ಜೈಲಿನಲ್ಲಿ ರೇ*ಪಿಸ್ಟ್‌ಗೆ ಇರುವ ವಿಶೇಷ ಸೌಲಭ್ಯ , ದರ್ಶನ್‌ಗೆ ಯಾಕಿಲ್ಲ - ವಕೀಲರ ವಾದ..!
ಹೆಚ್ಚೇನು ಇಲ್ಲ. ಎರಡು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ಇದ್ದವರು ದರ್ಶನ್. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ನೆಮ್ಮದಿಯಿಂದ ಇದ್ದರು.
ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಒಂದೇ ಒಂದು ಹಾಸಿಗೆ ಮತ್ತು ದಿಂಬಿಗೆ ಅಂಗಲಾಚುತ್ತಿದ್ದಾರೆ.

ನೋ ಡೌಟ್.. ಪರಪ್ಪನ ಅಗ್ರಹಾರದ ಪಾಲಾಗಿರುವ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ.ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.
ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ. ಇಂಥಾ ದರ್ಶನ್‌ಗೆ ಹಾಸಿಗೆ-ದಿಂಬು ಸಿಗುತ್ತಾ..? ಈ ಪ್ರಶ್ನೆಗೆ ಉತ್ತರ ಅಕ್ಟೋಬರ್ 9ರಂದು ಸಿಗಲಿದೆ.
ಹೌದು, ಇಂದು (ಸೆಪ್ಟೆಂಬರ್ 30 ) ದರ್ಶನ್‌ಗೆ ಹೆಚ್ಚುವರಿ ಹಾಸಿಗೆ ದಿಂಬು ನೀಡದ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದೆ. ಇನ್ನು ಕಳೆದ ಬಾರಿ ವಿಚಾರಣೆ ನಡೆದ ಸಮಯದಲ್ಲಿ ನ್ಯಾಯಾಲಯ ಜೈಲು ಅಧೀಕ್ಷಕರು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.
ಈ ಹಿನ್ನೆಲೆ ಇಂದು ವಿಚಾರಣೆಗೆ ಖುದ್ದು ಜೈಲು ಅಧೀಕ್ಷಕ ಸುರೇಶ್ ಅವರು ಹಾಜರಾಗಿದ್ದರು. ಈ ಸಮಯದಲ್ಲಿ ಜೈಲು ಅಧೀಕ್ಷಕರ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಜೈಲಿನ ನಿಯಮದ ಪ್ರಕಾರವಾಗಿಯೇ ದರ್ಶನ್ ಅವರಿಗೆ ಎಲ್ಲಾ ಸೌಲಭ್ಯವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಮಲಗಲು ''ಪಲ್ಲಂಗ'' ಕೊಡಿ ಎಂದು ಕೇಳಿದರೆ ಹೇಗೆ..? ಎಂದು ಪ್ರಶ್ನೆ ಮಾಡಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಎಲ್ಲವನ್ನೂ ಕೊಡೋದಕ್ಕೆ ನಮಗೆ ಪ್ರಾವಿಷನ್ ಇಲ್ಲ ಎಂದು ಹೇಳಿದ್ದಾರೆ. ಬೆಳಗ್ಗೆ ಮತ್ತು ಸಂಜೆ 1 ಗಂಟೆ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಆರೋಪಿ ಕೇಳಿದ ಬ್ಯಾರಕ್ ಕೊಡೋದಕ್ಕೆ ಆಗುವುದಿಲ್ಲ ಎಂದು ವಾದ ಮಾಡಿದ್ಧಾರೆ. ಅವರು ಕೇಳಿದಂತೆ ಎಲ್ಲಾ ಬಿಸಿಲು ಬರುವ ಜಾಗಕ್ಕೆ ಕಳುಹಿಸಲು ಸಾಧ್ಯ ಇಲ್ಲ, ಹಕ್ಕಿದೆ ಎನ್ನುವ ಕಾರಣಕ್ಕೆ ಜೈಲಿನ ನಿಯಮವನ್ನು ಮೀರಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಎಸ್‌ಪಿಪಿ ಪ್ರಸನ್ನ ಕುಮಾರ್ ಅವರ ಈ ವಾದಕ್ಕೆ ಪ್ರತಿವಾದ ಮಾಡಿದ ದರ್ಶನ್ ಪರ ವಕೀಲ ಸುನೀಲ್ ಬ್ಯಾರಕ್ ಒಳಗೆ ಅರ್ಧ ಗಂಟೆ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೊರಗಡೆ ಓಡಾಡಲು ಅವಕಾಶ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ನಾವೇನು ''ಚಿನ್ನದ ಮಂಚ''ವನ್ನು ಕೇಳುತ್ತಿಲ್ಲ. ದರ್ಶನ್ ಅವರನ್ನು ಕ್ವಾರೆಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆ. ಬೇರೆ ಯಾರನ್ನೂ ಅಲ್ಲಿ ಇಟ್ಟಿಲ್ಲ ಎಂದು ತಮ್ಮ ಸಮಾಧಾನ ಹೊರ ಹಾಕಿದ ಸುನೀಲ್ ಇದನ್ನು ಪ್ರಶ್ನೆ ಮಾಡಿದರೆ ಸೆಲೆಬ್ರಿಟಿ ರಕ್ಷಣೆಗೆ ಕ್ರಮ ಎಂದು ಹೇಳುತ್ತಿದ್ದಾರೆ. ಆದರೆ ಅವರನ್ನು ಉಗ್ರರನ್ನು ಇರಿಸುವ ಸೆಲ್ ನಲ್ಲಿ ಇರಿಸಿದ್ದಾರೆ ಎಂದು ವಾದಿಸಿದ್ದಾರೆ.
