ಸಿನಿಮಾದಲ್ಲಿ ಹೀರೋಯಿನ್ ಜೊತೆಗೆ ಡ್ಯುಯೆಟ್ ಹಾಡುವುದು ಬೇರೆ. ಆದ್ರೆ, ರಿಯಲ್ ಲೈಫ್ ನಲ್ಲಿ ಡೈಲಾಗ್ ಶೀಟ್ ಕೈಯಲ್ಲಿ ಇಲ್ಲದೆ, ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವುದು ಅಷ್ಟು ಸುಲಭ ಅಲ್ಲ.
ಅದರಲ್ಲೂ ರೇವತಿ ಮತ್ತು ನಿಖಿಲ್ ರದ್ದು ಅರೇಂಜ್ಡ್ ಮ್ಯಾರೇಜ್. ಹೀಗಾಗಿ, ಒಬ್ಬರನ್ನೊಬ್ಬರು ಈಗೀಗ ಅರ್ಥ ಮಾಡಿಕೊಳ್ಳುತ್ತಿರುವುದರಿಂದ, ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಧೈರ್ಯ ಬೇಕೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸಿನಲ್ಲಿ ಅಡಗಿರುವ ಪ್ರೀತಿಯನ್ನು ಪದಪುಂಜದಲ್ಲಿ ಕಟ್ಟಿಕೊಡಲು ಕಾವ್ಯಾತ್ಮಕ ಶಕ್ತಿ ಇರಬೇಕು. ಆ ಶಕ್ತಿ-ಯುಕ್ತಿ ನಿಖಿಲ್ ಗೆ ಇದೆ.
ನಿಖಿಲ್ ಒಳಗಿರುವ ಪ್ರೇಮ ಕವಿ ಇದೀಗ ಹೊರಗೆ ಬಂದಿದ್ದಾನೆ. ಅದಕ್ಕೆ ಸಾಕ್ಷಿ ರೇವತಿ ಬಗ್ಗೆ ನಿಖಿಲ್ ಬರೆಯುತ್ತಿರುವ ಸಾಲುಗಳು...

ಕ್ಯಾಮರಾ ಕಣ್ಣುಗಳು ಸುಳ್ಳು ಹೇಳುವುದಿಲ್ಲ...
''ಓ ಮೈ ಗಾಡ್... ಪ್ರತಿ ಬಾರಿ ನೀನು ನನ್ನನ್ನು ನೋಡಿದಾಗ.. ನಾನು ಸೋತು ಹೋಗುತ್ತೇನೆ. ನನ್ನ ಎದೆ ಬಡಿತ ಒಂದು ಕ್ಷಣ ನಿಲ್ಲುತ್ತದೆ. ಪ್ರಿಯೇ.. ನೀನು ನನಗೆ ಸಿಕ್ಕಿರುವ ಆಶೀರ್ವಾದ. ಕ್ಯಾಮರಾ ಕಣ್ಣುಗಳು ಸುಳ್ಳು ಹೇಳುವುದಿಲ್ಲ'' ಎಂದು ಬರೆದು ರೇವತಿ ಜೊತೆಗಿನ ಫೋಟೋವನ್ನು ನಿಖಿಲ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಓ ನನ್ನ ಯುವರಾಣಿ...
''ನನ್ನ ಯುವರಾಣಿ.. ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದ ಹಾಗೆ ಸೌಂದರ್ಯ ಮಾಸಬಹುದು. ಆದ್ರೆ, ಒಳ್ಳೆಯ ಗುಣ ಯಾವಾಗಲೂ ನಮ್ಮ ಜೊತೆ ಇರುತ್ತದೆ. ನಿನ್ನ ವ್ಯಕ್ತಿತ್ವವನ್ನು ನಾನು ಇಷ್ಟ ಪಡುತ್ತೇನೆ'' ಎಂದು ಈ ಹಿಂದೆ ನಿಖಿಲ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು.

ಪ್ರತಿ ಕ್ಷಣವೂ ಅಮೂಲ್ಯ
''ನಿನ್ನ ಜೊತೆ ನಾನು ಕಳೆಯುತ್ತಿರುವ ಪ್ರತಿ ಕ್ಷಣವೂ ಅಮೂಲ್ಯ. ಸಾಯುವ ಕೊನೆ ಘಳಿಗೆ ವರೆಗೂ ನಿನ್ನ ಕೈ ಹಿಡಿದಿರಬೇಕು ಎಂಬುದು ನನ್ನ ಇಚ್ಛೆ. ಸಾವಷ್ಟೇ ನಮ್ಮನ್ನ ಬೇರೆ ಮಾಡಬೇಕು. ಮುಂದಿನ ಜನ್ಮ ಅನ್ನೋದು ಇದ್ದರೆ, ನೀನೇ ನನ್ನ ಸಂಗಾತಿ ಆಗಬೇಕು'' ಅಂತ ರೇವತಿ ಬಗ್ಗೆ ರೊಮ್ಯಾಂಟಿಕ್ ಫೀಲ್ ನಲ್ಲಿ ನಿಖಿಲ್ ಕುಮಾರ್ ಬರೆದುಕೊಂಡಿದ್ದರು.

ಮದುವೆ ಯಾವಾಗ.?
ಏಪ್ರಿಲ್ 17 ರಂದು ಶುಕ್ರವಾರ ಬೆಳಗ್ಗೆ 9.15 ರಿಂದ 9.40 ರ ಶುಭ ಲಗ್ನದಲ್ಲಿ ನಿಖಿಲ್-ರೇವತಿ ಮದುವೆ ನಡೆಯಲಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಹತ್ತಿರ ಸಪ್ತಪದಿ ಮಂಟಪದಲ್ಲಿ ನಿಖಿಲ್-ರೇವತಿ ಕಲ್ಯಾಣ ಜರುಗಲಿದೆ. ಮದುವೆಯ ತಯಾರಿಯಲ್ಲಿ ಇಬ್ಬರ ಕುಟುಂಬಸ್ಥರು ತೊಡಗಿದ್ದಾರೆ.


Click it and Unblock the Notifications











