ಇಂದು ಬಿಡುಗಡೆ ಆಗುತ್ತಿವೆ ಒಂಬತ್ತು ಕನ್ನಡ ಸಿನಿಮಾಗಳು! ಯಾವುದು? ಎಲ್ಲಿ?
ಕೊರೊನಾದಿಂದ ಧೂಳು ಕಟ್ಟಿಕೊಂಡಿದ್ದ ಚಿತ್ರಮಂದಿರಗಳ ಪರದೆಗಳ ಮೇಲೆ ಮತ್ತೆ ಬೆಳಕು ಮೂಡುತ್ತಿದೆ. ಕೊರೊನಾ ಸಂಕಟ ತುಸು ಕಡಿಮೆ ಆಗುತ್ತಿದ್ದಂತೆ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಕನ್ನಡದಲ್ಲಿ ಕಳೆದೆರಡು ವಾರಗಳಿಂದ ಹಲವು ಸಿನಿಮಾಗಳು ಸಾಲಾಗಿ ಬಿಡುಗಡೆ ಆಗುತ್ತಿವೆ. ಕಳೆದ ವಾರ ಬರೋಬ್ಬರಿ ಆರು ಕನ್ನಡ ಸಿನಿಮಾಗಳು ಬಿಡುಗಡೆ ಆಗಿದ್ದವು. ಅವುಗಳಲ್ಲಿ 'ಲವ್ ಮಾಕ್ಟೆಲ್ 2' ಸಿನಿಮಾ ಒಂದೇ ವಾರಕ್ಕೆ ಹಿಟ್ ಎನಿಸಿಕೊಂಡರೆ, ಅಚ್ಯುತ್ ಕುಮಾರ್ ನಟನೆಯ 'ಫೋರ್ ವಾಲ್ಸ್' ಸಿನಿಮಾ ಗಮನ ಸೆಳೆಯಲು ಯಶಸ್ವಿಯಾಗಿತ್ತು.
ಇಂದು ಒಟ್ಟು ಒಂಬತ್ತು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಇಂದು ಸಹ ಗಮನ ಸೆಳೆಯಬಲ್ಲ, ಹಿಟ್ ಎನಿಸಿಕೊಳ್ಳಲು ಅರ್ಹತೆಯುಳ್ಳ ಕೆಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಕನ್ನಡ ಸಿನಿ ಪ್ರೇಕ್ಷಕರ ಪ್ರೀತಿ, ಕೃಪಾ ಕಟಾಕ್ಷ ದೊರೆತರೆ ಸಿನಿಮಾಗಳು ಹಿಟ್ ಆಗುವುದು ಪಕ್ಕಾ. ಇಂದು ತೆರೆಗೆ ಬರುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿ ಇಂತಿದೆ...

'ಬೈ ಟು ಲವ್'
ಈ ವಾರದಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪೈಕಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಬೈ ಟು ಲವ್'. ಸಿನಿಮಾದಲ್ಲಿ ಧನ್ವೀರ್ ಗೌಡ ನಾಯಕ, ಶ್ರೀಲೀಲ ನಾಯಕಿ. ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ ಇನ್ನೂ ಕೆಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾವು ಪ್ರೇಮ, ಕುಟುಂಬದ ಕತೆಯನ್ನು ಹೊಂದಿದೆ. ಗಾಂಧಿನಗರದ ಅನುಪಮಾ ಸೇರಿದಂತೆ ಬೆಂಗಳೂರು ನಗರದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಗಮನ ಸೆಳೆಯುತ್ತಿದೆ 'ಗಿಲ್ಕಿ' ಸಿನಿಮಾ
ಸುಂದರ ಟ್ರೇಲರ್‌ನಿಂದ ಬಹುವಾಗಿ ಗಮನ ಸೆಳೆದಿದ್ದ 'ಗಿಲ್ಕಿ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಬುದ್ಧಿಮಾಂದ್ಯ ಗಿಲ್ಕಿ, ದಿವ್ಯಾಂಗೆ ನ್ಯಾನ್ಸಿ ಹಾಗೂ ಭಿನ್ನ ವ್ಯಕ್ತಿತ್ವದ ಷೇಕ್ಸ್‌ಪಿಯರ್ ಎಂಬ ಮೂವರ ನಡುವೆ ನಡೆವ ಕತೆಯನ್ನು 'ಗಿಲ್ಕಿ' ಸಿನಿಮಾ ಹೊಂದಿದೆ. 'ಕೆಜಿಎಫ್' ಸಿನಿಮಾದಲ್ಲಿ ದಯಾ ಪಾತ್ರದಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಈ ಸಿನಿಮಾದಲ್ಲಿ ನಾಯಕ ಗಿಲ್ಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಅವರ ನಟನೆ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ನಾಯಕಿ ನ್ಯಾನ್ಸಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ. -ಅವರ ನಟನೆಯೂ ಟ್ರೇಲರ್‌ನಲ್ಲಿ ಬಹುವಾಗಿ ಗಮನ ಸೆಳೆಯುತ್ತಿದೆ.