ಮುಂದುವರೆದು ಕೇಂದ್ರ ಸರ್ಕಾರದ ಜೈಲು ಕೈಪಿಡಿಯಲ್ಲಿರುವ ನಿಯಮಗಳನ್ನು ಇಲ್ಲಿ ಪಾಲಿಸುತ್ತಿಲ್ಲ ಎಂದು ಹೇಳಿದ ದರ್ಶನ್ ಪರ ವಕೀಲರಾದ ಸುನೀಲ್ ಕೈದಿಗೆ ಉತ್ತಮ ಆಹಾರ.. ಗಾಳಿ.. ಬೆಳಕು ಸಿಗಬೇಕೆನ್ನುವ ನಿಯಮ ಜೈಲಿನ ಕೈಪಿಡಿಯಲ್ಲಿದೆ. ಅದ್ಯಾಗ್ಯೂ ಈ ನಿಯಮದ ಪಾಲನೆ ಇಲ್ಲಿ ಮಾಡಲಾಗುತ್ತಿಲ್ಲ ಎಂದು ಹೇಳಿದ್ಧಾರೆ.
ತಮ್ಮ ವಾದದಲ್ಲಿ ಕಾಮಾಂಧ ಉಮೇಶ ರೆಡ್ಡಿ ಅವರ ಹೆಸರನ್ನು ಕೂಡ ಉಲ್ಲೇಖಿಸಿದ ದರ್ಶನ್ ಪರ ವಕೀಲರಾದ ಸುನೀಲ್, ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ನೀಡಿದ್ದಾರೆ. ಆದರೆ ದರ್ಶನ್‌ಗೆ ಮಾತ್ರ ಯಾವ ಸೌಲಭ್ಯವನ್ನು ಕೂಡ ಕೊಡುತ್ತಿಲ್ಲ ಎಂದು ಹೇಳಿದ್ದಾರೆ. ಜೈಲು ಸೇರಿ ತಿಂಗಳ ಮೇಲಾದರೂ ಕೂಡ ದರ್ಶನ್ ಅವರನ್ನು ಈಗಲೂ ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ ಎಂದು ಹೇಳಿರುವ ಸುನೀಲ್ ನಿಯಮಗಳ ಪ್ರಕಾರ 14 ದಿನಗಳು ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿ ಇಡಬಹುದು ಆದರೆ ಇಲ್ಲಿ ಸಂಪೂರ್ಣ ತದ್ವಿರುದ್ದ ಇದಕ್ಕೆ ಕಾರಣವೇನು ಎಂದು ಕೂಡ ವಾದ ಮಂಡಿಸಿದ್ದಾರೆ.
ಅವರಿಗೊಂದು ಸವಲತ್ತು ನಮಗೊಂದು ಸವಲತ್ತು ಎಂದು ತಮ್ಮ ಅಸಮಾಧಾನವನ್ನೂ ಹೊರ ಹಾಕಿದ ದರ್ಶನ್ ಪರ ವಕೀಲ ಸುನೀಲ್ಇಡೀ ದೇಶದಲ್ಲಿ ಪಾಲನೆ ಆಗದಿರುವ ವಿಚಾರಗಳೆಲ್ಲಾ ದರ್ಶನ್ ಅವರಿಗೆ ಮಾತ್ರ ಇಲ್ಲಿ ಅನ್ವಯವಾಗುತ್ತಿವೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ಯಾವ ಸೌಲಭ್ಯ ಸವಲತ್ತು ಕೊಡದೇ ಇದ್ದರೂ ಪರವಾಗಿಲ್ಲ ಟ್ರಯಲ್ ನಡೆದು ದರ್ಶನ್ ಬಿಡುಗಡೆ ಆಗಿಯೇ ಆಗುತ್ತಾರೆ ಎಂದು ಕೂಡ ಸುನೀಲ್ ಹೇಳಿದ್ದಾರೆ.
ಸದ್ಯ ಎರಡು ಕಡೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಹಾಸಿಗೆ-ದಿಂಬು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.


Click it and Unblock the Notifications











