Exclusive: 'ಲೀಡರ್ ರಾಮಯ್ಯ' ಬಯೋಪಿಕ್‌ನಲ್ಲಿ ನಟಿಸೋ ಆಸೆ ನನಗೂ ಇದೆ.. ಆದ್ರೆ..
ಕನ್ನಡ ಚಿತ್ರರಂಗದಲ್ಲಿ ಭಾರೀ ಬಯೋಪಿಕ್ ಚಿತ್ರವೊಂದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನವನ್ನಾಧರಿಸಿ ಸಿನಿಮಾ ಮಾಡುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಯಿದೆ. ಚಿತ್ರದಲ್ಲಿ ಸಿದ್ಧರಾಮಯ್ಯ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುವ ಬಗ್ಗೆ ಮಾತುಗಳು ಕೇಳಿಬರ್ತಿದೆ.
ಗಂಗಾವತಿ ಹಯಾತ್ ಪೀರ್ ಸಾಬ್ ನೇತೃತ್ವದ ಎಮ್. ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಲೀಡರ್ ರಾಮಯ್ಯ' ಹೆಸರಿನಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಅಂದಾಜು 50 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಸಿಎಂ ಸಿದ್ದರಾಮಯ್ಯ ಜೀವನ ಚರಿತ್ರೆಯನ್ನು ಜನರ ಮುಂದಿಡುವ ಬಗ್ಗೆ ಸುದ್ದಿಯಾಗ್ತಿದೆ. ನಿರ್ದೇಶಕ ಸತ್ಯರತ್ನಂ ಈಗಾಗಲೇ ಚಿತ್ರಕ್ಕಾಗಿ ಚಿತ್ರಕಥೆಯನ್ನು ಸಿದ್ಧಪಡಿಸಿದ್ದು ಕಲಾವಿದರ ಆಯ್ಕೆಯಲ್ಲಿ ತೊಡಗಿದ್ದಾರೆ. ಇನ್ನು ಚಿತ್ರದಲ್ಲಿ ಸಿದ್ದಾರಾಮಯ್ಯ ಅವರ ಯವ್ವನದ ದಿನಗಳಲ್ಲಿ ನಿರೂಪ್ ಭಂಡಾರಿ ನಟಿಸುವ ಸಾಧ್ಯತೆಯಿದೆ.

ಈಗಾಗಲೇ 'ಲೀಡರ್ ರಾಮಯ್ಯ' ಚಿತ್ರದ ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ ಅವರನ್ನು ನಟಿಸುವಂತೆ ಚರ್ಚಿಸಲಾಗಿದೆ. ಅವರು ಕೂಡ ಚಿತ್ರದಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ನನಗೆ ಅಪ್ರೋಚ್ ಮಾಡಿದ್ದಾರೆ ಅಷ್ಟೆ. ಇನ್ನು ಫೈನಲ್ ಆಗಿಲ್ಲ, ನಾನು ಸಹಿ ಕೂಡ ಮಾಡಿಲ್ಲ. ಆದರೆ ಅಷ್ಟರಲ್ಲಿ ಈ ಸುದ್ದಿ ಹೇಗೆ ಹೊರ ಬಂತು ಎನ್ನುವುದು ಗೊತ್ತಿಲ್ಲ. ಆದರೆ ಅಪ್ರೋಚ್ ಮಾಡಿರುವುದಂತೂ ನಿಜ"
"ಮೊದಲ ಭಾಗದಲ್ಲಿ ಸಿದ್ದರಾಮಯ್ಯ ಅವರ ಯವ್ವನದ ಕಥೆ ಇರುತ್ತದೆ. ಅದಕ್ಕೆ ನನ್ನನ್ನು ಅಪ್ರೋಚ್ ಮಾಡಿದ್ದಾರೆ. ಬಳಿಕ 2ನೇ ಭಾಗದಲ್ಲಿ ವಿಜಯ್ ಸೇತುಪತಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಇನ್ನು ಫೈನಲ್ ಮೀಟಿಂಗ್ ಆಗಬೇಕಿದೆ. ಮುಂದಿನ ಮೀಟಿಂಗ್‌ನಲ್ಲಿ ನಾನು ಮಾತನಾಡಿ ಹೇಳುತ್ತೇನೆ. ನನಗೂ ಒಂದಷ್ಟು ಬಹಿರಂಗ ಪ್ರಶ್ನೆಗಳಿವೆ. ಖಂಡಿತ ನನಗೆ ಬಯೋಪಿಕ್ ಮಾಡೋದಕ್ಕೆ ಬಹಳ ಇಷ್ಟ ಇದೆ. ಆದರೆ ಉತ್ತಮ ರೀತಿಯಲ್ಲಿ ಮಾಡಬೇಕು ಎಂದುಕೊಂಡಿದ್ದೇನೆ. ಇಷ್ಟು ದೊಡ್ಡ ಸಿನಿಮಾ ಮಾಡುವಾಗ ಕೊಂಚ ಎಚ್ಚರಿಕೆ ವಹಿಸಬೇಕು" ಎಂದಿದ್ದಾರೆ.