'ಮೆಜೆಸ್ಟಿಕ್' ಮರು ಬಿಡುಗಡೆ
ದರ್ಶನ್, ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದ ಸಿನಿಮಾ 'ಮೆಜೆಸ್ಟಿಕ್' ಇಂದು ಮರು ಬಿಡುಗಡೆ ಆಗಿದೆ. ಸಿನಿಮಾವು ಬಿಡುಗಡೆ ಆಗಿ 20 ವರ್ಷ ಕಳೆದ ಖುಷಿಯ ಸಂಭ್ರಮಕ್ಕೆಂದು ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಸಿನಿಮಾವನ್ನು ಪಿಎನ್ ಸತ್ಯ ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆಗೆ ರೇಖ ನಾಯಕಿಯಾಗಿ ನಟಿಸಿದ್ದರು. 20 ವರ್ಷದ ಹಿಂದೆ ಸಿನಿಮಾ ಬಹುದೊಡ್ಡ ಹಿಟ್ ಆಗಿತ್ತು.

ವಿನೋದ್ ಪ್ರಭಾಕರ್ ನಟನೆಯ 'ವರದ'
ಆಕ್ಷನ್ ಹೀರೋ ವಿನೋದ್ ಪ್ರಭಾಕರ್ ನಟಿಸಿರುವ 'ವರದ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಅಪ್ಪು ಚಿತ್ರವನ್ನು ಟ್ರೇಲರ್‌ನಲ್ಲಿ ಹಾಕಿಲ್ಲವಾದ್ದರಿಂದ ತಮ್ಮದೇ ಸಿನಿಮಾದ ಟ್ರೇಲರ್ ಬಗ್ಗೆ ವಿನೋದ್ ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದರು. ಇಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಎಚ್‌ಸಿ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಅಮಿತಾ ರಂಗನಾಥ್ ನಾಯಕಿಯಾಗಿದ್ದಾರೆ. ಚರಣ್ ರಾಜ್ ಸಹ ಸಿನಿಮಾದಲ್ಲಿದ್ದಾರೆ. ಗಾಂಧಿ ನಗರದ ಅಭಿನಯ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಥ್ರಿಲ್ಲರ್ ಸಿನಿಮಾ 'ಬಹುಕೃತ ವೇಷಂ'
ಕಿರುತೆರೆಯಿಂದ ಖ್ಯಾತಿಗಳಿಸಿರುವ ವೈಷ್ಣವಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಬಹುಕೃತ ವೇಷಂ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಈ ಹಿಂದೆ 'ಗೌಡ್ರು ಸೈಕಲ್' ಹೆಸರಿನ ಸಿನಿಮಾ ಮಾಡಿದ್ದ ತಂಡವೇ ಈಗ ಈ ಸಿನಿಮಾ ನಿರ್ಮಾಣ ಮಾಡಿದೆ. ಸಿನಿಮಾವನ್ನು ಪ್ರಶಾಂತ್ ಯರಂಪಳ್ಳಿ ನಿರ್ದೇಶನ ಮಾಡಿದ್ದಾರೆ. ವೈಷ್ಣವಿ ಗೌಡ ಜೊತೆಗೆ ಶ್ರೀಕಾಂತ್ ಹಾಗೂ ಕರಣ್ ಆರ್ಯ ನಟಿಸಿದ್ದಾರೆ. ಸಿನಿಮಾವು ಥ್ರಿಲ್ಲರ್ ಕತೆಯನ್ನು ಹೊಂದಿದೆ. ಸಿನಿಮಾದ ಟ್ರೇಲರ್ ಸಹ ಗಮನ ಸೆಳೆಯುತ್ತಿದೆ.

