»   » ಈ ಪ್ರತಿಭಾವಂತನ ಹೆಸರೇ ನಿರ್ಮಲ್‌ ಪಾಂಡೆ.

ಈ ಪ್ರತಿಭಾವಂತನ ಹೆಸರೇ ನಿರ್ಮಲ್‌ ಪಾಂಡೆ.

Posted By: Super
Subscribe to Filmibeat Kannada

ನಾಟಕ, ಮಾಡೆಲಿಂಗ್‌, ಸಿನಿಮಾ ಹೀಗೆ ಹಂತಹಂತವಾಗಿ ಮೇಲೇರಿ ತನ್ನದೇ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವ ಬ್ಯಾಂಡಿಟ್‌ ಹುಡುಗ ನಿರ್ಮಲ್‌ ಪಾಂಡೆ ಕನ್ನಡ ಚಿತ್ರಕ್ಕೆ ಕಾಲಿಡಲಿದ್ದಾರೆ.

ಬ್ಯಾಂಡಿಟ್‌ ಕ್ವೀನ್‌ ಸಿನಿಮಾದಲ್ಲಿ ಸೀಮಾ ಬಿಸ್ವಾಸ್‌ ಪ್ರಿಯಕರನಾಗಿ ಜನಮನ ಸೂರೆಗೊಂಡ ನಾಯಕ ಈಗ ಬಾಲಿವುಡ್‌ನ ಖಳನಾಯಕ. ಸುಂದರ್‌ ಕೃಷ್ಣ ಅರಸ್‌ ಕಂಠ ಹೇಗೆ ಗೆದ್ದಿತ್ತೋ, ಅದೇ ರೀತಿ ಪಾಂಡೆ ಖದರು ಮೆರೆದಿದ್ದು. ಖಡಕ್ಕು ಕಂಠವೇ ಈತನ ಬಂಡವಾಳ. ಆರಡಿಗೂ ಮೀರಿದ ಎತ್ತರದ ನಿಲುವು ಬೋನಸ್ಸು. ಕಳ್ಳ ನೋಟ ಖಳನಟನಾಗಲು ಕ್ಯಾರೆಕ್ಟರ್‌ ಸರ್ಟಿಫಿಕೇಟ್‌. ಉದ್ದ ಕೂದಲು ಮಾಡರ್ನ್‌ ಮಾಡೆಲ್‌ ಎಂಬ ಪುರಾವೆಗೆ.

ರಂಗ ತಾಲೀಮು ನಡೆಸಿ, ಪಳಗಿದ ಪಾಂಡೆ ಛಾಪು ಮೂಡಿಸಿದ್ದು ಕಲಾತ್ಮಕ ಚಿತ್ರಗಳ ಮೂಲಕ. ಬ್ಯಾಂಡಿಟ್‌ ಕ್ವೀನ್‌ ನಂತರ ಭಾರೀ ಪ್ರಶಂಸೆ ಗಿಟ್ಟಿಸಿಕೊಂಡ ಗಾಡ್‌ಮದರ್‌ ಚಿತ್ರದಲ್ಲೂ ಚಿಕ್ಕ ಪಾತ್ರವನ್ನು ಸ್ವಚ್ಛವಾಗಿ ನಿರ್ವಹಿಸಿ ಸೈ ಎನಿಸಿಕೊಂಡ ಜಾಣ. ಔಝಾರ್‌ ಚಿತ್ರದ ಮೂಲಕ ಕಮರ್ಷಿಯಲ್‌ ಚಿತ್ರಗಳಿಗೂ ತಾನು ಸಲ್ಲುತ್ತೇನೆ ಎಂದು ಸಾಬೀತು ಮಾಡಿದ.

ಪಾಂಡೆ ಸಂಗೀತಗಾರನೂ ಹೌದು. ಗಬ್ಬರ್‌ ಮಿಕ್ಸ್‌ ಎಂಬ ಹುಡುಗಾಟಿಕೆಯ ಈತನ ಕೆಸೆಟ್ಟು ಸರಸರನೆ ಬಿಕರಿಯಾಯಿತು. ಎಲ್ಲೆಡೆಗೂ ಸಂದಿರುವ ನಿರ್ಮಲ್‌ ಪಾಂಡೆಯನ್ನು ಸ್ಯಾಂಡಲ್‌ವುಡ್‌ಗೆ ಕರೆತರುತ್ತಿರುವುದು ಶಿವಮಣಿ. ತಾವು ಖುದ್ದು ನಾಯಕನಾಗಿರುವ ಲವ್‌ ಯೂ ಸಿನಿಮಾಗಾಗಿ.

ಎಕೆ 47 ಚಿತ್ರದ ಆಶಿಶ್‌ ವಿದ್ಯಾರ್ಥಿ , ಆಯುಧ ಹಾಗೂ ಅಸುರ ಚಿತ್ರಗಳಲ್ಲಿ ನ ರಘುವರನ್‌ ಹೊರಗಿನಿಂದ ಬಂದು, ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಕಂಡವರು. ಈ ಯಾದಿಗೆ ಪಾಂಡೆ ಸೇರಿದರೂ ಅಚ್ಚರಿಯಿಲ್ಲ. ಪಾಂಡೆಯನ್ನು ಸಮರ್ಥವಾಗಿ ದುಡಿಸಿಕೊಳ್ಳಬೇಕಷ್ಟೆ. ಆ ಸಾಮರ್ಥ್ಯ ಶಿವಮಣಿಗೆ ಖಂಡಿತ ಇದೆ. ಅದಕ್ಕೇ ಖುದ್ದು ಇವರೇ ಅಂತರರಾಷ್ಟ್ರೀಯ ಖ್ಯಾತಿಯ ನಿರ್ಮಲ್‌ ಪಾಂಡೆಯನ್ನು ಆರಿಸಿರುವುದು.

ಅಂದಹಾಗೆ, ಪಾಂಡೆ ಕನ್ನಡಕ್ಕೆ ಬರುತ್ತಿರುವುದು ರಘುವರನ್‌ ಡೇಟ್ಸ್‌ ಸಿಗಲಿಲ್ಲ ಎಂಬ ಕಾರಣಕ್ಕೆ. ಶಿವಮಣಿ ಪ್ರಕಾರ ರಘುವರನ್‌ ಜಾಗ ತುಂಬಬಲ್ಲ ಸಮರ್ಥ ಪಾಂಡೆ.

English summary
Nirmal Pande to act in Kannada Cinema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada