ಯಶ್ ಜೊತೆ ಆಕ್ಟ್ ಮಾಡಬೇಕು, ಅವಕಾಶ ಕೊಡಿ ; ವೈರಲ್ ಚೆಲುವೆ 'ಹೂವಿನ ಬಾಣದಂತೆ' ಹುಡುಗಿ ನಿತ್ಯಾಶ್ರೀ ಆಸೆ ಒಂದೆರಡಲ್ಲ
ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ.ಕುರಿ ಕಾಯುತ್ತಾ ತನಗೆ ಇಷ್ಟಬಂದಂತೆ ಹಾಡುತ್ತಿದ್ದ ಹನುಮಂತ ''ಸರಿಪಮಪ ಸೀಸನ್ 15''ರ ರನ್ನರ್ ಅಪ್ ಆಗುವುದಲ್ಲದೇ ''ಬಿಗ್ ಬಾಸ್'' ಮನೆಯನ್ನು ಕೂಡ ಪ್ರವೇಶ ಮಾಡುತ್ತಾರೆ ಅಂದರೆ ತಮಾಷೆನಾ ? ಇನ್ನು ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದನೇ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್ ಅವರದ್ದು ಕೂಡ ಅದೃಷ್ಟನೇ.
ಇಷ್ಟೇ ಯಾಕೆ ''ರೇಲ್ವೆ ಸ್ಟೇಷನ್''ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಕೂಡ ಅದೃಷ್ಟವಲ್ಲದೇ ಮತ್ತೇನು ? ''ಮಹಾಕುಂಭ ಮೇಳ''ದ ಮೊನಾಲಿಸಾ ಕಥೆ ಕೂಡ ಭಿನ್ನವೇನು ಇಲ್ಲ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು.

ಈ ಸಾಲಿಗೆ ಈಗ ''ಹೂವಿನ ಬಾಣದಂತೆ'' ಹಾಡನ್ನು ಹಾಡಿ ವೈರಲ್ ಆದ ಯುವತಿ ನಿತ್ಯಾಶ್ರೀ ಕೂಡ ಸೇರಿಕೊಂಡಿದ್ದಾರೆ. ಹೌದು, ನಿತ್ಯಾಶ್ರೀ .. ''ಬಿರುಗಾಳಿ'' ಚಿತ್ರದ ಹಾಡಿನ ಮೂಲಕ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ಚೆಲುವೆ. ಕೆ.ಆರ್.ಪೇಟೆ ಮಚಿಲೆಕೊಪ್ಪಲು ಗ್ರಾಮದ ಬೆಡಗಿ. ಮಹಾರಾಣಿ ಕಾಮರ್ಸ್ ಕಾಲೇಜ್‌ನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ನಿತ್ಯಾಶ್ರೀ ಮೊನ್ನೆ ಅದ್ಯಾವ ದಿಕ್ಕಿನಲ್ಲಿ ಎದ್ದಿದ್ದರು ಎನ್ನುವುದು ಗೊತ್ತಿಲ್ಲ.
ಆದರೆ .. ಹಾಗೇ ಸುಮ್ಮನೆ ಇವರು ಇತ್ತೀಚೆಗೆ ಹಾಡಿದ್ದ ಹಾಡು ಇಂದು ಹಲವರ ಮೊಬೈಲ್‌ನಲ್ಲಿ ರಿಂಗಣಿಸುತ್ತಿದೆ. ವಿಡಿಯೋ ಲಕ್ಷಾನುಗಟ್ಟಲೆ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.
ಇನ್ನೂ.. ನಿಮಗೆ ಗೊತ್ತು, ಯಾರದ್ದಾದರೂ ಯಾವುದಾದರೂ ವಿಡಿಯೋ ವೈರಲ್ ಆದರೆ ಸಾಕು. ಹಲವರು ವಿಡಿಯೋದಲ್ಲಿರುವ ವ್ಯಕ್ತಿಯ ಕುಲ ಗೋತ್ರ ಹುಡುಕಲು ಶುರು ಮಾಡುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಅಥವಾ ಬೇರೆ ಸೋಶಿಯಲ್ ಮೀಡಿಯಾ ಪೇಜ್‌ನ ಲಿಂಕ್‌ಗಾಗಿ ತಡಕಾಡುತ್ತಾರೆ.
ಸದ್ಯ ನಿತ್ಯಾಶ್ರೀ ವಿಚಾರದಲ್ಲಿ ಕೂಡ ಇದೇ ಆಗಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬೆರಳಣಿಕೆಯಷ್ಟು ಇದ್ದ ಹಿಂಬಾಲಕರ ಸಂಖ್ಯೆ ಈಗ 36,000 ಗಡಿಯನ್ನು ದಾಟಿದೆ.
