ಒಂದೇ ದಿನ ಒಂಬತ್ತು ಸಿನಿಮಾ ಬಿಡುಗಡೆ: ನಿಮ್ಮ ಆಯ್ಕೆ ಯಾವುದು?
ಕೊರೊನಾ ಮೂರನೇ ಅಲೆ ಬಳಿಕ ಚಿತ್ರರಂಗ ಪುಟಿದೆದ್ದಿದೆ. ಪ್ರತಿ ಶುಕ್ರವಾರ ಚಿತ್ರಮಂದಿರಗಳಲ್ಲಿ ಹಬ್ಬವೇ ನಡೆಯುತ್ತಿದೆ. ಪ್ರತಿ ವಾರ ಸಾಲು-ಸಾಲಾಗಿ ಹಲವು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.
ಕಳೆದ ಶುಕ್ರವಾರ ಆರು ಕನ್ನಡ ಸಿನಿಮಾಗಳು ಬಿಡುಗಡೆ ಆಗಿದ್ದವು, ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದವು. ಪರಭಾಷೆಯ ಬಹುನಿರೀಕ್ಷಿತ ಸಿನಿಮಾಗಳಾದ 'ಭೀಮ್ಲಾ ನಾಯಕ್' ಹಾಗೂ 'ವಲಿಮೈ' ಸಹ ಬಿಡುಗಡೆ ಆಗಿದ್ದವು.
ಕಳೆದ ವಾರದ ದಾಖಲೆಯನ್ನು ಮುರಿದು ಈ ಶುಕ್ರವಾರ ಬರೋಬ್ಬರಿ ಒಂಬತ್ತು ಸಿನಿಮಾಗಳು ತೆರೆಗೆ ಬಂದಿವೆ. ಒಂಬತ್ತು ಸಿನಿಮಾಗಳಲ್ಲಿ ಬಹುತೇಕ ಹೊಸಬರ ಸಿನಿಮಾಗಳೇ ಇರುವುದು ಮತ್ತೊಂದು ಖಷಿಯ ವಿಚಾರ. ಸಿನಿಮಾಗಳ ಪಟ್ಟಿ, ಇತರೆ ಮಾಹಿತಿಗಳು ಇಲ್ಲಿವೆ...

'ಯೆಲ್ಲೋ ಬೋರ್ಡ್' ಸಿನಿಮಾ ಬಿಡುಗಡೆ
ಯುವ ನಟ ಪ್ರದೀಪ್ ಬೋಗಾದಿ ನಟನೆಯ 'ಯೆಲ್ಲೋ ಬೋರ್ಡ್' ಈ ವಾರ ತೆರೆಗೆ ಬಂದಿದೆ. ಸಿನಿಮಾವು ಕಾರ್ಮಿಕರ ಕಷ್ಟ, ಘನತೆ, ಅವರ ಮೇಲಾಗುತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಲಿದೆ. ಟ್ಯಾಕ್ಸಿ, ಆಟೊ, ಲಾರಿ ಇತರೆ ಯೆಲ್ಲೋ ಬೋರ್ಡ್ ವಾಹನಗಳು ಹಾಗೂ ದೇಶದ ಆರ್ಥಿಕತೆಗಿರುವ ಸಂಬಂಧ ಇತರೆ ವಿಷಯಗಳ ಮೇಲೆ ಸಿನಿಮಾ ಬೆಳಕು ಚೆಲ್ಲಿದೆ. ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಾಡೊಂದನ್ನು ಹಾಡಿದ್ದಾರೆ.