"ಸಂಪೂರ್ಣ ಸ್ಕ್ರಿಪ್ಟ್ ಕೇಳಿದ್ದೇನೆ. 'ಮಹಾನಟಿ' ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಆಗಬೇಕು. ಖ್ಯಾತನಾಮರ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಬಯೋಪಿಕ್ ಸಿನಿಮಾ ಅಂದಮೇಲೆ ಒಳ್ಳೆ ರೀತಿಯಲ್ಲಿ ಮಾಡಬೇಕು. ಸಿನಿಮ್ಯಾಟಿಕ್ ಆಗಿಯೂ ಚೆನ್ನಾಗಿ ತೆರೆಗೆ ಬರಬೇಕು. ನಾನು ಇನ್ನು ಸಂಪೂರ್ಣ ಸ್ಟ್ರಿಪ್ಟ್ ಕೇಳಿಲ್ಲ. ಮುಖ್ಯ ವಿಚಾರಗಳ ಬಗ್ಗೆ ಕೇಳಿದ್ದೇನೆ ಅಷ್ಟೆ. ಆ ಬಗ್ಗೆ ಚರ್ಚೆ ಆಗಿದೆ. ಇನ್ನು ಫೈನಲ್ ಮೀಟಿಂಗ್ ಆಗಬೇಕಿದೆ."
"ಮುಖ್ಯವಾಗಿ ಕನ್ನಡದಲ್ಲಿ 'ಲೀಡರ್ ರಾಮಯ್ಯ' ಸಿನಿಮಾ ಮಾಡೋಕೆ ಹೊರಟಿದ್ದಾರೆ. ಎಷ್ಟು ಭಾಷೆಗಳಲ್ಲಿ ಬರುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನನಗೂ ಇಲ್ಲ. ಸಿನಿಮಾ ಹೇಗೆ ಬರಬಹುದು ಎನ್ನುವ ಬಗ್ಗೆ ಒಂದಷ್ಟು ರೆಫರೆನ್ಸ್ ಹೇಳಿದ್ದಾರೆ. ನಿರ್ದೇಶಕರು ಸಿನಿಮಾ ಬಗ್ಗೆ ಹೇಳಿದ್ದು ಇಷ್ಟವಾಯಿತು. ಹಾಗಾಗಿ ನಾನು ಮುಂದುವರೆದಿದ್ದೇನೆ. ಮುಂದೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ನಿರೂಪ್ ಭಂಡಾರಿ ಮಾಹಿತಿ ನೀಡಿದ್ದಾರೆ.
'ಲೀಡರ್ ರಾಮಯ್ಯ' ಸಿನಿಮಾ ಬಗ್ಗೆ ಹೇಳುವುದಾದರೆ ಮಾರ್ಚ್‌ನಲ್ಲೇ ಪೋಸ್ಟರ್ ರಿಲೀಸ್ ಆಗಿತ್ತು. 'ಎ ಕಿಂಗ್ ರೈಸ್ಡ್ ಬೈ ದ ಪೀಪಲ್' ಎನ್ನುವ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಸಿಎಂ ಸಿದ್ದರಾಮಯ್ಯ ಸ್ವಂತ ಪರಿಶ್ರಮದಿಂದ ಎತ್ತರಕ್ಕೆ ಏರಿದವರು. ಅಹಿಂದ ನಾಯಕ, ಮಾಸ್ ಲೀಡರ್ ಎಂದೇ ಕರ್ನಾಟಕ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕುಗ್ರಾಮದಲ್ಲಿ ಹುಟ್ಟಿದ ಸಿದ್ದರಾಮಯ್ಯ ಎಲ್ಲಾ ಅಡೆತಡೆ ಮೆಟ್ಟಿ ಇದೀಗ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಹಿಂದೆ ಅವರು ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2013ರಿಂದ 2018ರವರೆಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದರು. ಅವರ ಸ್ಪೂರ್ತಿದಾಯಕ ಜೀವನಗಾಥೆಯನ್ನು 'ಲೀಡರ್ ರಾಮಯ್ಯ' ಚಿತ್ರದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