ಇಂಥಾ ನಿತ್ಯಾಶ್ರೀಯನ್ನು ಸದ್ಯ ಕನ್ನಡದ ಮಾಧ್ಯಮಗಳು ಕೂಡ ಬೆನ್ನು ಹತ್ತಿದ್ದು ನಿತ್ಯಾಶ್ರೀ ಎಲ್ಲರಿಗೆ ಸಂದರ್ಶನವನ್ನು ಕೊಡುತ್ತಿದ್ದಾರೆ. ಆ ಪೈಕಿ ''ನ್ಯೂಸ್ ಫಸ್ಟ್''ಗೆ ಸಂದರ್ಶನವನ್ನು ನೀಡಿರುವ ನಿತ್ಯಾಶ್ರೀ ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆನ್ನುವ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ.
ಈ ಕುರಿತು ''ನ್ಯೂಸ್ ಫಸ್ಟ್''ಗೆ ನೀಡಿರುವ ಸಂದರ್ಶದನದಲ್ಲಿ ಮಾತನಾಡಿರುವ ನಿತ್ಯಾಶ್ರೀ,ನಟಿಯಾಗಬೇಕು ಎನ್ನುವುದು ನನ್ನ ಜೀವಮಾನದ ಬಹುದೊಡ್ಡ ಕನಸು, ಯಾವ ಪಾತ್ರವಾದರೂ ಓಕೆ ಎಂದು ಹೇಳಿದ್ದಾರೆ. ಮುಂದುವರೆದು ಯಶ್ ಸರ್ ಜೊತೆ ತೆರೆ ಹಂಚಿಕೊಳ್ಳಬೇಕೆನ್ನುವ ಆಸೆ ಇದೆ ಪಾತ್ರ ಹೇಗಿದ್ದರೂ ಚಿಂತೆ ಇಲ್ಲ. ಸೈಡ್ ರೋಲ್ ಆದರೂ ಓಕೆ ಆದರೆ ಅವರ ಜೊತೆ ಆಕ್ಟ್ ಮಾಡಬೇಕೆನ್ನುವ ಆಸೆ ನನಗೆ ಇದೆ ಎಂದು ಹೇಳಿದ್ದಾರೆ.
ಇನ್ನೂ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಕೂಡ ನನಗೆ ಮೊದಲಿಂದ ಇದ್ದೇ ಇದೆ ಎಂದು ಹೇಳಿರುವ ನಿತ್ಯಾಶ್ರೀ ಅವಕಾಶ ಸಿಕ್ಕರೆ ಖಂಡಿತ ನಾನು ಚಿತ್ರರಂಗಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.
ತಮಗೆ ಸಿಕ್ಕ ಈ ಸಡನ್ ಜನಪ್ರಿಯತೆಯ ಕುರಿತು ಕೂಡ ಮಾತನಾಡಿರುವ ನಿತ್ಯಾಶ್ರೀ, ಮೊದಲಾದರೆ ನಾನು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಗುರುತು ಹಿಡಿಯುತ್ತಾರೆ. ಇಷ್ಟೇ ಅಲ್ಲ ಮೇಡಂ ನೀವೇ ಅಲ್ವಾ ಆ ಹಾಡು ಹಾಡಿದ್ದು ಎಂದು ನನ್ನ ಜೊತೆ ಸೆಲ್ಫಿ ಕೂಡ ತೆಗೆಸಿಕೊಳ್ಳುತ್ತಾರೆ. ಇದೆಲ್ಲ ನೋಡಿದಾಗ ನನಗೆ ಒಂದು ರೀತಿ ಹೆಮ್ಮೆಯಾಗುತ್ತೆ, ಇನ್ನೂ ಎತ್ತರಕ್ಕೆ ಬೆಳೆಯಬೇಕೆನ್ನುವ ಭಾವನೆ ಬರುತ್ತೆ ಎಂದು ಹೇಳಿದ್ದಾರೆ. ಚಿತ್ರರಂಗದವರು ನನಗೊಂದು ಅವಕಾಶ ಕೊಡಬೇಕು ಯಾಕೆಂದರೆ ಆಕ್ಟಿಂಗ್ ನನಗೆ ಇಷ್ಟ ಎಲ್ಲರಿಗೆ ಚಾನ್ಸ್ ಕೊಡ್ತಿದ್ದೀರಾ, ಹಾಗಿದ್ದ ಮೇಲೆ ನನಗೂ ಒಂದು ಅವಕಾಶ ಕೊಟ್ಟು ನೋಡಿ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