ನೈಜ ಘಟನೆ ಆಧರಿತ 'ಕನ್ನೇರಿ'
ನೈಜ ಘಟನೆಯನ್ನು ಆಧರಿಸಿದ ಸಿನಿಮಾ 'ಕನ್ನೇರಿ' ಇದೇ ದಿನ ಬಿಡುಗಡೆ ಆಗಿದೆ. ಈ ಹಿಂದೆ 'ಮೂಕಹಕ್ಕಿ' ಸಿನಿಮಾ ನಿರ್ದೇಶನ ಮಾಡಿದ್ದ ನೀನಾಸಂ ಮಂಜು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೇನು ಕುರುಬರ ಹುಡುಗಿ ಮುತ್ತಮ್ಮ ತನ್ನ ಅಜ್ಜಿಯ ಚಿಕಿತ್ಸೆಗೆ ಹಣ ಹೊಂದಿಸಲು ಬೆಂಗಳೂರಿಗೆ ಹೋದಾಗ ಆಕೆ ಅನುಭವಿಸುವ ಕಷ್ಟ, ಎದುರಿಸುವ ಸವಾಲುಗಳ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಸುಧಾರಾಣಿ, ತಬಲಾ ನಾಣಿ ಇತರ ಕಲಾವಿದರು ಇದ್ದಾರೆ. ಚಿತ್ರದ ನಾಯಕಿ ಅರ್ಚನಾ ಮಧುಸೂದನ್.

'ಮೈಸೂರು' ಹೆಸರಿನ ಕನ್ನಡ ಸಿನಿಮಾ
'ಮೈಸೂರು' ಹೆಸರಿನ ಕನ್ನಡ ಸಿನಿಮಾ ಇಂದು ಬಿಡುಗಡೆ ಆಗಿದೆ. ಕಿರುತೆರೆಯಲ್ಲಿ ಹಲವು ವರ್ಷ ಕೆಲಸ ಮಾಡಿರುವ ವಾಸುದೇವ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣವೂ ಅವರದ್ದೆ. ಮೈಸೂರಿನ ನಾಯಕಿಗೆ ಪರರಾಜ್ಯದ ನಾಯಕ ಜೊತೆಯಾಗುತ್ತಾನೆ. ಆದರೆ ಅನಿವಾರ್ಯ ಕಾರಣಗಳಿಂದ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗಿ ಮರಣದಂಡನೆ ಆಗುತ್ತದೆ. ಆದರೆ ಪ್ರಕರಣದ ಮರು ತನಿಖೆ ಆದಾಗ ಹಲವು ಕುತೂಹಲಕಾರಿ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ಸಿನಿಮಾದ ಕತೆ. ಸಂವಿತ್ ಹಾಗೂ ಪೂಜಾ ಎಂಬ ಹೊಸಬರು ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ದಾನಿಶ್ ಸೇಠ್‌ರ 'ಸೋಲ್ಡ್' ಸಿನಿಮಾ
ತಮ್ಮ ಬಹುಮುಖ ಪ್ರತಿಭೆಯಿಂದ ಈಗಾಗಲೇ ಜನಪ್ರಿಯತೆ ಗಳಿಸಿರುವ ದಾನಿಶ್ ಸೇಠ್‌ರ ಹೊಸ ಸಿನಿಮಾ 'ಸೋಲ್ಡ್' ಇಂದು ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ದಾನಿಶ್‌ರ ಎರಡನೇ ಸಿನಿಮಾ ಇದು. ಸಿನಿಮಾವು ಕ್ರೈಂ ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದಾನಿಶ್ ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿ. ಕಾವ್ಯಾ ಶೆಟ್ಟಿ ಸಿನಿಮಾದ ನಾಯಕಿ. ಪ್ರೇರಣಾ ಅಗರ್ವಾಲ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ದೀಪಮ್ ಕೊಹ್ಲಿ.

ಒಂದೇ ದಿನದ ಕತೆ 'ಅಘೋರ'
ಒಂದು ದಿನದಲ್ಲಿ ನಡೆಯುವ ಕತೆಯನ್ನು 'ಅಘೋರ' ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟ ಅವಿನಾಶ್ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಥ್ರಿಲ್ಲರ್ ಅಂಶಗಳನ್ನು ಹೊಂದಿದ್ದು, ಸಿನಿಮಾದಲ್ಲಿ ಐದು ಪ್ರಮುಖ ಪಾತ್ರಗಳು ಇರಲಿವೆಯಂತೆ. ಪ್ರೇಮ, ವಿಜ್ಞಾನ, ಅಧ್ಯಾತ್ಮ, ಹಾರರ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ. ಪ್ರಮೋದ್ ರಾಜ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

'ಬೆಟ್ಟದ ದಾರಿ' ಮಕ್ಕಳ ಸಿನಿಮಾ
ಬಹು ಸಮಯಗಳ ನಂತರ ಮಕ್ಕಳ ಸಿನಿಮಾ ಒಂದು ಇಂದು ತೆರೆಗೆ ಬಂದಿದೆ. ಅದುವೇ 'ಬೆಟ್ಟದ ದಾರಿ'. ಬರಪೀಡಿತ ಊರೊಂದರಲ್ಲಿ ನೀರು ಸಿಗದೆ ಜನ ಪರದಾಡುತ್ತಿರುವಾಗ ಆ ಊರಿನ ಮಕ್ಕಳು ಚಾಣಾಕ್ಷತನದಿಂದ ಊರಿಗೆ ನೀರು ಬರುವಂತೆ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಮಾ ಚಂದ್ರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಚಂದ್ರಕಲಾ ಅವರದ್ದು. ಸಿನಿಮಾದಲ್ಲಿ ಹಲವು ಮಕ್ಕಳು ನಟಿಸಿದ್ದಾರೆ. ಜೊತೆಗೆ ಹಿರಿಯ ನಟರಾದ ರಮೇಶ್ ಭಟ್, ಬ್ಯಾಂಕ್ ಜನಾರ್ಧನ್ ಇನ್ನಿತರರು ಇದ್ದಾರೆ.

ಪ್ರೀತಿ, ದ್ವೇಷದ ಕತೆ 'ಮೋಕ್ಷ'
ಪ್ರೀತಿ, ಸೇಡಿನ ಕತೆ ಹೊಂದಿರುವ 'ಮೋಕ್ಷ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಹುವಾಗಿ ಗಮನ ಸೆಳೆದಿದೆ. ಮುಖವಾಡ ಧರಿಸಿದ ಸೈಕೋಪಾತ್ ಕಿಲ್ಲರ್ ಹಾಗೂ ನಾಯಕನ ನಡುವೆ ನಡೆವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಮರ್ಥ ನಾಯಕ್ ಬರೆದು ನಿರ್ದೇಶನ ಮಾಡಿರುವ ಥ್ರಿಲ್ಲರ್ ಮೋಕ್ಷ ಚಿತ್ರದಲ್ಲಿ ಮೋಹನ್ ಧನರಾಜ್, ಆರಾಧ್ಯ ಲಕ್ಷಣ್, ತಾರಕ್ ಪೊನ್ನಪ್ಪ, ಭೂಮಿ ಅಗ್ನಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಿಶನ್ ಮೋಹನ್ ಮತ್ತು ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಎಸ್.ಜಿ.ಎನ್ ಎಂರ್ಟೇನಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ಹೊಸಬರ ಪ್ರಯತ್ನ 'ಲೀಸ'
ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮಾ 'ಲೀಸ' ಇಂದು ತೆರೆಗೆ ಬಂದಿದೆ. ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಕಲ್ಯಾಣ ಕರ್ನಾಟಕ ಭಾಗದ ಜನರೇ ಸೇರಿ ಮಾಡಿರುವುದು ವಿಶೇಷ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಹೇಗೆ ಹದಿಹರೆಯದವರು ಭ್ರಮಾ ಲೋಕಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ ಹಾಗೂ ಅದರಿಂದ ಹೊರಗೆ ಬರುವ ದಾರಿಗಳೇನು ಇತ್ಯಾದಿಗಳನ್ನು ಈ ಸಿನಿಮಾ ಚರ್ಚಿಸಲಿದೆ. ಸಿನಿಮಾದ ನಾಯಕ ಅವಿನಾಶ ಜನಗಟ್ಟಿ. ಸಿನಿಮಾದ ನಿರ್ದೇಶನ ಮುತ್ತು ಎಂಬುವರು ಮಾಡಿದ್ದಾರೆ.ಇದರ ಜೊತೆಗೆ 'ಸಮಶಾಂತಿ' ಹೆಸರಿನ ಕನ್ನಡ ಸಿನಿಮಾ ಸಹ ಬಿಡುಗಡೆ ಅಗುತ್ತಿದೆ.


Click it and Unblock the Notifications