ಕ್ಯಾಮೆರಾ ಕುರಿತಾದ ಕತೆಯುಳ್ಳ 'ಭಾವಚಿತ್ರ'
ಕ್ಯಾಮೆರಾ ಕುರಿತಾದ ಕತೆಯುಳ್ಳ 'ಭಾವಚಿತ್ರ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಸಾಮಾನ್ಯ ಕಣ್ಣಿಗೆ ಕಾಣದ ಸಂಗತಿಗಳು ಕ್ಯಾಮೆರಾದಲ್ಲಿ ಸೆರೆಯಾಗುವ ಅದರಿಂದ ಹುಟ್ಟಿಕೊಳ್ಳುವ ಸಮಸ್ಯೆ, ಕುತೂಹಲ ಇತರೆ ತಿರುವುಗಳ ಕತೆಯನ್ನು 'ಭಾವಚಿತ್ರ' ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿ ಗಾನವಿ ಲಕ್ಷ್ಮಣ್ ನಾಯಕಿ, ಚಕ್ರವರ್ತಿ ರೆಡ್ಡಿ ನಾಯಕ, ಹಿರಿಯ ನಟ ಅವಿನಾಶ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಗಿರೀಶ್ ಕುಮಾರ್ ಬಿ.

ಗಣೇಶ್ ಸಹೋದರನ 'ಮಹಾ ರೌದ್ರಂ'
ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಕೃಷ್ಣ ಮಹೇಶ್ ನಾಯಕನಾಗಿ ನಟಿಸಿರುವ ಸಿನಿಮಾ 'ಮಹಾ ರೌದ್ರಂ' ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾವು ರೌಡಿಸಂ ಕತೆಯನ್ನು ಹೊಂದಿದ್ದು ಸಿನಿಮಾದಲ್ಲಿ ಆದ್ಯ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ 'ನಮಕ್ ಹರಾಮ್' ಹೆಸರಿನ ಸಿನಿಮಾದಲ್ಲಿ ಗಣೇಶ್ ನಟಿಸಿದ್ದರು. ಈಗ 'ಮಹಾ ರೌದ್ರಂ' ಮೂಲಕ ಮತ್ತೆ ಚಿತ್ರರಂಗದತ್ತ ಬಂದಿದ್ದಾರೆ. ಸಿನಿಮಾವನ್ನು ಆರ್‌ಎಂ ಸುನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶೋಭರಾಜ್, ಸಾಧುಕೋಕಿಲ ಅವರುಗಳು ನಟಿಸಿದ್ದಾರೆ.

'ಗರುಡಾಕ್ಷ', 'ಭೋಜರಾಜ ಎಂಬಿಬಿಎಸ್', 'ದೋಖಾ ದೋಸ್ತಿ'
'ಗರುಡಾಕ್ಷ' ಹೆಸರಿನ ಹೊಸಬರ ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಯಾದು, ರಕ್ಷಾ ಗೌಡ, ಶ್ರೀವತ್ಸ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದು, ಶ್ರೀಧರ್ ವೈಷ್ಣವ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಭೋಜರಾಜ್ ಎಂಬಿಬಿಎಸ್ ಹೆಸರಿನ ತುಳು ಸಿನಿಮಾ ಹಾಗೂ 'ಧೋಖಾ ದೋಸ್ತಿ' ಹೆಸರಿನ ಉತ್ತರ ಕರ್ನಾಟಕದ ಸಿನಿಮಾಗಳು ಆಯಾ ಭಾಗದಲ್ಲಿ ಬಿಡುಗಡೆ ಆಗುತ್ತಿವೆ.


Click it and Unblock the Notifications











