ನಾನು ಅದೆಲ್ಲ ನೋಡುವುದೇ ಇಲ್ಲ, ಕಾಲೆಳೆಯೋರಿಗೆ ಖಡಕ್ ಉತ್ತರ ನೀಡಿದ ನಿವೇದಿತಾ ಗೌಡ...!
ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಅದು ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದಕ್ಕೆ ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ
ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ಕುಂತರೂ.. ನಿಂತರೂ.. ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಾ, ನಿತ್ಯ ನಿರಂತರವಾಗಿ ನಿವೇದಿತಾ ಗೌಡ ಟ್ರೋಲ್ ಆಗುತ್ತಿದ್ದಾರೆ. ಇನ್ನೂ.. ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರುತ್ತೆ. ಆದರೆ ನಿವೇದಿತಾ ಗೌಡ ಇದಕ್ಕೆ ತದ್ವಿರುದ್ದ. ಯಾರೇ ಕೂಗಾಡಲಿ.. ಸೋಶಿಯಲ್ ಮೀಡಿಯಾನೇ ಅಲ್ಲಾಡಲಿ.. ನನ್ನ ನೆಮ್ಮದಿಗೆ ಭಂಗ ಇಲ್ಲ ಎಂದು ಯಾರು ಎಷ್ಟೇ ಮಾತನಾಡಿದರೂ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ತಲೆ ಕೆಡಿಸಿಕೊಳ್ಳುವುದು ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ಗೌಡ ದಿನಕ್ಕೊಂದು ಅಲ್ಲದಿದ್ದರೂ ವಾರಕ್ಕೆ ಒಂದೆರಡು ವಿಡಿಯೋಗಳನ್ನಾದರೂ ಹಂಚಿಕೊಳ್ಳುತ್ತಾರೆ. ವಿಡಿಯೋ ಇಲ್ಲದಿದ್ದರೂ ಕೊನೆ ಪಕ್ಷ ಫೋಟೋವನ್ನಾದರೂ ಹಂಚಿಕೊಳ್ಳುತ್ತಾರೆ. ಈ ಮೂಲಕ ತಮ್ಮನ್ನು ಇಷ್ಟಪಡುವ ಅಭಿಮಾನಿಗಳ ಕಣ್ಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ.

ಇಂಥಾ ನಿವೇದಿತಾ ಗೌಡ ಈಗ ಕಾಲೆಳೆಯುವವರ ಬಗ್ಗೆ ಮಾತನಾಡಿದ್ದಾರೆ. ಕೊಳಕು ಕಾಮೆಂಟ್ ಮಾಡುವವರಿಗೆ ಉತ್ತರವನ್ನು ಕೂಡ ನೀಡಿದ್ದಾರೆ. ಹೌದು, ಗ್ಯಾರಂಟಿ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ನಿವೇದಿತಾ ಗೌಡ ತಮ್ಮನ್ನು ನಿಂದಿಸುವವರ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ನನಗೆ ಬರುವ ಕಾಮೆಂಟ್‌ಗಳನ್ನು ನಾನು ನೋಡುವುದಿಲ್ಲ ಎಂದಿರುವ ನಿವೇದಿತಾ ಅಪ್ಪಿ ತಪ್ಪಿ ನೋಡಿದರೂ ಕೂಡ ಏನೂ ಮಾಡೋಕಾಗಲ್ಲ ಎಂದಿದ್ದಾರೆ. ಎಲ್ಲರಿಗೆ ಅವರ ಅವರ ಅಭಿಪ್ರಾಯಗಳಿರುತ್ತಾವೆ, ನಾವು ಎಲ್ಲರ ಬಗ್ಗೆ ಯೋಚನೆ ಮಾಡುತ್ತಾ ಹೋದರೆ ನಾವೇನು ಮಾಡಲು ಸಾಧ್ಯ ಆಗುವುದಿಲ್ಲ ಎಂದು ಹೇಳಿದ್ದಾರೆ. ನನಗೇನು ಇಷ್ಟ ನನ್ನ ಖುಷಿಗೆ ಏನು ಮಾಡಬೇಕು ನಾನು ಅದನ್ನು ಮಾಡ್ತೀನಿ, ಇಷ್ಟ ಆದವರು ಇಷ್ಟ ಪಡ್ತಾರೆ, ಇಷ್ಟ ಆಗದೇ ಇದ್ದರೇ ಅದು ಅವರ ಅಭಿಪ್ರಾಯ ಎಂದು ಹೇಳಿದ್ದಾರೆ.
ಮುಂದುವರೆದು ತೀರಾ ಕೆಟ್ಟಾ ಕೊಳಕು ಕಾಮೆಂಟ್ ಮಾಡಿದರೆ ಅದು ಅವರ ಮನಸ್ಥಿತಿಯನ್ನು ತೋರಿಸುತ್ತೆ. ಅವರ ಸಂಸ್ಕಾರವನ್ನು ತೋರಿಸುತ್ತೆ ಎಂದಿರುವ ನಿವೇದಿತಾ ಗೌಡ ಯಾರು ಯಾರಿಗೂ ನೋವು ಕೊಡಬಾರದು ಆದರೂ ನೋವು ಕೊಡುತ್ತಾರೆ ಅಂದರೆ ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ತಮ್ಮ ಸಹೋದರನ ಬಗ್ಗೆ ಕೂಡ ಮಾತನಾಡಿರುವ ನಿವೇದಿತಾ ನಾವು ಇಬ್ಬರು ದಿನನಿತ್ಯ ಜಗಳ ಮಾಡ್ತಾನೇ ಇರ್ತಿವಿ ಎಂದು ಹೇಳಿದ್ದಾರೆ. ಅವನು ನನಗಿಂತ ವಯಸ್ಸಿನಲ್ಲಿ ಚಿಕ್ಕವನು ಆದರೆ ನನ್ನ ಪಾಲಿಗೆ ಅವನು ದೊಡ್ಡಣ್ಣ ಇದ್ದಂತೆ ಎಂದು ಹೇಳಿದ್ದಾರೆ. ನನ್ನ ಬಗ್ಗೆ ತುಂಬಾ ಕಾಳಜಿ ಇದೆ ಅವನಿಗೆ ಎಂದಿರುವ ನಿವೇದಿತಾ ಅವನದ್ದು ಕೇರಿಂಗ್ ವ್ಯಕ್ತಿತ್ವ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಟಿಸಿರುವ ನಿವೇದಿತಾ ಗೌಡ ತೆಲುಗಿನಲ್ಲಿ ಒಂದು ಆಲ್ಬಂ ಹಾಡೊಂದರಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.ತೆಲುಗಿನಲ್ಲಿ ವಾಲು ಕಳ್ಳತಾ ಹೆಸರಿನಲ್ಲಿ ಹೊರ ಬರಲಿರುವ ಈ ಹಾಡಿಗೆ ಕನ್ನಡದಲ್ಲಿ ಮನಸಾರೆ ನಿನ್ನ ಎಂದು ಹೆಸರಿಡಲಾಗಿದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಮಿಕ್ಕಂತೆ ನಿವೇದಿತಾ ಗೌಡ ಅವರಿಗೆ ಬೇರೆ ಬೇರೆ ಭಾಷೆಯಿಂದ ಕೂಡ ಅವಕಾಶಗಳು ಅರಸಿ ಬರುತ್ತಿವೆ.


Click it and Unblock the Notifications











